ಅಡಿಲೇಡ್: ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸವೆಲ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಮಿಂಚಿದ್ದಾರೆ. ಇದೇ ವೇಳೆ ಭಾರತದ ನಾಯಕ ರೋಹಿತ್ ಶರ್ಮಾ ಅವರ ದಾಖಲೆ ಸರಿಗಟ್ಟಿದ್ದಾರೆ.
ಭಾನುವಾರ ಅಡಿಲೇಡ್ ಓವಲ್ ನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಸಮಯದಲ್ಲಿ ಮ್ಯಾಕ್ಸ್‌ವೆಲ್ ಈ ಹೆಗ್ಗುರುತನ್ನು ಸಾಧಿಸಿದರು.
ಗ್ಲೆನ್ ಮ್ಯಾಕ್ಸವೆಲ್ ಅವರು 55 ಎಸೆತಗಳಲ್ಲಿ ಅಜೇಯ 120 ರನ್ ಗಳಿಸಿದರು. ಅವರು ಇನ್ನಿಂಗ್ಸ್ ನಲ್ಲಿ 12 ಬೌಂಡರಿ ಮತ್ತು ಎಂಟು ಸಿಕ್ಸರ್ ಬಾರಿಸಿದರು. ಮ್ಯಾಕ್ಸವೆಲ್ ಅವರ ಸ್ಪೋಟಕ ಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತು.
ಕಳೆದ ಮೂರು ಟಿ20 ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸವೆಲ್ ಅವರು ಎರಡು ಶತಕ ಬಾರಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಜೊತೆಗೆ ಅಗ್ರಸ್ಥಾನಕ್ಕೇರಿದರು. ಇಬ್ಬರು ತಲಾ ಐದು ಶತಕ ಬಾರಿಸಿದ್ದಾರೆ.
ಆಸೀಸ್ ಗಳಿಸಿದ 241 ರನ್ ಗೆ ಉತ್ತರವಾಗಿ ವೆಸ್ಟ್ ಇಂಡೀಸ್ 9 ವಿಕೆಟ್ ಕಳೆದುಕೊಂಡು 207 ರನ್ ಪೇರಿಸಿದೆ. ನಾಯಕ ರೋಮನ್ ಪೊವೆಲ್ 36 ಎಸೆತಗಳಲ್ಲಿ 63 ರನ್ ಮಾಡಿದರು. ಆಸೀಸ್ ಪರ ಸ್ಟೋಯಿನಸ್ ಮೂರು ವಿಕೆಟ್ ಕಿತ್ತರು.