ತೆಕ್ಕಟ್ಟೆ: ಗ್ರಾಮದಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಿಂದ ಪೊಲೀಸರು ನೇರವಾಗಿ ಬಂದು ವಿಚಾರಿಸಿ ಕ್ರಮ ಕೈಗೊಳ್ಳುವ ಅಧಿಕಾರವಿದೆ. ಆದರೆ ಬದಲಾದ ಕಾಲದಲ್ಲಿ ಠಾಣೆ ಬರುವ ಪ್ರಕರಣಗಳಿಗೆ ಕ್ರಮಕೈಗೊಳ್ಳುವ ಮುನ್ನ ರಾಜಕೀಯ ಹಾಗೂ ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ಬರುತ್ತವೆ. ಇದರಿಂದಾಗಿ ಕೆಲವೊಮ್ಮೆ ಸೂಕ್ತ ಕ್ರಮಕೈಗೊಳ್ಳುವಲ್ಲಿ ಕಷ್ಟಸಾಧ್ಯವಾಗುವ ಅನಿವಾರ್ಯ ಪರಿಸ್ಥಿತಿ ಇದೆ. ಆದ್ದರಿಂದ ಗ್ರಾಮದಲ್ಲಿ ಉದ್ಭವಿ ಸುವ ಸಮಸ್ಯೆಗಳಿಗೆ ಸಮರ್ಪಕವಾದ ಪರಿಹಾರ ಸಿಗಬೇಕಾದರೆ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯಬೇಕು ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಅತೀ ಅಗತ್ಯ ಎಂದು ಕೋಟ ಪೊಲೀಸ್ ಠಾಣಾಧಿಕಾರಿ ರಾಜಗೋಪಾಲ್ ಹೇಳಿದರು.
ಅವರು ಜು. 8ರಂದು ತೆಕ್ಕಟ್ಟೆ ಶ್ರೀ ದುರ್ಗಾ ಪರಮೇಶ್ವರೀ ಕಲ್ಯಾಣ ಮಂಟಪದಲ್ಲಿ ಬ್ರಹ್ಮಾವರ ವೃತ್ತದ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ ಗ್ರಾಮದ ಪೊಲೀಸ್ ಜನ ಸಂಪರ್ಕ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡ ಶ್ಯಾಮ್ ಸುಂದರ್ ತೆಕ್ಕಟ್ಟೆ ಮಾತನಾಡಿ ಜಿಲ್ಲೆಯಲ್ಲಿ ಪೊಲೀಸ್ ಸಿಬಂದಿಗಳ ಕೊರತೆ ಇರುವಾಗ 30 ಗ್ರಾಮಗಳಿಗೂ ಕೂಡಾ ಗ್ರಾಮ ಪೊಲೀಸ್‌ಹೇಗೆ ಕಾರ್ಯನಿರ್ವಹಿಸಲು ಸಾಧ್ಯ? ಅಲ್ಲದೆ ಪ್ರತಿ ಗ್ರಾಮದಲ್ಲಿ ನಾಮಕಾವಸ್ಥೆಗೆ ಮಾತ್ರ ಪೊಲೀಸ್ ನಿಯೋಜಿಸಿದರೆ ಗ್ರಾಮಸ್ಥರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬಹುದು? ಈ ಬಗ್ಗೆ ಪ್ರತಿ ಗ್ರಾ.ಪಂ.ನಲ್ಲಿಯೂ ಕೂಡಾ ವಾರ್ಡ್ ಪೊಲೀಸರ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಸ್ಥಳೀಯರಾದ ಶ್ರೀನಿವಾಸ ಮಲ್ಯಾಡಿ ಮಾತನಾಡಿ ತೆಕ್ಕಟ್ಟೆ – ದಬ್ಬೆಕಟ್ಟೆ ಪ್ರಮುಖ ರಸ್ತೆಯ ತಿರುವಿನಲ್ಲಿ ಸಮರ್ಪಕವಾದ ಸೂಚನಾ ಫಲಕವಿಲ್ಲದೆ ಇರುವುದರಿಂದ ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನ ಚಾಲಕರು ಅಪಾಯದ ನಡುವೆ ಸಂಚರಿಸಬೇಕಾದ ಅನಿವಾರ್ಯತೆ ಇದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸತೀಶ್ ಕುಮಾರ್ ಮಾತನಾಡಿ ಗ್ರಾಮದ ಸುತ್ತಮುತ್ತಲಿನಲ್ಲಿರುವ ಕೆರೆ, ಕೊಜೆ ಹೊಂಡಗಳು ಸೇರಿದಂತೆ ಹಲವು ಕಡೆಗಳಲ್ಲಿ ಬೇಜವಾಬ್ದಾರಿಯಿಂದ ಹೊಂಡಗಳನ್ನು ತೆಗೆದು ಹಾಗೇ ಬಿಡಲಾಗಿದೆ. 2005ರಲ್ಲಿ ಉಡುಪಿ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಕನಗವಲ್ಲಿ ಯವರು ಸ್ಪಷ್ಟ ಆದೇಶವನ್ನು ನೀಡಿದರಾದರೂ ಕೂಡಾ ತೆಕ್ಕಟ್ಟೆ ಗ್ರಾ.ಪಂ.ನಲ್ಲಿ ಮಾತ್ರ ಯಾವುದೇ ರೀತಿಯ ತಡೆಬೇಲಿಗಳನ್ನು ನಿರ್ಮಿಸಿಲ್ಲ ಈ ಬಗ್ಗೆ ಅಧಿಕಾರಿಗಳು ಏನು ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ ಘಟನೆ ಕೂಡಾ ನಡೆಯಿತು.
ತೆಕ್ಕಟ್ಟೆ ಕೊಮೆ ಯಶಸ್ವಿ ಕಲಾ ವೃಂದ ಇದರ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಬಶೀರ್ ಸೈಯದ್ ಕನ್ನುಕೆರೆ, ತೆಕ್ಕಟ್ಟೆ ಗ್ರಾ.ಪಂ. ಸದಸ್ಯ ಸಂಜೀವ ದೇವಾಡಿಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪೊಲೀಸ್ ಸಿಬಂದಿ ವಿಶ್ವನಾಥ ಸ್ವಾಗತಿಸಿ, ವಂದಿಸಿದರು.
ವೇ ಬ್ರಿಜ್ ಅಪಾಯಕ್ಕೆ ರಹದಾರಿ? ತುರ್ತು ಕ್ರಮಕ್ಕೆ ಆಗ್ರಹ
ಇಲ್ಲಿನ ಪ್ರಮುಖ ಭಾಗದಲ್ಲಿರುವ ಬೃಹತ್ ರೈಸ್ ಮಿಲ್‌ನಲ್ಲಿರುವ ವೇ ಬ್ರಿಜ್‌ಗೆ ಬರುವ ವಾಹನಗಳು ರಾ.ಹೆ.66ರ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವುದರ ಪರಿಣಾಮವಾಗಿ ಸಮೀಪದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಅಪಾಯದ ನಡುವೆ ಸಂಚರಿಸಬೇಕಾದ ಅನಿವಾರ್ಯತೆ ಇದೆ ಆದ್ದರಿಂದ ಸಂಭವನೀಯ ಅವಘಡಗಳು ಸಂಭವಿಸುವ ಮುನ್ನ ತುರ್ತು ಕ್ರಮ ಕೈಗೊಳ್ಳಿ ಎಂದು ತೆಕ್ಕಟ್ಟೆ ಗ್ರಾ.ಪಂ. ಸಿಬಂದಿ ಸಂಜೀವ ತೆಕ್ಕಟ್ಟೆ ಆಗ್ರಹಿಸಿದ್ದಾರೆ.