Advertisement

ಆಸ್ತಿ ದಾಖಲೆ ಮರಳಿಸಿದ ಆಟೋ ಚಾಲಕ

11:58 AM Jun 07, 2018 | Team Udayavani |

ಬೆಂಗಳೂರು: ಮಹಿಳೆಯೊಬ್ಬರು ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಪೊಲೀಸರಿಗೆ ತಲುಪಿಸುವ ಮೂಲಕ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಈ ದಾಖಲೆಗಳನ್ನು ಪೊಲೀಸ್‌ ಸಿಬ್ಬಂದಿ, ಮಾಲೀಕರಿಗೆ ತಲುಪಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಖಾಸಗಿ ಕಂಪನಿ ಉದ್ಯೋಗಿ ಸುನೀತಾ ಟೆಕ್ಕಂ ಎಂಬುವರು ಟ್ವೀಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ಹೈಗ್ರೌಂಡ್ಸ್‌ ಸಂಚಾರ ಠಾಣೆ ಮುಖ್ಯ ಪೇದೆ ದಿನೇಶ್‌ಗೌಡ ಹಾಗೂ ಆಟೋ ಚಾಲಕ ಸೈಯದ್‌ ಮೊಹಮ್ಮದ್‌ರ ಪ್ರಾಮಾಣಿಕತೆ ಹಾಗೂ ಕರ್ತವ್ಯ ಪ್ರಜ್ಞೆಗೆ ಅಭಿನಂದನೆ ಸಲ್ಲಿಸಿದ್ದಾರೆ. 

ಕಲ್ಯಾಣ ನಗರ ನಿವಾಸಿ ಸುನೀತಾ, ವಸಂತ ನಗರ ಮುಖ್ಯ ರಸ್ತೆಯಲ್ಲಿರುವ “ಜನಾಗ್ರಹ’ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಸೋಮವಾರ ಬೆಳಗ್ಗೆ ಕಲ್ಯಾಣನಗರದಿಂದ ವಸಂತನಗರಕ್ಕೆ ಸೈಯದ್‌ ಮೊಹಮ್ಮದ್‌ ಅವರ ಆಟೋದಲ್ಲಿ ಪ್ರಯಾಣಿಸಿದ್ದರು. ಕೆಲಸದೊತ್ತಡದಲ್ಲಿದ್ದ ಸುನೀತಾ ಅವರು, ಆಟೋದಿಂದ ಇಳಿಯುವಾಗ ತಮ್ಮ ಆಸ್ತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಮರೆತು ಆಟೋದಲ್ಲೇ ಬಿಟ್ಟು ಹೋಗಿದ್ದಾರೆ. 

ಇತ್ತ ಆಟೋ ಚಾಲಕ ಸೈಯದ್‌ ಕೂಡ ಗಮನಿಸಿಲ್ಲ. ಮನೆಗೆ ಹೋದ ನಂತರ ದಾಖಲೆಗಳು ದೊರೆತಿವೆ. ಇತ್ತ ಸುನೀತಾ ಅವರು ಎಲ್ಲೆಡೆ ಹುಡುಕಾಟ ನಡೆಸಿದರೂ ದಾಖಲೆಗಳು ದೊರೆತಿರಲಿಲ್ಲ. ಮಂಗಳವಾರ ಬೆಳಗ್ಗೆ ಎಂದಿನಂತೆ ಚಾಲಕ ಸೈಯದ್‌ ಮೊಹಮ್ಮದ್‌ ಆಟೋ ಹೊರಗೆ ತೆಗೆದು ಬಾಡಿಗೆ ಅರಸಿ ಹೊರಟಿದ್ದಾರೆ. ಈ ವೇಳೆ ವಸಂತನಗರ ಮುಖ್ಯ ರಸ್ತೆಯಿಂದ ಪ್ಯಾಲೇಸ್‌ ರಸ್ತೆ ಕಡೆ ಹೋಗವ ಮಾರ್ಗ ಮಧ್ಯೆ ರಸ್ತೆ ಬದಿಯ ಹೋಟೆಲ್‌ವೊಂದರಲ್ಲಿ ತಿಂಡಿಗೆ ನಿಲ್ಲಿಸಿದ್ದರು.

ಇದೇ ವೇಳೆ ಅಲ್ಲೇ ಇದ್ದ ಹೈಗ್ರೌಂಡ್ಸ್‌ ಸಂಚಾರ ಠಾಣೆ ಮುಖ್ಯ ಪೇದೆ ದಿನೇಶ್‌ ಗೌಡಗೆ ತಮ್ಮ ಆಟೋದಲ್ಲಿ ಪತ್ತೆಯಾದ ದಾಖಲೆಗಳನ್ನು ನೀಡಿ, ಬಳಿಕ ಇಂದು (ಮಂಗಳವಾರ) ಯಾರೂ ಆಟೋ ಹತ್ತಿಲ್ಲ. ನಿನ್ನೆ (ಸೋಮವಾರ) ಯಾರೋ ಬಿಟ್ಟು ಹೋಗಿರುವ ಸಾಧ್ಯತೆಯಿದೆ. ದಯವಿಟ್ಟು ಅವರಿಗೆ ಹಿಂದಿರುಗಿಸಿ ಎಂದು ಮನವಿ ಮಾಡಿದ್ದರು. ಆ ದಾಖಲೆಗಳನ್ನು ಪರಿಶೀಲಿಸಿದಾಗ ಸುನೀತಾ ಅವರ ಪತಿ ಮೊಬೈಲ್‌ ನಂಬರ್‌ ಸಿಕ್ಕಿದ್ದು, ದಿನೇಶ್‌ ಆ ಸಂಖ್ಯೆಗೆ ಕರೆ ಮಾಡಿದ್ದಾರೆ.

Advertisement

ಬಳಿಕ ಹತ್ತಿರದಲ್ಲೇ ಇರುವ ಜನಾಗ್ರಹ ಕಚೇರಿಯಲ್ಲೇ ಸುನಿತಾ ಅವರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದ ಮುಖ್ಯ ಪೇದೆ ದಿನೇಶ್‌ ಗೌಡ, ಎಲ್ಲ ದಾಖಲೆಗಳನ್ನು ಸುನೀತಾ ಅವರಿಗೆ ವಾಪಸ್‌ ಕೊಟ್ಟು, ಮತ್ತೂಮ್ಮೆ ಈ ರೀತಿ ಕಳೆದುಕೊಳ್ಳದಂತೆ ತಿಳಿ ಹೇಳಿದ್ದಾರೆ.

ಸುನೀತಾ ರಿಂದ ಅಭಿನಂದನೆ: ಇತ್ತ ಕಳೆದು ಕೊಂಡಿದ್ದ ದಾಖಲೆಗಳು ಸಿಕ್ಕ ಖುಷಿಯಲ್ಲಿದ್ದ ಸುನೀತಾ ಅವರು, ಮುಖ್ಯ ಪೇದೆ ದಿನೇಶ್‌ ಗೌಡ ಹಾಗೂ ಆಟೋ ಚಾಲಕ ಸೈಯದ್‌ ಮೊಹ  ಮ್ಮದ್‌ ಅವರ ಕರ್ತವ್ಯ ಪ್ರಜ್ಞೆ ಬಗ್ಗೆ ಮೆಚ್ಚುಗೆ
ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಮೇತ ಪೋಸ್ಟ್‌ ಹಾಕಿ, ಅಭಿನಂದನೆ ಸಲ್ಲಿಸಿದ್ದಾರೆ. ಹಾಗೇ, ಈ ಪೋಸ್ಟನ್ನು ಬೆಂಗಳೂರು ನಗರ ಪೊಲೀಸರು ಹಾಗೂ ಪೊಲೀಸ್‌ ಆಯುಕ್ತರ ಫೇಸ್‌ಬುಕ್‌, ಟ್ವಿಟರ್‌ ಖಾತೆಗಳಿಗೆ ಟ್ಯಾಗ್‌ ಮಾಡಿದ್ದಾರೆ.

ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಸುನೀತಾ ಅವರು, “ಸಮಾಜದಲ್ಲಿ ಮಾನವೀಯ ಗುಣಗಳನ್ನು ಹೊಂದಿರುವ ಜನ ಇನ್ನು ಇದ್ದಾರೆ ಎಂಬುದಕ್ಕೆ ಈ ಇಬ್ಬರು ವ್ಯಕ್ತಿಗಳೇ ಸಾಕ್ಷಿ. ಈ ಇಬ್ಬರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ,’ ಎಂದಿದ್ದಾರೆ.

ಡಿಎಲ್‌ ಕಳೆದುಕೊಂಡಿರುವ ಸೈಯದ್‌ ಈ ಹಿಂದೆಯೂ ಆಟೋ ಚಾಲಕ ಸೈಯದ್‌ ಮೊಹಮ್ಮದ್‌ ಪ್ರಾಮಾಣಿಕತೆ ಮರೆದಿದ್ದರು. ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಮೊಬೈಲ್‌, ಬ್ಯಾಗ್‌ ಹಾಗೂ ಕೆಲ ದಾಖಲೆಗಳನ್ನು ಸ್ಥಳೀಯ ಠಾಣೆಗೆ ಒಪ್ಪಿಸಿ ಬದ್ಧತೆ ತೋರಿದ್ದರು. ಆದರೆ, ವಿಪರ್ಯಾಸವೆಂದರೆ ಕಳೆದ ತಿಂಗಳು ಅವರೇ ತಮ್ಮ
ಚಾಲನಾ ಪರವಾನಿಗೆ ಹಾಗೂ ಇತರೆ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಪೊಲೀಸ್‌ ಠಾಣೆಗೆ ದೂರು ಸಹ ನೀಡಿದ್ದಾರೆ. ಆದರೆ, ಇದುವರೆಗೂ ಸಿಕ್ಕಿಲ್ಲ. ಒಂದು ವೇಳೆ ಪತ್ತೆಯಾದರೆ ಕೂಡಲೇ ಹತ್ತಿರದ ಠಾಣೆಗೆ ನೀಡವಂತೆ ಸುನೀತಾ ಅವರು ಕಾರ್ಯನಿರ್ವಹಿಸುತ್ತಿರುವ ಜನಾಗ್ರಹ ಸಂಸ್ಥೆ ತನ್ನ “ಐ ಚೆಂಜ್‌ ಮೈ ಸಿಟಿ’ ಎಂಬ ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆ ಮೂಲಕ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next