ಯಲ್ಲಾಪುರ: ವಿಶೇಷವಾಗಿ ಕುಡಿವ ನೀರಿಗೆ ಸಂಬಂಧಿಸಿ ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ರೀತಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಕುಡಿಯವ ನೀರನ್ನು ಪರಿಣಾಮಕಾರಿಯಾಗಿ ಜನರಿಗೆ ನೀಡುವ ಕೆಲಸ ಆಗಬೇಕು ಎಂದು ಜಿಲ್ಲಾಧಿಕಾರಿ ಹರಿಶ್‌ಕುಮಾರ ಹೇಳಿದರು.
ಅವರು ತಾಪಂ ಸಭಾಭವನದಲ್ಲಿ ಬರ, ನೀರು ನಿರ್ವಹಣೆ ಕುರಿತಂತೆ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಜನ ದೂರು ಕೊಟ್ಟಲ್ಲಿ ಕನಿಷ್ಠ 6 ತಾಸಿನೊಳಗೆ ನೀರಿನ ಸಮಸ್ಯೆ ಬಗೆಹರಸಿಬೇಕು. ಮುಂದಿನ 15 ದಿವಸಗಳಲ್ಲಿ ಯಾವರೀತಿ ಸಮಸ್ಯೆ ಬರುತ್ತದೆ ಎಂಬದನ್ನು ಗಮನಿಸಿ, ತೀವ್ರ ನಿಗಾವಹಿಸಿ ಕುಡಿಯುವ ನೀರು ಪೂರೈಕೆಗೆ ಆದ್ಯತೆ ಮೇರೆಗೆ ಕೆಲಸ ಮಾಡಬೇಕು. ಬರಲಿರುವ ಮಳೆಗಾಲದಲ್ಲಿ ಉಂಟಾಗುವ ಹಾನಿ, ಅವಘಡ, ವಿದ್ಯುತ್ ವ್ಯತ್ಯಯ, ಗಾಳಿಯಿಂದ ರಸ್ತೆ, ಹೆದ್ದಾರಿ ಸಂಚಾರಕ್ಕೆ ಅಡಚಣೆ ಉಂಟಾದ ಸಂದರ್ಭದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಸೇರಿ ಸಹಕಾರದಿಂದ ಸ್ಪಂದಿಸಬೇಕು.
ಹೆದ್ದಾರಿಯಲ್ಲಿ ವಿಶೇಷವಾಗಿ ಅರಬೈಲ್ ಘಟ್ಟ ಪ್ರದೇಶದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತ, ಮರಬಿದ್ದು ರಸ್ತೆ ಸಂಚಾರ ವ್ಯತ್ಯಯ ಉಂಟಾದಾಗ ತಕ್ಷಣ ಕ್ರಮಕೈಗೊಳಬೇಕು. ಈ ಬಗ್ಗೆ ಅಧಿಕಾರಿಗಳು ತುರ್ತು ಗಮನ ಹರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ಅಧಿಕಾರಿಗಳಿಗೆ ನೀಡಿದರು.
ಪ.ಪಂ. ಮುಖ್ಯಾಧಿಕಾರಿ ರಮೇಶ್ ಬಡಿಗೇರ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ, ಇರುವ ವ್ಯವಸ್ಥೆಯಲ್ಲಿ ಸಮರ್ಪಕ ರೀತಿಯಲ್ಲಿ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಜನರ ದೂರುಗಳಿಗೆ ತಕ್ಷಣ ಸ್ಪಂದಿಸಲಾಗುತ್ತಿದೆ. ತಾಂತ್ರಿಕ ತೊಂದರೆ ಉಂಟಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಬದ್ಧರಾಗಿದ್ದೇವೆ ಎಂದರು.
ಕಿರವತ್ತಿ ಭಾಗದ ನೀರಿನ ಸಮಸ್ಯೆಗೆ ಕೈಗೊಂಡ ಕ್ರಮಗಳ ಕುರಿತು ಅಭಿವೃದ್ಧಿ ಅಧಿಕಾರಿ ಜಿ.ಜಿ. ಶೆಟ್ಟಿ ಮಾಹಿತಿ ನೀಡಿದರು. ಮಾಗೋಡ ರಸ್ತೆ ತುಂಬಾ ಹದಗೆಟ್ಟಿದ್ದು, ಪ್ರವಾಸೋದ್ಯಮ ಇಲಾಖೆಯಾದರೂ ನಿರ್ವಹಣೆ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ನಿರ್ದೇಶಕರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ವಿವಿಧ ಇಲಾಖೆಗಳ ಕಾರ್ಯವೈಖರಿ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.