Advertisement

ಆಟೋ ಚಾಲಕರ ಮುಷ್ಕರ

08:11 AM Jun 25, 2019 | Suhan S |

ಗದಗ: ಆಟೋಗಳಲ್ಲಿ ಆರಕ್ಕಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಕರೆದೊಯ್ಯುವಂತ್ತಿಲ್ಲ ಎಂಬ ಜಿಲ್ಲಾ ಪೊಲೀಸ್‌ ಇಲಾಖೆ ಆದೇಶವನ್ನು ಖಂಡಿಸಿ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಆಟೋ ಚಾಲಕರ ಸಂಘಟನೆಗಳು ಕರೆ ನೀಡಿದ್ದ ಮುಷ್ಕರದಿಂದಾಗಿ ಸೋಮವಾರ ವಿದ್ಯಾರ್ಥಿಗಳ ಪೋಷಕರು ಪರದಾಡಿದರು.

Advertisement

ಅವಳಿ ನಗರದಲ್ಲಿ ಸುಗಮ ಸಂಚಾರಕ್ಕೆ ಅನುವು ಒತ್ತು ನೀಡುವುದರೊಂದಿಗೆ ವಾಹನ ಸಂಚಾರಿ ನಿಮಯಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾ ಪೊಲೀಸ್‌ ಇಲಾಖೆ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಆಟೋಗಳಲ್ಲಿ ಕುರಿ ಹಿಂಡಿನಂತೆ 10-20 ಮಕ್ಕಳನ್ನು ತುಂಬು ಆಟೋ ಚಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿತ್ತು. ಆದರೂ, ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜೀವಗಾಂಧಿ ನಗರ ಪೊಲೀಸ್‌ ಠಾಣೆ, ಶಹರ ಪೊಲೀಸ್‌ ಠಾಣೆ ಹಾಗೂ ಸಂಚಾರಿ ಠಾಣೆ ಪೊಲೀಸರು ಕೆಲ ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ.

ಅಲ್ಲದೇ, 6ಕ್ಕಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಸಾಗಿಸುವ ಆಟೋಗಳನ್ನು ವಶಕ್ಕೆ ಪಡೆಯುವುದಾಗಿ ಪೊಲೀಸರ ಕಟ್ಟುನಿಟ್ಟಿನ ಎಚ್ಚರಿಕೆ ಹಿನ್ನೆಲೆಯಲ್ಲಿ ಸೋಮವಾರ ಶಾಲಾ ಮಕ್ಕಳನ್ನು ಕರೆದೊಯ್ಯದೇ ಆಟೋ ಚಾಲಕರು ಮುಷ್ಕರ ನಡೆಸಿದರು. ಪರಿಣಾಮ ಮಕ್ಕಳ ಪೋಷಕರೇ ತಮ್ಮ ವಾಹನಗಳಲ್ಲಿ ಶಾಲೆಗೆ ಬಿಟ್ಟು ಬರುವಂತಾಯಿತು.

ಪೋಷಕರ ಪರದಾಟ: ವಿವಿಧ ಆಟೋ ಚಾಲಕರು ಮತ್ತು ಮಾಲೀಕರ ಸಂಘಟನೆಗಳ ಕರೆ ಮೇರೆಗೆ ಸೋಮವಾರ ಶಾಲಾ ಮಕ್ಕಳನ್ನು ಕೊರೆದೊಯ್ಯುವ ಆಟೋಗಳು ಸೇವೆ ಒದಗಿಸಲಿಲ್ಲ. ಈ ಕುರಿತು ಪೂರ್ವ ಪರ ಮಾಹಿತಿಯಿದ್ದ ಪೋಷಕರು, ಮುಂಜಾಗ್ರತೆಯಿಂದ ತಾವೇ ಖುದ್ದಾಗಿ ಶಾಲೆಗಳಿಗೆ ತಲುಪಿಸಿದರು. ಇನ್ನೂ, ಕೆಲವರು ನೆರೆ-ಹೊರೆಯರ ದ್ವಿಚಕ್ರ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸಿದರು. ಆಟೋ ಚಾಲಕರು ಮುಷ್ಕರ ನಡೆಸಿದ್ದರಿಂದ ಕೆಲವರು ಒಂದೇ ಬೈಕ್‌ನಲ್ಲಿ ಗರಿಷ್ಠ 6 ಮಕ್ಕಳು, ಅವರ ಊಟದ ಡಬ್ಬಿಗಳೊಂದಿಗೆ ಬೈಕ್‌ ಚಲಾಯಿಸಲಾಗದೇ ಹೈರಾಣಾದರು.

ಇನ್ನುಳಿದಂತೆ ಒಂದೇ ಬೈಕ್‌ನಲ್ಲಿ ಇಬ್ಬರು, ಮೂವರು ಮಕ್ಕಳನ್ನು ಕರೆದೊಯ್ಯುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿತ್ತು. ಸ್ವಂತ ವಾಹನದ ಸೌಲಭ್ಯ ಇಲ್ಲದ ಹಾಗೂ ಅನತಿ ದೂರದಲ್ಲಿ ಮನೆ ಇರುವ ಮಕ್ಕಳು ಅಜ್ಜಿ, ಚಿಕ್ಕಮ್ಮ, ಅತ್ತೆ, ಅದೇ ಮಾರ್ಗದಲ್ಲಿ ಸಾಗುವ ಶಿಕ್ಷಕಿಯರೊಂದಿಗೆ ಶಾಲೆಗಳತ್ತ ಹೆಜ್ಜೆ ಹಾಕಿದರು.

Advertisement

ಅನಿರೀಕ್ಷಿತವಾಗಿ ಆಟೋ ಚಾಲಕರು ಮುಷ್ಕರ ನಡೆಸಿದ್ದರಿಂದ ಕೆಲ ಪೋಷಕರು ಪೇಚಿಗೆ ಸಿಲುಕಿದರು. ಮಕ್ಕಳನ್ನು ದೂರದ ಶಾಲೆಗಳಿಗೆ ತಲುಪಿಸಿ, ಎದ್ದೂ ಬಿದ್ದು ತಮ್ಮ ಕೆಲಸ ಕಾರ್ಯಗಳತ್ತ ಓಡಿದರು. ಸಂಜೆ ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆ ತರುವಾಗಗಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಶಾಲೆ ಬಿಡುವುದಕ್ಕೂ ಮುನ್ನವೇ ಅನೇಕರು ತಮ್ಮ ಬೈಕ್‌, ಕಾರುಗಳಲ್ಲಿ ಬಂದು ತಮ್ಮ ಮಕ್ಕಳಿಗಾಗಿ ಕಾದು ನಿಲ್ಲುವಂತಾಯಿತು.

ಜೀವನ ನಡೆಸೋದು ಕಷ್ಟ:

ಅವಳಿ ನಗರದಲ್ಲಿ 30ಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದು, ಸುಮಾರು 300 ಆಟೋಗಳು ಮಕ್ಕಳನ್ನು ಶಾಲೆಗೆ ತಲುಪಿಸುತ್ತವೆ. ಶಾಲೆಯ ದೂರಕ್ಕೆ ಅನುಗುಣವಾಗಿ ಒಂದು ಮಗುವಿಗೆ 250ರಿಂದ 400 ರೂ. ನೀಡುತ್ತಾರೆ. ಅದಕ್ಕಿಂತ ಹೆಚ್ಚಿನ ಹಣ ಕೊಡುವುದಿಲ್ಲ. ಹೀಗಾಗಿ ಒಂದು ಆಟೋದಲ್ಲಿ 8-9 ಮಕ್ಕಳನ್ನು ಕೂರಿಸಿಕೊಳ್ಳುತ್ತೇವೆ. ಆದರೆ, ಆರೇ ಮಕ್ಕಳನ್ನು ಕೂರಿಸಿಕೊಳ್ಳಬೇಕು ಎಂದರೆ ನಮ್ಮ ಜೀವನ ನಡೆಯುವುದು ಹೇಗೆ ಎಂಬುದು ಹಲವು ಆಟೋ ಚಾಲಕರ ಪ್ರಶ್ನೆ.
Advertisement

Udayavani is now on Telegram. Click here to join our channel and stay updated with the latest news.

Next