Advertisement

T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಟಿ20: ಆಸ್ಟ್ರೇಲಿಯ 3-0 ಜಯಭೇರಿ

05:57 PM Nov 18, 2024 | Team Udayavani |

ಹೋಬರ್ಟ್‌: ಪ್ರವಾಸಿ ಪಾಕಿಸ್ಥಾನ ವಿರುದ್ಧದ ಟಿ20 ಸರಣಿಯನ್ನು ಆಸ್ಟ್ರೇಲಿಯ 3-0 ಅಂತರದಿಂದ ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ. ಇದರೊಂದಿಗೆ ಏಕದಿನ ಸರಣಿಯಲ್ಲಿ ಅನುಭವಿಸಿದ 2-1 ಅಂತರದ ಸೋಲಿಗೆ ಪ್ರತೀಕಾರ ತೀರಿಸುವಲ್ಲಿ ಯಶಸ್ವಿಯಾಗಿದೆ.

Advertisement

ಸೋಮವಾರ ಹೋಬರ್ಟ್‌ನಲ್ಲಿ ನಡೆದ 3ನೇ ಹಾಗೂ ಅಂತಿಮ ಪಂದ್ಯವನ್ನು ಆಸ್ಟ್ರೇಲಿಯ 52 ಎಸೆತ ಬಾಕಿ ಇರುವಂತೆಯೇ 7 ವಿಕೆಟ್‌ಗಳಿಂದ ಜಯಿಸಿತು. ಪಾಕಿಸ್ಥಾನ 18.1 ಓವರ್‌ಗಳಲ್ಲಿ 117ಕ್ಕೆ ಕುಸಿದರೆ, ಆಸೀಸ್‌ ಬರೀ 11.2 ಓವರ್‌ಗಳಲ್ಲಿ 3 ವಿಕೆಟಿಗೆ 118 ರನ್‌ ಬಾರಿಸಿತು. ಇದರೊಂದಿಗೆ ಪಾಕಿಸ್ಥಾನ ವಿರುದ್ಧ ಸತತವಾಗಿ ಅತ್ಯಧಿಕ 7 ಟಿ20 ಪಂದ್ಯಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯದ್ದಾಯಿತು.

ಹಿಂದಿನ ದಾಖಲೆ ನ್ಯೂಜಿಲ್ಯಾಂಡ್‌ ಹೆಸರಲ್ಲಿತ್ತು. 2023-24ರ ಸೀಸನ್‌ನಲ್ಲಿ ಅದು ಪಾಕ್‌ಗೆ ಸತತ 6 ಟಿ20 ಪಂದ್ಯಗಳಲ್ಲಿ ಸೋಲುಣಿಸಿತ್ತು.

ಆರನ್‌ ಹಾರ್ಡಿ (3 ವಿಕೆಟ್‌), ಆ್ಯಡಂ ಝಂಪ ಮತ್ತು ಸ್ಪೆನ್ಸರ್‌ ಜಾನ್ಸನ್‌ ದಾಳಿಗೆ (ತಲಾ 2 ವಿಕೆಟ್‌) ಪಾಕಿಸ್ಥಾನ ತತ್ತರಿಸಿತು. ಬಾಬರ್‌ ಆಜಂ ಸರ್ವಾಧಿಕ 41 ರನ್‌ ಹೊಡೆದರು. ಚೇಸಿಂಗ್‌ ವೇಳೆ ಮಾರ್ಕಸ್‌ ಸ್ಟೋಯಿನಿಸ್‌ ಸಿಡಿದು ನಿಂತರು. 27 ಎಸೆತಗಳಿಂದ ಅಜೇಯ 61 ರನ್‌ ಬಾರಿಸಿದರು (5 ಬೌಂಡರಿ, 5 ಸಿಕ್ಸರ್‌). ಈ ಬ್ಯಾಟಿಂಗ್‌ ಸಾಧನೆಗಾಗಿ ಸ್ಟೋಯಿನಿಸ್‌ಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-18.1 ಓವರ್‌ಗಳಲ್ಲಿ 117 (ಬಾಬರ್‌ 41, ಹಸೀಬುಲ್ಲ 24, ಹಾರ್ಡಿ 21ಕ್ಕೆ 3, ಝಂಪ 11ಕ್ಕೆ 2, ಜಾನ್ಸನ್‌ 24ಕ್ಕೆ 2). ಆಸ್ಟ್ರೇಲಿಯ-11.2 ಓವರ್‌ಗಳಲ್ಲಿ 3 ವಿಕೆಟಿಗೆ 118 (ಸ್ಟೋಯಿನಿಸ್‌ ಔಟಾಗದೆ 61, ಇಂಗ್ಲಿಸ್‌ 27).

Advertisement

ಪಂದ್ಯಶ್ರೇಷ್ಠ: ಮಾರ್ಕಸ್‌ ಸ್ಟೋಯಿನಿಸ್‌.
ಸರಣಿಶ್ರೇಷ್ಠ: ಸ್ಪೆನ್ಸರ್‌ ಜಾನ್ಸನ್‌.

 

Advertisement

Udayavani is now on Telegram. Click here to join our channel and stay updated with the latest news.

Next