Advertisement

ಆಟೋ ಮ್ಯಾಟಿಕ್‌ ಕಾರು ಚಾಲನೆ ಈಗ ಸುಲಭ

03:13 PM May 18, 2019 | mahesh |

ಮನೆಗೊಂದು ಕಾರಿರಬೇಕು. ಕಾರಿನ ಚಾಲನೆ ಮನೆಮಂದಿಗೆಲ್ಲ ತಿಳಿದಿರಬೇಕು ಎಂಬುದು ಎಲ್ಲರ‌ ಕನಸು. ಕಾರು ಚಾಲನೆ ಮಹಿಳೆಯರಿಗೆ ತುಸು ಕಷ್ಟವೇ. ಹೇಗಾದರೂ ಕಾರು ಚಾಲನೆ ಕಲಿಯಲೇಬೇಕು, ಲಾಂಗ್‌ ಡ್ರೈವ್‌ ತೆರಳಿ ಖುಷಿ ಪಡಬೇಕು ಎಂಬುದು ಬಹು ತೇಕ ಮಹಿಳೆಯರ ಮನದಿಚ್ಛೆ. ಕಾರು ಓಡಿಸುವುದು ಈಗ ಕಷ್ಟವಲ್ಲ. ಆಟೋಮ್ಯಾಟಿಕ್‌ ಕಾರುಗಳು ಮಾರುಕಟ್ಟೆಗೆ ಬಂದಿದ್ದು, ಇವು ಮಹಿಳೆಯರ ಸ್ನೇಹಿ ಎನ್ನುವಂತಿದೆ.

Advertisement

ಕ್ಲಚ್‌, ಬ್ರೇಕ್‌, ಗೇರ್‌, ಎಕ್ಸಲೇಟರ್‌ಗಳ ಮೇಲೆ ಏಕಾಗ್ರತೆ ಇಟ್ಟು ಕಾರು ಓಡಿಸುವ ಕಾಲ ಮುಗಿದಿದೆ. ಈಗೇನಿದ್ದರೂ ಕೇವಲ ಆಟೋಮ್ಯಾಟಿಕ್‌. ಕಾರಿನಲ್ಲಿರುವ ಬಟನ್‌ಗಳನ್ನು ಬಳಸಿದರೆ ಸಾಕು. ಕ್ಲಚ್‌, ಬ್ರೇಕ್‌ ಯಾವುದೆಂದು ನೆನಪಿಡುವ ಅಗತ್ಯವಿಲ್ಲ. ಈಗ ಇಂತಹ ಕಾರುಗಳಿಗೆ ಮಂಗಳೂರಿನಲ್ಲಿ ಬೇಡಿಕೆ ಹೆಚ್ಚುತ್ತಿದೆ.

ವಿವಿಧ ಕಾರು ತಯಾರಿಕಾ ಕಂಪೆನಿಗಳು ಕೆಲವು ವರ್ಷಗಳಿದಿಂದೀಚೆಗೆ ಅಟೋಮ್ಯಾಟಿಕ್‌ ಕಾರುಗಳನ್ನು ತಯಾರಿಸಿವೆ. ಬೆಂಗಳೂರಿನಂತಹ ಟ್ರಾಫಿಕ್‌ ಭರಿತ ನಗರಗಳಲ್ಲಿ ಈ ಕಾರು ಬಹಳ ಅವಶ್ಯವಾಗಿತ್ತು ಹಾಗೂ ಬೇಡಿಕೆ ಹೆಚ್ಚಿತ್ತು. ಮಂಗಳೂರು ನಗರಕ್ಕೆ ಬಟನ್‌ ಚಾಲಿತ ಅಟೋಮ್ಯಾಟಿಕ್‌ ಕಾರುಗಳು ಪರಿಚಯವಾದದ್ದು ಒಂದೂವರೆ ವರ್ಷದ ಹಿಂದೆ. ಆದರೆ ಈ ಮಾದರಿಯ ಕಾರು ಹೊಸತಾದ್ದರಿಂದ ಆರಂಭಿಕ ದಿನಗಳಲ್ಲಿ ಜನ ಖರೀದಿಸಲು ಅಷ್ಟೊಂದು ಆಸಕ್ತಿ ವಹಿಸುತ್ತಿರಲಿಲ್ಲ. ಆದರೆ, ಬರಬರುತ್ತಾ ಇತರ ಕಾರುಗಳಂತೆ ಬಟನ್‌ಚಾಲಿತ ಕಾರುಗಳಿಗೆ ಬೇಡಿಕೆ ಹೆಚ್ಚಾಗತೊಡಗಿವೆ. ವಿಶೇಷವಾಗಿ ಮಹಿಳೆಯರು ಈ ಕಾರು ಕೊಂಡುಕೊಳ್ಳಲು ಆಸಕ್ತರಾಗುತ್ತಿದ್ದಾರೆ.

ಕಾರಿನಲ್ಲಿ ಅಂಥದ್ದೇನಿದೆ?
ಬಟನ್‌ಚಾಲಿತವಾಗಿರುವ ಆಟೋಮ್ಯಾಟಿಕ್‌ ಕಾರುಗಳ ಸ್ಟೇರಿಂಗ್‌ ಜಾಗದಲ್ಲಿ ಮತ್ತು ಮುಂಭಾಗದಲ್ಲಿ ಬಟನ್‌ ಸರ್ಚ್‌ಗಳಿರುತ್ತವೆ. ಅಲ್ಲದೆ ಆಯಾ ಬಟನ್‌ ಬಳಿ ಯಾವ ಬಟನ್‌ ಒತ್ತಿದರೆ ಕಾರಿನ ಚಲನೆ ಏನೆಂಬುದು ಸ್ಪಷ್ಟವಾಗಿ ಬರೆದಿರುತ್ತದೆ. ಓವರ್‌ಟೇಕ್‌ ಸಂದರ್ಭ ಅಥವಾ ಇತರ ಕಠಿನ ಸಂದರ್ಭದಲ್ಲಿ ಮ್ಯಾನುವಲ್‌ ಆಪ್ಶನ್‌ ಮೂಲಕ ಗೇರ್‌ ಬದಲಾಯಿಸುವ ಅವಕಾಶವಿದೆ. ಕ್ಲಚ್‌ ಒತ್ತುವ ಪ್ರಮೇಯವೇ ಇದರಲ್ಲಿ ಬರುವುದಿಲ್ಲ. ಎಕ್ಸಲೇಟರ್‌ ನೀಡದೆ ನಿಧಾನ ಚಲನೆ, ವೇಗದ ಚಲನೆಗೆ ಅವಕಾಶವಿದೆ. ಅಪಘಾತದ ಸಂದರ್ಭ ಎದುರಾದಾಗ ಎಕ್ಸಲೇಟರ್‌, ಬ್ರೇಕ್‌ ಎಂದೆಲ್ಲ ಹುಡುಕಾಡದೇ ನೀಡಲಾಗಿರುವ ಆಪ್ಶನ್‌ ಒತ್ತಿ ಕಾರನ್ನು ಸುಲಭವಾಗಿ ನಿಯಂತ್ರಣಕ್ಕೆ ತರಬಹುದು. ಏರು ರಸ್ತೆ, ಸಿಗ್ನಲ್‌ನಲ್ಲಿ ನಿಲ್ಲಿಸಿದಾಗ ಕೆಲವೊಮ್ಮೆ ಕಾರು ನಿಂತು ಬಿಡುವುದು ಬಹುತೇಕ ಎಲ್ಲ ಕಾರು ಮಾಲಕರಿಗೆ ಕಿರಿಕಿರಿಯಾಗುವಂತದ್ದು. ಆದರೆ, ಇದರಲ್ಲಿ ಬಂದ್‌ ಬೀಳುವ ಪ್ರಮೇಯವಿಲ್ಲ. ಒಟ್ಟಿನಲ್ಲಿ ಇವು ಮಹಿಳಾಸ್ನೇಹಿಯಾಗಿ ತಯಾರಿಸಲ್ಪಟ್ಟಿವೆ. ಪುರುಷರಿಗೂ ಇದು ಪ್ರಿಯವಾಗತೊಡಗಿದೆ.

ಆರು ಲಕ್ಷ ರೂ.ಗಳಿಂದ ಆರಂಭ
ಪ್ರಾರಂಭದಲ್ಲಿ ಮಾರುತಿ ಕಂಪೆನಿ ಈ ಕಾರುಗಳನ್ನು ಪರಿಚಯಿಸಿತು. ಆನಂತರ ಬಹು ತೇಕ ಎಲ್ಲ ಕಾರು ತಯಾರಿಕಾ ಕಂಪೆನಿಗಳು ಕೂಡ ಬಟನ್‌ಚಾಲಿತ ಅಟೋಮ್ಯಾಟಿಕ್‌ ಕಾರುಗಳನ್ನು ಸಿದ್ಧಪಡಿಸಲು ಆರಂಭಿಸಿವೆ. ಹೊಸ ಮಾದರಿಯ ಆಲ್ಟೋ, ಸೆಲೆರಿಯೋ, ವ್ಯಾಗನರ್‌, ಸ್ವಿಫ್ಟ್‌, ಎರ್ಟಿಗಾ ಸಹಿತ ವಿವಿಧ ರೀತಿಯ ಕಾರುಗಳಲ್ಲಿ ಅಟೋಮ್ಯಾಟಿಕ್‌ ಸಿಸ್ಟಮ್‌ ಚಾಲ್ತಿಗೆ ಬಂದಿದೆ. ಈ ಕಾರುಗಳಬೆಲೆ ಆರು ಲಕ್ಷ ರೂ.ನಿಂದ ಆರಂಭವಾಗುತ್ತದೆ.

Advertisement

ಮಹಿಳೆಯರಿಗೆ ಅನುಕೂಲಕರ
ಮಂಗಳೂರಿನಲ್ಲಿ ಕಳೆದ ಒಂದೂವರೆ ವರ್ಷದಿಂದ ಬಟನ್‌ ಚಾಲಿತ ಆಟೋಮ್ಯಾಟಿಕ್‌ ಕಾರುಗಳನ್ನು ಪರಿಚಯಿಸಲಾಗಿದೆ. ಆರಂಭದಲ್ಲಿ ಬೇಡಿಕೆ ಕಡಿಮೆ ಇತ್ತು. ಆದರೆ ಈಗ ಇತರ ಕಾರುಗಳಂತೆಯೇ ಈ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ವಿಶೇಷವಾಗಿ ಮಹಿಳೆಯರಿಗೆ ಇದು ಅನುಕೂಲಕರವಾಗಿದೆ ಎನ್ನುತ್ತಾರೆ ಶೋರೂಂ ಒಂದರ ಸಿಬಂದಿ ಪ್ರದೀಪ್‌.

ಸುಗಮ ಸಂಚಾರದ ಅನುಭವ
ಮೊದಲ ಬಾರಿಗೆ ಕಾರು ಮಾರುಕಟ್ಟೆಗೆ ಪರಿಚಯವಾದಾಗ ಪೆಟ್ರೋಲ್‌ ಕಾರುಗಳು ಮಾತ್ರ ಇದ್ದವು. ಆದರೆ, ಬೇಡಿಕೆ ಮತ್ತು ಯಶಸ್ಸು ಹೆಚ್ಚಾದಾಗ ಕಾರು ತಯಾರಿಕಾ ಕಂಪೆನಿಗಳು ಡೀಸೆಲ್‌ ಕಾರುಗಳನ್ನೂ ಇದೇ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿವೆ. ಇದರಿಂದ ಎರಡೂ ರೀತಿಯ ವಾಹನಗಳಲ್ಲಿ ಈಗ ಬಟನ್‌ ಮೂಲಕ ಸುಗಮ ಸಂಚಾರ ಅನುಭವಿಸಲು ಗ್ರಾಹಕರಿಗೆ ಸಾಧ್ಯವಾಗಿದೆ.

ಚಾಲನೆ ಸುಲಭ
ಡ್ರೈವ್‌ ಮಾಡುವಾಗ ಮುಖ್ಯವಾಗಿ ಟ್ರಾಫಿಕ್‌ ಹೆಚ್ಚಿದ್ದಾಗ, ಅಡ್ಡಾದಿಡ್ಡಿ ರಸ್ತೆಯಲ್ಲಿ ನಾವು ಹೆಚ್ಚು ಗೊಂದಲಕ್ಕೊಳಗಾಗುತ್ತೇವೆ. ಎಲ್ಲಿ ಅಪಘಾತವಾಗುವುದೋ ಎನ್ನುವ ಭಯ ಕಾಡುತ್ತದೆ. ಆದರೆ ಆಟೋಮ್ಯಾಟಿಕ್‌ ಕಾರುಗಳು ಚಾಲನೆಯನ್ನು ಸುಲಭಗೊಳಿಸಿವೆ. ಏನೇ ಆದರೂ ಒಂದು ಬಟನ್‌ ಒತ್ತಿದರೆ ಸಾಕು ಕಾರು ನಿಯಂತ್ರಣಕ್ಕೆ ಸಿಗುವುದರಿಂದ ಚಾಲನೆ ವೇಳೆ ಯಾವುದೇ ಗೊಂದಲ ಉಂಟಾಗುವುದಿಲ್ಲ.
– ರಶ್ಮೀ, ಮಂಗಳೂರು

-  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next