ಆಟೋ ಚಾಲಕರಿಗೂ ಕನ್ನಡ ಚಿತ್ರರಂಗಕ್ಕೂ ಒಂದು ಅವಿನಾಭಾವ ಸಂಬಂದವಿದೆ. ಕನ್ನಡ ಸಿನಿಮಾಗಳನ್ನು ಹೆಚ್ಚು ಪ್ರೀತಿಸುವವರಲ್ಲಿ ಆಟೋ ಚಾಲಕರ ಸಂಖ್ಯೆ ಹೆಚ್ಚಿದೆ ಎಂದರೆ ತಪ್ಪಲ್ಲ. ಇವತ್ತಿಗೂ ಅನೇಕ ನಟರನ್ನು ಆರಾಧಿಸುತ್ತಾ, ಜನಮಾನಸದಲ್ಲಿ ನೆನಪಿನಲ್ಲಿರುವಂತೆ ಮಾಡುವುದು ಆಟೋದವರು. ಅದೇ ಕಾರಣದಿಂದ ಬಹುತೇಕ ಆಟೋಗಳ ಹಿಂದೆ ಯಾವುದಾದರೂ ಒಬ್ಬ ಹೀರೋನಾ ಫೋಟೋ, ಆತನ ಬಿರುದು ಅಥವಾ ಸಿನಿಮಾ ಡೈಲಾಗ್ ಇದ್ದೇ ಇರುತ್ತದೆ.
ದರ್ಶನ್ ಅವರನ್ನು ಪ್ರೀತಿಸುವವ ಆಟೋದವರ ಸಂಖ್ಯೆಯೇನೂ ಕಡಿಮೆಯಿಲ್ಲ. ದರ್ಶನ್ ಸಿನಿಮಾಗಳಿಗೆ ಫಸ್ಟ್ ಡೇ ಫಸ್ಟ್ ಶೋ ನೋಡುವ, ಜೈಕಾರ ಹಾಕುವ ಆಟೋ ಚಾಲಕರ ಸಂಖ್ಯೆ ದೊಡ್ಡದಿದೆ. ಅದೇ ತರಹ ತಮ್ಮ ಆಟೋ ಹಿಂದೆ ದರ್ಶನ್ ಫೋಟೋ ಹಾಕಿ, “ಚಾಲೆಂಜಿಂಗ್ ಸ್ಟಾರ್’, “ಬಾಕ್ಸ್ ಆಫೀಸ್ ಸುಲ್ತಾನ್’, “ದಾಸ’, “ಚಕ್ರವರ್ತಿ’ … ಹೀಗೆ ಬರೆಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ.
ಈಗ “ಆಟೋ’ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ, ನೇರವಾಗಿ ದರ್ಶನ್ ಅವರಿಂದಲೇ ತಮ್ಮ ಆಟೋಗೆ ಆಟೋಗ್ರಾಪ್ ಹಾಕಿಸಿಕೊಳ್ಳುತ್ತಿದ್ದಾರೆ. ಅದೇ ಕಾರಣದಿಂದ ದರ್ಶನ್ ಅವರ ರಾಜರಾಜೇಶ್ವರಿ ನಗರದ ಮನೆ ಮುಂದೆ ಆಟೋಗಳ ಸಂಖ್ಯೆ ಹೆಚ್ಚುತ್ತಿದೆ. ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಿ ಅವರಿಂದ ನೇರವಾಗಿ ಆಟೋ ಹಿಂದೆ ಆಟೋಗ್ರಾಫ್ ಹಾಕಿಸಿಕೊಳ್ಳುತ್ತಿದ್ದಾರೆ.
ದರ್ಶನ್ ಕೂಡಾ ತಮ್ಮ ಅಭಿಮಾನಿಗಳ ಪ್ರೀತಿಗೆ ಸ್ಪಂಧಿಸಿ ಮನೆ ಬಳಿ ಬಂದ ಆಟೋಗಳಿಗೆ ಆಟೋ “ನಿಮ್ಮ ದಾಸ ದರ್ಶನ್’ ಎಂದು ಆಟೋ ಹಿಂದೆ ಆಟೋಗ್ರಾಫ್ ಹಾಕುತ್ತಿದ್ದಾರೆ. ಈ ಮೂಲಕ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು, ದರ್ಶನ್ ಅವರ “ಸಾರಥಿ’ ಚಿತ್ರದಲ್ಲಿನ ಆಟೋ ಕುರಿತಾದ “ಕೈ ಮುಗಿದು ಏರು ಇದು ಕನ್ನಡದ ತೇರು’ ಹಾಡು ಸಖತ್ ಹಿಟ್ ಆಗಿತ್ತು. ಆಟೋ ಚಾಲಕರು ಈ ಹಾಡಿಗೆ ಸ್ವಲ್ಪ ಹೆಚ್ಚೇ ಫಿದಾ ಆಗಿದ್ದರು.