Advertisement

ಆದೇಶ ಪಾಲಿಸದ ಅಧಿಕಾರಿಗಳನ್ನು 6 ತಿಂಗಳು ಜೈಲಿಗೆ ಕಳುಹಿಸಿ: ಕೋರ್ಟ್‌

06:00 AM Oct 12, 2018 | |

ಬೆಂಗಳೂರು: ರಾಜ್ಯದಲ್ಲಿ ಬಹುಕೋಟಿ ರೂ. ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ ಹಾಗೂ ದುರ್ಬಳಕೆ ಕುರಿತ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿಯವರ ವರದಿಯನ್ನು ಸದನದಲ್ಲಿ ಮಂಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ “ತಪರಾಕಿ’ ಹಾಕಿರುವ ಹೈಕೋರ್ಟ್‌, ನ್ಯಾಯಾಲಯದ ಆದೇಶದಂತೆ ನಾಲ್ಕು ವಾರಗಳಲ್ಲಿ ನಡೆದುಕೊಳ್ಳದಿದ್ದರೆ ನ್ಯಾಯಾಂಗ ನಿಂದನೆ ಆರೋಪ ಹೊರಿಸಬೇಕಾದೀತು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಎಚ್ಚರಿಕೆ ನೀಡಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಸ್‌. ಕೆ.ಕಾಂತಾ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾ.ಆರ್‌.ಎಸ್‌.ಚೌಹಾಣ್‌ ಹಾಗೂ ನ್ಯಾ.ಬಿ.ಎಂ.ಶ್ಯಾಮ್‌ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು. ಈ ವೇಳೆ, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಅನ್ವರ್‌ ಮಾಣಿಪ್ಪಾಡಿ ವರದಿ ಉಲ್ಲೇಖೀಸುತ್ತ “ಕೋರ್ಟ್‌ ಆದೇಶಗಳನ್ನು ಪಾಲಿಸದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಆರು ತಿಂಗಳು ಜೈಲಿಗೆ ಕಳುಹಿಸಬೇಕು. ಒಂದಿಬ್ಬರನ್ನು ಜೈಲಿಗೆ
ಕಳುಹಿಸಿದರೆ, ಇತರರೂ ಬುದಿಟಛಿ ಕಲಿಯುತ್ತಾರೆ’ ಎಂದು ಕಟುವಾಗಿ ಹೇಳಿತು.

“ಅನ್ವರ್‌ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವುದಾಗಿ 2016ರಲ್ಲಿ ಸರ್ಕಾರ ಹೈಕೊರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ, ಈವರೆಗೆ ವರದಿ ಮಂಡನೆಯಾಗಿಲ್ಲ’ ಎಂದು ಈ ಅ.3ರ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ದೂರಿದ್ದರು.

ಇದನ್ನು ಗಮನಿಸಿದ ನ್ಯಾಯಪೀಠ, ಸದನದಲ್ಲಿ ಯಾಕೆ ಇಲ್ಲಿತನಕ ವರದಿ ಮಂಡನೆಯಾಗಿಲ್ಲ ಎಂಬ ಬಗ್ಗೆ ವಿವರಣೆ ನೀಡಲು ಖುದ್ದು ಹಾಜರಾಗುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿತು. ಅದರಂತೆ, ಇಲಾಖೆಯ ಕಾರ್ಯದರ್ಶಿ
ಮೊಹಮ್ಮದ್‌ ಮೊಹ್‌ಸೀನ್‌ ಅವರು ಮಂಗಳವಾರ  ವಿಚಾರಣೆಗೆ ಖುದ್ದು ಹಾಜರಾಗಿದ್ದರು. ವಿಚಾರಣೆ ವೇಳೆ ಇಲಾಖೆಯ ಕಾರ್ಯದರ್ಶಿ ಮೊಹಮ್ಮದ್‌ ಮೊಹ್‌ಸೀನ್‌,”ಸದನದಲ್ಲಿ ವರದಿ ಮಂಡಿಸುವ ಕುರಿತ ಆದೇಶ ಪ್ರಶ್ನಿಸಿ 2016ರಲ್ಲೇ “ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ’, ಎಂದು ವಿವರಣೆ ನೀಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಮಧ್ಯಂತರ ಅರ್ಜಿಯನ್ನು ಇಲ್ಲಿವರೆಗೂ ಯಾಕೆ ಬಗೆಹರಿಸಿ ಕೊಂಡಿಲ್ಲ. ನಿಮಗೆ ನಾಲ್ಕು ವಾರ ಕಾಲಾವಕಾಶ ನೀಡುತ್ತೇವೆ ಅಷ್ಟರೊಳಗೆ ಮಧ್ಯಂತರ ಅರ್ಜಿಗೆ ಏನಾದರೂ ಆದೇಶ ಪಡೆದುಕೊಳ್ಳಿ, ಇಲ್ಲದಿದ್ದರೆ ಸದನದಲ್ಲಿ ವರದಿ ಮಂಡಿಸುವ ನ್ಯಾಯಾಲಯದ ಆದೇಶ ಪಾಲಿಸಿ ಎಂದು ಖಡಕ್‌ ಆಗಿ ಹೇಳಿ ವಿಚಾರಣೆಯನ್ನು ನ.12ಕ್ಕೆ ಮುಂದೂಡಿತು.

ಏನಿದು ಪ್ರಕರಣ: ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ 2012ರ ಮಾ.26ಕ್ಕೆ ಅಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿಯವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ 2015ರಲ್ಲಿ ಎಸ್‌.ಕೆ. ಕಾಂತಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸದನದಲ್ಲಿ ವರದಿ ಮಂಡಿಸುವಂತೆ ಹೈಕೋರ್ಟ್‌ ನಿರ್ದೇಶನ ಕೊಟ್ಟಿತ್ತು. ವರದಿ ಮಂಡಿಸುವುದಾಗಿ 2016ರಲ್ಲಿ ಸರ್ಕಾರ ಮುಚ್ಚಳಿಕೆ ಸಹ ಬರೆದುಕೊಟ್ಟಿತ್ತು. ಆದರೆ, ವರದಿಯ ಶಿಫಾರಸುಗಳನ್ನು ಮಾತ್ರ ಮಂಡಿಸಿತ್ತು.ಇದನ್ನು ಆಕ್ಷೇಪಿಸಿ ಎಸ್‌.ಕೆ. ಕಾಂತಾ ಅವರು 2016ರ ಮಾರ್ಚ್‌ನಲ್ಲಿ ಸರ್ಕಾರದ ವಿರುದಟಛಿ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ವರದಿ ಮಂಡಿಸುವಂತೆ ಹೈಕೋರ್ಟ್‌ ನಿರ್ದೇಶನ ಕೊಟ್ಟಿತ್ತು. ವರದಿ ಮಂಡಿಸುವುದಾಗಿ ಸರ್ಕಾರ ಸಹ ಒಪ್ಪಿಕೊಂಡಿತ್ತು. ಆದರೆ, ಸಂಪೂರ್ಣ ವರದಿ ಮಂಡಿಸುವ ಬದಲು ಕೇವಲ ಶಿಫಾರಸುಗಳನ್ನು ಮಂಡಿಸಲಾಗಿದೆ. ಸರ್ಕಾರದ ಈ ಕ್ರಮ ನ್ಯಾಯಾಲಯದ ಘನತೆಗೆ ಧಕ್ಕೆ ತರುವಂತಹದ್ದು ಮತ್ತು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

Advertisement

ಸದನದಲ್ಲೂ ನಡೆದಿತ್ತು ಸಂಘರ್ಷ
ಈ ವರದಿಗೆ ಸಂಬಂಧಿಸಿದಂತೆ ಆಡಳಿತ ಕಾಂಗ್ರೆಸ್‌ ಪಕ್ಷ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಸದನದಲ್ಲಿ ಸಾಕಷ್ಟು ಸಂಘರ್ಷ ನಡೆದಿತ್ತು. ವರದಿಯ ಶಿಫಾರಸುಗಳು ಹಾಗೂ ಕ್ರಮ ಜಾರಿ ವರದಿ (ಎಟಿಆರ್‌)ಯನ್ನು ಮಾತ್ರ ಸರ್ಕಾರ ಸದನದಲ್ಲಿ ಮಂಡಿಸಿತ್ತು. ಈ ನಡುವೆ ವರದಿಯ ಬಗ್ಗೆ ಹಾಗೂ ಅದನ್ನು ಸದನದಲ್ಲಿ ಮಂಡಿಸುವ ಕುರಿತಂತೆ ಆಗ ವಕ್ಫ್ ಸಚಿವರಾಗಿದ್ದ ದಿವಂಗತ ಖಮರುಲ್‌ ಇಸ್ಲಾಂ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅವರ ವಿರುದ್ಧ ಬಿಜೆಪಿ ಹಕ್ಕುಚ್ಯುತಿ ಮಂಡಿಸಿತ್ತು. ಈ ನಡುವೆ ಸದನಕ್ಕೆ ಕೊಟ್ಟ ಭರವಸೆಯಂತೆ ವರದಿ ಮಂಡಿಸುವಂತೆ ಆಗಿನ ಸಭಾಪತಿ ಡಿ.ಎಚ್‌. ಶಂಕರಮೂರ್ತಿ “ರೂಲಿಂಗ್‌’ ಸಹ ಕೊಟ್ಟಿದ್ದರು. ಆದರೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾಯ್ದೆಯ ಆಧಾರ ಕೊಟ್ಟು ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next