ಕೋಲಾರ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಆಟೋ ಚಾಲಕರ ಸಹಕಾರ ಅಗತ್ಯವಾಗಿದ್ದು, ಅಪರಾಧಗಳು ಗಮನಕ್ಕೆ ಬಂದಾಗ ಪೊಲೀಸರಿಗೆ ಮಾಹಿತಿ ರವಾನಿಸಿ ಸಹಕಾರ ನೀಡಿ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ ದೇವರಾಜ್ ಸಲಹೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಜಯಚಾಮ ರಾಜೇಂದ್ರ ಒಡೆಯರ್ ಕನ್ನಡಿಗರ ಸಂಘದಿಂದ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು. ಪ್ರತಿಯೊಂದು ಗಲ್ಲಿಗಲ್ಲಿಯಲ್ಲಿ ಏನು ನಡೆಯುತ್ತಿದೆ ಎಂಬ ವಿದ್ಯಮಾನಗಳ ಬಗ್ಗೆ ಆಟೋ ಚಾಲಕರಿಗೆ ಅರಿವು ಇರುತ್ತದೆ. ಪೋಲೀಸ್ ಇಲಾಖೆಗೆ ನೀಡುವ ಮಾಹಿತಿಯೇ ಸಾಕಷ್ಟು ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಸರಕಾರ ನೀಡಿರುವ ಖಾಕಿ ಸಮವಸ್ತ್ರವು ಜಾತಿ, ಧರ್ಮ, ಭೇದ, ಬಡವ ಶ್ರೀಮಂತ ಎನ್ನದೇ ಎಲ್ಲರನ್ನೂ ಸಮಾನ ಎಂಬುದನ್ನು ಸೂಚಿಸುತ್ತದೆ. ಸಮಾಜದಲ್ಲಿನ ಶೇ.80 ಆಟೋ ಚಾಲಕರು ಬದುಕಿಗಾಗಿ ವೃತ್ತಿ ಮಾಡಿದರೆ ಒಂದಿಷ್ಟು ಜನ ಶೋಕಿಗಾಗಿ ವೃತ್ತಿ ಮಾಡತ್ತಿದ್ದಾರೆ ಯಾರೇ ಬಂದರೂ ಪ್ರೀತಿಯಿಂದ ಗೌರವದಿಂದ ಮಾತಾಡಿಸಬೇಕು ಆಟೋ ಚಾಲಕರ ಮಕ್ಕಳು ಆಟೋ ಚಾಲಕರಾಗುವುದು ಬೇಡ ಎಂದರು.
ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಪತ್ರಕರ್ತ ಕೆ.ಎಸ್ ಗಣೇಶ್ ಮಾತನಾಡಿ, ಆಟೋ ಚಾಲಕರಿಗೂ ಕನ್ನಡ ಭಾಷೆಗೆ ಅವಿನಾಭಾವ ಸಂಬಂಧವಿದೆ ತಮ್ಮ ಆಟೋಗಳ ಮೇಲೆ ಕನ್ನಡ ಪ್ರೇಮದ ವಾಕ್ಯಗಳನ್ನು ಬರೆದಿರುತ್ತಾರೆ ಖಾಕಿ ಸಮವಸ್ತ್ರ ಪೋಲೀಸರಿಗೆ ಕಾನೂನು ಸುವ್ಯವಸ್ಥೆಗೆ, ಸೆ„ನಿಕರಿಗೆ ದೇಶದ ರಕ್ಷಣೆಗೆ ಹಾಗೂ ಆಟೋ ಚಾಲಕರಿಗೆ ಊರಿನ ಗೌರವ ಘನತೆಯನ್ನು ಎತ್ತಿ ತೋರಿಸಲಿಕ್ಕೆ ಎಂದರು.
ಹಿರಿಯ ಪತ್ರಕರ್ತ ರಾಜೇಂದ್ರ ಸಿಂಹ ಮಾತನಾಡಿ, ಆಟೋ ಚಾಲಕರನ್ನು ಗುರುತಿಸುವುದು ಕಡಿಮೆ ಸುಮಾರು ಆಟೋಗಳಿಗೆ ಪರವಾನಗಿ ಇಲ್ಲ, ಚಾಲಕರಿಗೆ ಕಾನೂನು ತೊಂದರೆ ಯಾಗದಂತೆ ಅದಾಲತ್ ರೀತಿಯಲ್ಲಿ ದಾಖಲೆಗಳನ್ನು ಒದಗಿಸುವ ಮೂಲಕ ಪೋಲೀಸ್ ಇಲಾಖೆ ನೆರವಾಗಬೇಕು ಕೆಲವು ಕಡೆ ಶಿಬಿರಗಳನ್ನು ನಡೆಸುವ ಮೂಲಕ ಆಟೋ ಚಾಲಕರಿಗೆ ಚಾಲನೆಯ ಅರಿವು ಮೂಡಿಸಬೇಕು ಮಾದರಿ ಆಟೋ ನಿಲ್ದಾಣಗಳ ಕಡೆ ಹೆಚ್ಚಿನ ಗಮನಹರಿಸಬೇಕು ಎಂದರು.
ಎಸ್ಪಿ ದೇವರಾಜ್ ಸ್ವತಃ ಆಟೋ ಚಾಲನೆ ಮಾಡುವ ಮೂಲಕ ಗಮನ ಸೆಳೆದರು ಜಯಚಾಮರಾಜೇಂದ್ರ ಒಡೆಯರ್ ಕನ್ನಡಿಗರ ಸಂಘದ ಕೆ.ಜಯದೇವ್, ಪತ್ರಕರ್ತರ ಸಂಘದ ಜಿಲ್ಲಾ ಖಜಾಂಚಿ ಎ.ಜಿ ಸುರೇಶ್ ಕುಮಾರ್ ಮತ್ತಿತರರಿದ್ದರು.