Advertisement

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ನಡಾಲ್‌, ಕಿರ್ಗಿಯೋಸ್‌, ಥೀಮ್‌; ಗೆಲುವಿನ ಗೇಮ್‌

10:01 AM Jan 24, 2020 | Sriram |

ಮೆಲ್ಬರ್ನ್: ಅಗ್ರ ಶ್ರೇಯಾಂಕದ ರಫೆಲ್‌ ನಡಾಲ್‌, ಆತಿಥೇಯ ನಾಡಿನ ನಿಕ್‌ ಕಿರ್ಗಿಯೋಸ್‌, ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಮೊದಲಾದವರೆಲ್ಲ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ನಲ್ಲಿ ದ್ವಿತೀಯ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

“ರಾಡ್‌ ಲೆವರ್‌ ಅರೆನಾ’ದಲ್ಲಿ ಸಾಗಿದ ಪಂದ್ಯದಲ್ಲಿ ರಫೆಲ್‌ ನಡಾಲ್‌ ಅವರಿಗೆ ಆರ್ಜೆಂಟೀನಾದ ಎಡಗೈ ಆಟಗಾರ ಫೆಡೆರಿಕೊ ಡೆಲ್ಬೊನಿಸ್‌ ಸ್ವಲ್ಪ ಮಟ್ಟಿಗೆ ಬೆವರಿಳಿಸಿದರೂ ಅವರಿಗೆ ಸ್ಪೇನಿಗನ ಅನುಭವಕ್ಕೆ ಸಾಟಿಯಾಗಲಿಲ್ಲ. ನಡಾಲ್‌ ಈ ಪಂದ್ಯವನ್ನು 6-3, 7-6 (7-4), 6-1 ಅಂತರದಿಂದ ಗೆದ್ದರು.

“ಇದೊಂದು ಕಠಿನ ಪಂದ್ಯವಾಗಿತ್ತು. ಬ್ರೇಕ್‌ ಪಾಯಿಂಟ್‌ನ ಸಾಕಷ್ಟು ಅವಕಾಶಗಳನ್ನು ವ್ಯರ್ಥಗೊಳಿಸಿದೆ. ಆದರೆ 3ನೇ ಗೇಮ್‌ ವೇಳೆ ಹೆಚ್ಚು ರಿಲ್ಯಾಕ್ಸ್‌ ಆದೆ. ಹೆಚ್ಚು ಆಕ್ರಮಣಕಾರಿಯಾಗಿ ಆಡಿದೆ’ ಎಂದು ನಡಾಲ್‌ ಪ್ರತಿಕ್ರಿಯಿಸಿದ್ದಾರೆ. ನಡಾಲ್‌ ಅವರಿನ್ನು ತಮ್ಮದೇ ದೇಶದ ಪಾಬ್ಲೊ ಕರೆನೊ ಬುಸ್ಟ ವಿರುದ್ಧ ಆಡಲಿದ್ದಾರೆ. ಬುಸ್ಟ 6-4, 6-1, 1-6, 6-4 ಅಂತರದಿಂದ ಜರ್ಮನಿಯ ಪೀಟರ್‌ ಗೊಜೋವಿಕ್‌ ಅವರಿಗೆ ಸೋಲುಣಿಸಿದರು.

ಗೇಮ್‌ ಆಫ್ ದಿ ಡೇ
ಡೊಮಿನಿಕ್‌ ಥೀಮ್‌ ಅವರದು “ಗೇಮ್‌ ಆಫ್ ದಿ ಡೇ’ ಎನಿಸಿತು. ಅವರು ತವರಿನ ಅಲೆಕ್ಸ್‌ ಬೋಲ್ಟ್ ವಿರುದ್ಧ ಸೋಲಿನ ದವಡೆಯಿಂದ ಪಾರಾಗಿ ಬಂದದ್ದೇ ಒಂದು ಪವಾಡ. ಥೀಮ್‌ ಅವರ ಗೆಲುವಿನ ಅಂತರ 6-2, 5-7, 6-7 (5-7), 6-1, 6-2.

ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ 4 ಸೆಟ್‌ಗಳ ಹೋರಾಟ ನಡೆಸಿ ಫ್ರಾನ್ಸ್‌ನ ಗಿಲ್ಲೆಸ್‌ ಸಿಮೋನ್‌ ಅವರಿಗೆ 6-2, 6-4, 4-6, 7-5 ಅಂತರದ ಸೋಲುಣಿಸಿದರು.

Advertisement

ಸ್ವಿಜರ್‌ಲ್ಯಾಂಡಿನ ಸ್ಟಾನಿಸ್ಲಾಸ್‌ ವಾವ್ರಿಂಕ ಅವರದು 5 ಸೆಟ್‌ಗಳ ಹೋರಾಟವಾಗಿತ್ತು. ಇಟಲಿಯ ಆ್ಯಂಡ್ರಿಯಾಸ್‌ ಸೆಪ್ಪಿ ವಿರುದ್ಧ ಭಾರೀ ಸೆಣಸಾಟ ನಡೆಸಿದ ವಾವ್ರಿಂಕ 4-6, 7-5, 6-3, 3-6, 6-4 ಸೆಟ್‌ಗಳ ಗೆಲುವು ಸಾಧಿಸಿ ನಿಟ್ಟುಸಿರೆಳೆದರು. ಇವರ 3ನೇ ಸುತ್ತಿನ ಎದುರಾಳಿ ಅಮೆರಿಕದ ದೈತ್ಯ ಹೊಡೆತಗಳ ಆಟಗಾರ ಜಾನ್‌ ಇಸ್ನರ್‌.ರಶ್ಯದ ಡ್ಯಾನಿಲ್‌ ಮೆಡ್ವಡೇವ್‌ ಅವರಿಗೆ ಸುಲಭ ಜಯ ಒಲಿಯಿತು. ಅವರು ಸ್ಪೇನಿನ ಪೆಡ್ರೊ ಮಾರ್ಟಿನೆಜ್‌ ಪೋರ್ಟೆರೊ ವಿರುದ್ಧ 7-5, 6-2, 6-3ರಿಂದ ಗೆದ್ದು ಬಂದರು.

ಹಾಲೆಪ್‌, ಸ್ವಿಟೋಲಿನಾ ಗೆಲುವಿನ ಯಾನ
ವನಿತಾ ಸಿಂಗಲ್ಸ್‌ನಲ್ಲಿ ಅವಳಿ ಗ್ರ್ಯಾನ್‌ಸ್ಲಾಮ್‌ ವಿಜೇತೆ ಸಿಮೋನಾ ಹಾಲೆಪ್‌, ಎಲಿನಾ ಸ್ವಿಟೋಲಿನಾ, ಯುಲಿಯಾ ಪುಟಿನ್ಸೇವಾ ಮೊದಲಾದವರೆಲ್ಲ ಮೂರನೇ ಸುತ್ತಿಗೆ ಏರಿದ್ದಾರೆ.

ಮಾಜಿ ನಂಬರ್‌ ವನ್‌ ಆಟಗಾರ್ತಿ ಹಾಲೆಪ್‌ ಬ್ರಿಟನ್ನಿನ 164ರಷ್ಟು ಕೆಳ ಕ್ರಮಾಂಕದ ಹ್ಯಾರಿಟ್‌ ಡಾರ್ಟ್‌ ವಿರುದ್ಧ 6-2, 6-4 ಅಂತರದ ಮೇಲುಗೈ ಸಾಧಿಸಿದರು. ಹಾಲೆಪ್‌ ಅವರಿನ್ನು ಕಜಕಿಸ್ಥಾನದ ಯುಲಿಯಾ ಪುಟಿನ್ಸೇವಾ ಸವಾಲಿಗೆ ಸಜ್ಜಾಗಬೇಕಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಪುಟಿನ್ಸೇವಾ ಭಾರೀ ಹೋರಾಟದ 6-4, 2-6, 7-5 ಅಂತರದಿಂದ ಗೆದ್ದು ಬಂದರು.

ಉಕ್ರೇನಿನ 5ನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ 6-2, 7-6 (8-6)ರಿಂದ ಅಮೆರಿಕದ ಲಾರೆನ್‌ ಡೇವಿಸ್‌ ಅವರನ್ನು ಪರಾಭವಗೊಳಿಸಿದರು. ಸ್ವಿಟೋಲಿನ ಅವರ ಮುಂದಿನ ಎದುರಾಳಿ ಸ್ಪೇನಿನ ಗಾರ್ಬಿನ್‌ ಮುಗುರುಜಾ. ಆಸ್ಟ್ರೇಲಿಯದ ಅಜ್ಲಾ ಟೋಮ್ಲಾನೊವಿಕ್‌ ಅವರನ್ನು ಮುಗುರುಜಾ 6-3, 3-6, 6-3ರಿಂದ ಮಣಿಸಿದರು.

ಗಾಯಾಳಾಗಿ ಹೊರಬಿದ್ದ ಸಾನಿಯಾ
ಸಾನಿಯಾ ಮಿರ್ಜಾ ಅವರ ಗ್ರ್ಯಾನ್‌ಸ್ಲಾಮ್‌ ಪುನರಾಗಮನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಬಲ ಕಾಲಿನ ಸ್ನಾಯು ಸೆಳೆತದಿಂದಾಗಿ ಅವರು “ಆಸ್ಟ್ರೇಲಿನ್‌ ಓಪನ್‌’ ಕೂಟದಿಂದ ಹಿಂದೆ ಸರಿದಿದ್ದಾರೆ. ಸಾನಿಯಾ ಉಕ್ರೇನಿನ ನಾದಿಯಾ ಕಿಶೆನಾಕ್‌ ಜತೆಗೂಡಿ ಕಣಕ್ಕಿಳಿದಿದ್ದರು. ಗುರುವಾರ ನಡೆದ ವನಿತಾ ಡಬಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಚೀನದ ಕ್ಸಿನ್‌ ಯುನ್‌ ಹಾನ್‌ ಮತ್ತು ಲಿನ್‌ ಝು ವಿರುದ್ಧ 2-6, 0-1 ಹಿನ್ನಡೆಯಲ್ಲಿರುವಾಗ ಕಾಲು ನೋವು ತೀವ್ರಗೊಂಡ ಕಾರಣ ಪಂದ್ಯವನ್ನು ತ್ಯಜಿಸಿದರು.

ಅಭ್ಯಾಸದ ವೇಳೆ ಸಾನಿಯಾ ಮಿರ್ಜಾ ಅವರ ಕಾಲಿಗೆ ಏಟಾಗಿತ್ತು. ಆದರೂ ಆಡಲಿಳಿದಿದ್ದರು. ನೋವಿನಿಂದಾಗಿ ಅವರಿಗೆ ಅಂಕಣದಲ್ಲಿ ಸಲೀಸಾಗಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಇದು ಅವರ ಸರ್ವ್‌ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತು. ಇನ್ನೊಂದೆಡೆ ಕಿಶೆನಾಕ್‌ ಕೂಡ ನಿರೀಕ್ಷಿತ ಆಟ ಪ್ರದರ್ಶಿಸುವಲ್ಲಿ ವಿಫ‌ಲರಾಗಿದ್ದರು.
ಕಳೆದ ವಾರವಷ್ಟೇ ಸಾನಿಯಾ-ನಾದಿಯಾ ಜೋಡಿ ಹೋಬರ್ಟ್‌ ನಲ್ಲಿ ಪ್ರಶಸ್ತಿ ಎತ್ತಿದ್ದರು. ಇದರಿಂದ ಆಸ್ಟ್ರೇಲಿಯನ್‌ ಓಪನ್‌ನಲ್ಲೂ ಭಾರೀ ನಿರೀಕ್ಷೆ ಮೂಡಿಸಿದ್ದರು.

ಬಾಲ್‌ ಗರ್ಲ್ಗೆ ಢಿಕ್ಕಿ ಹೊಡೆದ ನಡಾಲ್‌
ಗುರುವಾರದ ದ್ವಿತೀಯ ಸುತ್ತಿನ ಪಂದ್ಯದ ವೇಳೆ ರಫೆಲ್‌ ನಡಾಲ್‌ ಆಯತಪ್ಪಿ ಬಾಲ್‌ ಗರ್ಲ್ಗೆ ಢಿಕ್ಕಿ ಹೊಡೆದಿದ್ದು, ಆಗ ಆಕೆ ಉರುಳಿ ಬಿದ್ದ ಘಟನೆ ಸಂಭವಿಸಿದೆ. ಕೂಡಲೇ ಆಕೆಯತ್ತ ತೆರಳಿದ ನಡಾಲ್‌ ಮತ್ತು ಅವರ ಎದುರಾಳಿ ಡೆಲ್ಬೊನಿಸ್‌ ಈ ಘಟನೆಗಾಗಿ ಕ್ಷಮೆ ಯಾಚಿಸಿದರು. ಇನ್ನೂ ಮುಂದುವರಿದ ನಡಾಲ್‌, ಆಕೆಯ ಕೆನ್ನೆಗೊಂದು ಮುತ್ತು ಕೊಟ್ಟು ಸಮಾಧಾನ ಹೇಳಿದರು. ಘಟನೆಯಿಂದ ವಿಚಲಿತರಾದರೂ ಆ ಹುಡುಗಿ ನಗುತ್ತಲೇ ಎದ್ದು ನಿಂತಳು. ವೀಕ್ಷಕರೆಲ್ಲ ಚಪ್ಪಾಳೆ ತಟ್ಟಿ ನಡಾಲ್‌ ಕ್ರೀಡಾಸ್ಫೂರ್ತಿಯನ್ನು ಸ್ವಾಗತಿಸಿ, ಬಾಲ್‌ ಗರ್ಲ್ಗೆ ನೈತಿಕ ಸ್ಥೈರ್ಯ ತುಂಬಿದರು.

ನಡಾಲ್‌ ರಿಟರ್ನ್ ಶಾಟ್‌ ಬಾರಿಸುವ ವೇಳೆ ಈ ಘಟನೆ ಸಂಭವಿಸಿತು. ಆಗ ಆ ಹುಡುಗಿ ಚೇರ್‌ ಅಂಪಾಯರ್‌ ಪಕ್ಕ ನಿಂತಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next