Advertisement

ಆಸ್ಟ್ರೇಲಿಯನ್‌ ಓಪನ್‌ ಡಬಲ್ಸ್‌: ಮೂರನೇ ಸುತ್ತಿಗೇರಿದ ಸಾನಿಯಾ ಜೋಡಿ

03:45 AM Jan 21, 2017 | |

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಡಬಲ್ಸ್‌ನಲ್ಲಿ ಶುಕ್ರವಾರ ಭಾರತ ಮಿಶ್ರ ಫ‌ಲಿತಾಂಶ ದಾಖಲಿಸಿದೆ. ವನಿತೆಯರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ-ಬಾಬೊìರಾ ಸ್ಟ್ರೈಕೋವಾ ಜೋಡಿ 3ನೇ ಸುತ್ತಿಗೆ ಮುನ್ನಡೆದರೆ, ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ-ಪಾಬ್ಲೊ ಕ್ಯುವಾಸ್‌ ದ್ವಿತೀಯ ಸುತ್ತಿನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ.

Advertisement

ಸಾನಿಯಾ ಮಿರ್ಜಾ ಹಾಗೂ ಜೆಕ್‌ ಆಟಗಾರ್ತಿ ಬಾಬೊìರಾ ಸ್ಟ್ರೈಕೋವಾ ಸೇರಿಕೊಂಡು ಆಸ್ಟ್ರೇಲಿಯದ ಸಮಂತಾ ಸ್ಟೋಸರ್‌-ಚೀನದ ಶುಯಿ ಜಾಂಗ್‌ ವಿರುದ್ಧ ಒಂದು ಗಂಟೆ, 21 ನಿಮಿಷಗಳ ಕಾದಾಟದ ಬಳಿಕ 6-1, 6-4 ಅಂತರದ ಜಯ ಸಾಧಿಸಿದರು. ಇವರಿನ್ನು ಜಪಾನಿನ ಎರಿ ಹೊಝುಮಿ-ಮಿಯು ಕಾಟೊ ವಿರುದ್ಧ ಸೆಣಸಲಿದ್ದಾರೆ.

ಮೊದಲ ಸೆಟ್‌ನಲ್ಲಿ 4-0 ಮುನ್ನಡೆ ಸಾಧಿಸುವ ಮೂಲಕ ಸಾನಿಯಾ-ಸ್ಟ್ರೈಕೋವಾ ಪ್ರಾಬಲ್ಯ ಮೆರೆದರು. ಆದರೆ ದ್ವಿತೀಯ ಸೆಟ್‌ನಲ್ಲಿ ಸಮಂತಾ-ಜಾಂಗ್‌ ತಿರುಗಿ ಬೀಳುವ ಸೂಚನೆ ನೀಡಿದರು. 3-0 ಮುನ್ನಡೆಯೊಂದಿಗೆ ದೌಡಾಯಿಸಿದರು. ಈ ಹಂತದಲ್ಲಿ ಇಂಡೋ-ಜೆಕ್‌ ಆಟಗಾರ್ತಿಯರು, ಅದರಲ್ಲೂ ಸಾನಿಯಾ ಮಿರ್ಜಾ ದಿಟ್ಟ ಪ್ರದರ್ಶನವೊಂದನ್ನು ನೀಡಿದರು. ಪಂದ್ಯ 3-3 ಸಮಬಲಕ್ಕೆ ಬಂತು. ಬಳಿಕ 5-4ರ ಮುನ್ನಡೆಯೂ ಲಭಿಸಿತು. ಅಂತಿಮ ಅಂಕದ “ಫೈನಲ್‌ ಗೇಮ್‌’ 13 ನಿಮಿಷಗಳ ಕಾಲ ಸಾಗಿತು.

3 ಸೆಟ್‌ಗಳ ಹೋರಾಟ
ಪುರುಷರ ಡಬಲ್ಸ್‌ನಲ್ಲಿ ನೂತನ ಜತೆಗಾರ, ಉರುಗ್ವೆಯ ಪಾಬ್ಲೊ ಕ್ಯುವಾಸ್‌ ಜತೆಗೂಡಿ ರೋಹನ್‌ ಬೋಪಣ್ಣ ಆಡಲಿಳಿದಿದ್ದರು. ಇವರಿಗೆ 15ನೇ ಶ್ರೇಯಾಂಕ ಲಭಿಸಿತ್ತು. ಆದರೆ ದ್ವಿತೀಯ ಸುತ್ತಿನಲ್ಲಿ ದಿಟ್ಟ ಹೋರಾಟ ನೀಡಿಯೂ ತವರಿನ ಶ್ರೇಯಾಂಕ ರಹಿತ ಜೋಡಿಯಾದ ಅಲೆಕ್ಸ್‌ ಬೋಲ್ಟ್-ಬ್ರಾಡ್ಲಿ ಮೌಸ್ಲಿ ಕೈಯಲ್ಲಿ 6-2, 6-7 (2), 4-6 ಅಂತರದಿಂದ ಸೋಲುಂಡರು. ಒಂದು ಗಂಟೆ, 55 ನಿಮಿಷಗಳ ತನಕ ಈ ಸ್ಪರ್ಧೆ ಸಾಗಿತು.

ಇದರೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಭಾರತದ ಹೋರಾಟ ಕೊನೆಗೊಂಡಿದೆ. ಇದಕ್ಕೂ ಮುನ್ನ ಲಿಯಾಂಡರ್‌ ಪೇಸ್‌-ಆಂದ್ರೆ ಸಾ (ಬ್ರಝಿಲ್‌), ಪುರವ್‌ ರಾಜ-ದಿವಿಜ್‌ ಶರಣ್‌ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ನಿರ್ಗಮಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next