Advertisement

ಮಾನವೀಯತೆ ಮೆರೆದ ಉಪ್ಪಿನಂಗಡಿ ಆಟೋ ಚಾಲಕರು

04:37 PM Nov 06, 2017 | Team Udayavani |

ಉಪ್ಪಿನಂಗಡಿ: ಗ್ರಾಮೀಣ ಪ್ರದೇಶದಲ್ಲಿ ಆಟೋ ರಿಕ್ಷಾ ಚಾಲಕರ ಬದುಕಿನಲ್ಲಿ ಹಲವು ಸಮಸ್ಯೆಗಳು ಸಾಮಾನ್ಯ. ಆದರೆ ತಮ್ಮದೇ ಸಮಸ್ಯೆಗಳ ನಡುವೆಯೂ ಉಪ್ಪಿನಂಗಡಿಯ ನೇತ್ರಾವತಿ ಆಟೋ ರಿಕ್ಷಾ ಚಾಲಕ-ಮಾಲಕ ಸಂಘದವರು ಅಸಾಹಯಕರೊಬ್ಬರಿಗೆ ನೆರವಾಗುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.

Advertisement

ಬಸ್ಸಿಗೆ ಹಣವಿಲ್ಲದೆ ಅಪರಿಚಿತ ಊರಿನಲ್ಲಿ ಒಬ್ಬಂಟಿಯಾಗಿದ್ದ ಚಿತ್ರದುರ್ಗದ ಯುವಕನಾದ ಮೋಹನ್‌ ಅವರಿಗೆ ಆಟೋ ರಿಕ್ಷಾದವರು ಹಣ ಸಂಗ್ರಹಿಸಿ ಅವರನ್ನು ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಮೋಹನ್‌ ಅವರು ಚಿತ್ರದುರ್ಗದ ಹೊಳಲ್ಕೆರೆಯವರಾಗಿದ್ದು, ಅವರ ಗೆಳೆಯ ಪುತ್ತೂರಿನಲ್ಲಿ ಕೆಲಸಕ್ಕಿದ್ದರು. ಆತನಿಗೆ ನೀಡಿದ ಸಾಲವನ್ನು ವಸೂಲಿ ಮಾಡುವ ಮತ್ತು ಪುತ್ತೂರಿನಲ್ಲಿಯೇ ಕೆಲಸ ಮಾಡುವ ಉದ್ದೇಶವನ್ನಿಟ್ಟುಕೊಂಡು ಎರಡು ದಿನಗಳ ಹಿಂದೆ ಮೋಹನ್‌ ಅವರು ಪುತ್ತೂರಿಗೆ ಆಗಮಿಸಿದ್ದರು. ಆದರೆ ಇವರ ಸ್ನೇಹಿತ ಪುತ್ತೂರಿನಲ್ಲಿ ಕೆಲಸ ಬಿಟ್ಟು ಮುಂಬಯಿಗೆ ತೆರಳಿದ್ದ. ಇದರಿಂದ ಲೆಕ್ಕದ ಹಣ ಹಿಡಿದು ಕೊಂಡು ಬಂದ ಇವರು ಕೈಯಲ್ಲಿ ಹಣವಿಲ್ಲದೆ ಪುತ್ತೂರಿನಲ್ಲಿ ಸಿಲುಕಿಕೊಳ್ಳುವಂತಾಯಿತು.

ಶುಕ್ರವಾರ ಪುತ್ತೂರು ಬಸ್‌ನಿಲ್ದಾಣದಲ್ಲೇ ಅವರ ಸಂಕಷ್ಟದ ಸ್ಥಿತಿ ಕಂಡು ಕೂಡಲೇ ಕಾರ್ಯಪ್ರವೃತ್ತರಾದ ನೇತ್ರಾವತಿ ಆಟೋ ರಿಕ್ಷಾ ಚಾಲಕ-ಮಾಲಕ ಸಂಘದವರು ಪರಸ್ಪರ ಕೈಜೋಡಿಸಿ ಪ್ರಯಾಣ, ಊಟ ಸೇರಿದಂತೆ ಸುಖಕರವಾಗಿ ಊರಿಗೆ ಮುಟ್ಟಲು ಸಾಕಾಗುವಷ್ಟು ಹಣ ಸಂಗ್ರಹಿಸಿ ಮೋಹನ್‌ ಅವರಿಗೆ ಹಸ್ತಾಂತರಿಸಿದರು. ನೇತ್ರಾವತಿ ಆಟೋರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ಕೆ.ಎಸ್‌. ಅಬ್ದುಲ್‌ ಲತೀಫ್, ಜತೆ ಕಾರ್ಯದರ್ಶಿ ಖಲಂದರ್‌ ಶಾಫಿ, ಸಂಘಟನ ಕಾರ್ಯದರ್ಶಿ ಬಶೀರ್‌ ಗಾಂಧಿಪಾರ್ಕ್‌, ಸದಸ್ಯ ಅಬ್ದುರ್ರಹ್ಮಾನ್‌ ಕಡವಿನ ಬಾಗಿಲು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next