Advertisement

ದುಬಾರಿ ಬಾಡಿಗೆ ಹಣ ಕೊಡದಿದ್ದಕ್ಕೆ ಪ್ರಯಾಣಿಕನ ಕೊಂದ ಆಟೋ ಡ್ರೈವರ್‌

02:31 PM Jun 13, 2023 | Team Udayavani |

ಬೆಂಗಳೂರು: ಹೆಚ್ಚಿನ ಬಾಡಿಗೆ ಹಣ ನೀಡಲು ನಿರಾಕರಿಸಿದ ಪ್ರಯಾಣಿಕನ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಸುಬ್ರಮಣ್ಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಯಶವಂತಪುರದ ಅಮೋದ್‌ ಕರೋಡ್‌(28) ಕೊಲೆಯಾದವರು.

ಈತನ ಸಹೋದರ ಅಯೂಬ್‌ (25) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ತಡರಾತ್ರಿ ಯಶವಂತಪುರ ಸೋಪ್‌ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ.

ಘಟನೆ ಸಂಬಂಧ ಆಟೋ ಚಾಲಕ ಸುಂಕದಕಟ್ಟೆ ನಿವಾಸಿ ಅಶ್ವತ್ಥ್ (29) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಅಸ್ಸಾಂ ಮೂಲದ ಸಹೋದರರಾದ ಅಮೋದ್‌ ಮತ್ತು ಅಯೂಬ್‌ ಉದ್ಯೋಗ ಬಯಸಿ ಬೆಂಗಳೂ ರಿಗೆ ಬಂದಿದ್ದು, ಯಶವಂತಪುರದಲ್ಲಿ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದರು. ಭಾನುವಾರ ಕೆಲಸಕ್ಕೆ ರಜೆ ಹಿನ್ನೆಲೆಯಲ್ಲಿ ಚಂದಾಪುರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ಅಸ್ಸಾಂನಿಂದ ರೈಲಿನಲ್ಲಿ ಹೊರಟ್ಟಿದ್ದ ಚಿಕ್ಕಪ್ಪನ ಮಗ ಭಾನುವಾರ ಮುಂಜಾನೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬರಲಿದ್ದ. ಹೀಗಾಗಿ ಆತನನ್ನು ರೈಲು ನಿಲ್ದಾಣದಿಂದ ಮನೆಗೆ ಕರೆದೊಯ್ಯುವ ಸಲುವಾಗಿ ಚಂದಾಪುರದಿಂದ ಬಿಎಂಟಿಸಿ ಬಸ್‌ನಲ್ಲಿ ರಾತ್ರಿ 11 ಗಂಟೆಗೆ ಮೆಜೆಸ್ಟಿಕ್‌ಗೆ ಬಂದಿದ್ದರು. ಮೆಜೆಸ್ಟಿಕ್‌ನಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಆಟೋದಲ್ಲಿ ತೆರಳಿ ಆಟೋ ಬಾಡಿಗೆ ವಿಚಾರಿಸಿದಾಗ ಚಾಲಕನೊಬ್ಬ 300 ರೂ. ಬಾಡಿಗೆ ಕೇಳಿದ್ದಾನೆ. ಬಾಡಿಗೆ ದುಬಾರಿ ಆಯಿತು ಎಂದು ಬೇರೆ ಆಟೋ ವಿಚಾರಿಸಲು ಮುಂದಾಗಿದ್ದಾರೆ.

Advertisement

ಇದೇ ವೇಳೆ ಆರೋಪಿ ಅಶ್ವತ್ಥ್ ಆಟೋದೊಂದಿಗೆ ಅಲ್ಲಿಗೆ ಬಂದಿದ್ದಾನೆ. ತಲಾ 50 ರೂ. ಹೆಚ್ಚುವರಿ ಕೊಟ್ಟರೆ ರೈಲು ನಿಲ್ದಾಣಕ್ಕೆ ಬಿಡುವುದಾಗಿ ಹೇಳಿದ್ದಾನೆ. ಅದಕ್ಕೆ ಸಮ್ಮತಿಸಿದ ಸಹೋದರರು ಆಟೋ ಹತ್ತಿದ್ದಾರೆ. ಆಟೋ ಯಶವಂತಪುರ ಸೋಪ್‌ ಫ್ಯಾಕ್ಟರಿ ಬಳಿ ಬಂದಾಗ, ಆಟೋ ಚಾಲಕ ತಲಾ 1,500 ರೂ. ನಂತೆ ಇಬ್ಬರಿಗೆ 3 ಸಾವಿರ ರೂ. ಕೊಡಬೇಕು ಎಂದಿದ್ದಾನೆ. ಅದರಿಂದ ಗಾಬರಿಗೊಂಡ ಸಹೋದರರು, ಅಷ್ಟೊಂದು ಕೊಡಲು ಸಾಧ್ಯವಿಲ್ಲ. ಮೊದಲು ಹೇಳಿದಂತೆ ತಲಾ 50 ರೂ. ಹೆಚ್ಚುವರಿ ಕೊಡುವುದಾಗಿ ಹೇಳಿದ್ದಾರೆ.

ಅದರಿಂದ ಕೋಪಗೊಂಡ ಅಶ್ವತ್ಥ್ ಏಕಾಏಕಿ ಸಹೋದರರ ಮೇಲೆ ಹಲ್ಲೆಗೆ ಮಾಡಲು ಆರಂಭಿಸಿದ್ದಾನೆ. ಅಮೋದ್‌ ಸಹೋದರರು ಆಟೋ ಇಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬೆನ್ನಟ್ಟಿ ಹಿಡಿದು ಕೈಯಿಂದಲೇ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಈ ವಿಚಾರ ತಿಳಿದ ಆರ್‌ಎಂಸಿ ಯಾರ್ಡ್‌ ಪೊಲೀಸರು ಸ್ಥಳಕ್ಕೆ ಬಂದು ಗಾಯಾಳುಗಳನ್ನು ಕೆ.ಸಿ.ಜನರಲ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅಮೋದ್‌ ಚಿಕಿತ್ಸೆ ಫ‌ಲಿಸದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ. ಬಳಿಕ ಸುಬ್ರಮಣ್ಯ ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಧಾವಿಸಿ ಆರೋಪಿ ಆಟೋ ಚಾಲಕ ಅಶ್ವತ್ಥ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next