Advertisement

ಮಾರ್ಗರೇಟ್‌ ದಾಖಲೆ ಸರಿಗಟ್ಟಿಯಾರೇ ಸೆರೆನಾ?

12:45 AM Jan 14, 2019 | |

ಮೆಲ್ಬರ್ನ್: ವರ್ಷಾರಂಭದ ಗ್ರ್ಯಾನ್‌ಸ್ಲಾಮ್‌ “ಆಸ್ಟ್ರೇಲಿಯನ್‌ ಓಪನ್‌’ಗೆ “ಮೆಲ್ಬರ್ನ್ ಪಾರ್ಕ್‌’ ಸಿಂಗರಿಸಿಕೊಂಡು ನಿಂತಿದೆ. ಮುಂದಿನೆರಡು ವಾರಗಳ ಕಾಲ ಇಲ್ಲಿ ರ್ಯಾಕೆಟ್‌ ಮಹಾಸಮರವೇ ನಡೆಯಲಿದೆ. ಆರಂಭಿಕ ಸುತ್ತಿನ ಆಘಾತ, ಸ್ಟಾರ್‌ ಟೆನಿಸಿಗರ ಪತನ, ಯುವ ಆಟಗಾರರ ಅಚ್ಚರಿಯ ಓಟಗಳಿಗೆಲ್ಲ ಈ ಟೂರ್ನಿ ಸಾಕ್ಷಿಯಾಗುವುದರಲ್ಲಿ ಅನುಮಾನವಿಲ್ಲ.

Advertisement

ಇವೆಲ್ಲದರ ನಡುವೆ ಅಸಾಮಾನ್ಯ ಸಾಧನೆಗಳಿಗೂ ಈ ಪಂದ್ಯಾವಳಿ ತೆರೆದುಕೊಳ್ಳಲಿದೆ. ಇವುಗಳಲ್ಲಿ ಮುಖ್ಯವಾದದ್ದು ಸೆರೆನಾ ವಿಲಿಯಮ್ಸ್‌ 24ನೇ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದು ಮಾರ್ಗರೇಟ್‌ ಕೋರ್ಟ್‌ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿದೂಗಿಸುವರೇ ಎಂಬುದು!

ಮೆಲ್ಬರ್ನ್ನಲ್ಲೇ ಕೊನೆಯ ಪ್ರಶಸ್ತಿ
2 ವರ್ಷಗಳ ಹಿಂದೆ ಇದೇ ಮೆಲ್ಬರ್ನ್ ಪಾರ್ಕ್‌ನಲ್ಲಿ ಸೆರೆನಾ ವಿಲಿಯಮ್ಸ್‌ 23ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನೆತ್ತಿದ್ದರು. ಸ್ಟೆಫಿ ಗ್ರಾಫ್ ಅವರ 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ದಾಖಲೆಯನ್ನು ಮುರಿದಿದ್ದರು. ಆಗ ಸೆರೆನಾ 8 ವಾರಗಳ ಗರ್ಭಿಣಿ. ಸದ್ಯ ಇದೇ ಅವರ ಕೊನೆಯ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಾಗಿದೆ.

ತಾಯಿಯಾದ ಬಳಿಕ ಕಳೆದ ವರ್ಷ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದ 37ರ ಸೆರೆನಾ, ತವರಿನ ಯುಎಸ್‌ ಓಪನ್‌ ಫೈನಲ್‌ ತನಕ ಸಾಗಿದ್ದು ಅಸಾಮಾನ್ಯ ಸಾಧನೆ ಎನಿಸಿದೆ. ಅಲ್ಲಿ ಜಪಾನಿನ ನವೋಮಿ ಒಸಾಕಾ ವಿರುದ್ಧ ಸೋಲನುಭವಿಸಿ ಮಾರ್ಗರೇಟ್‌ ದಾಖಲೆಯನ್ನು ಸರಿದೂಗಿಸುವ ಅವಕಾಶವನ್ನು ಕಳೆದುಕೊಂಡರು. ಹೀಗಾಗಿ ಅಮೆರಿಕನ್‌ ಆಟಗಾರ್ತಿಯೀಗ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಮೇಲುಗೈ ಸಾಧಿಸಲು ಹೆಚ್ಚು ಫಿಟ್‌ ಆಗಿ ಬಂದಿದ್ದಾರೆ.

ಸೆರೆನಾ ಸವಾಲು ಸುಲಭದ್ದಲ್ಲ
ಆದರೆ ಸೆರೆನಾ ಮುಂದಿರುವ ಸವಾಲು ಸುಲಭದ್ದಲ್ಲ. ಯುವ ಆಟಗಾರ್ತಿಯರು ಭರದಿಂದ ಮೇಲೆ ಬರುತ್ತಿರುವ ಇಂದಿನ ದಿನಗಳಲ್ಲಿ ಸೆರೆನಾ ಅವರಂಥ ಸೀನಿಯರ್‌ಗಳು ಅನಿರೀಕ್ಷಿತ ಒತ್ತಡಕ್ಕೆ ಸಿಲುಕಬೇಕಾಗುತ್ತದೆ. ಕಳೆದ ಬಾರಿಯ ಚಾಂಪಿಯನ್‌ ಕ್ಯಾರೋಲಿನ್‌ ವೋಜ್ನಿಯಾಕಿ, ರನ್ನರ್‌ ಅಪ್‌ ಆಗಿದ್ದ ನಂ.1 ಖ್ಯಾತಿಯ ಸಿಮೋನಾ ಹಾಲೆಪ್‌, ದ್ವಿತೀಯ ರ್‍ಯಾಂಕಿಂಗ್‌ನ ಆ್ಯಂಜೆಲಿಕ್‌ ಕೆರ್ಬರ್‌, ನವತಾರೆ ನವೋಮಿನ ಒಸಾಕಾ, ಸ್ಥಳೀಯ ಆಶಾಕಿರಣ ಆ್ಯಶ್ಲಿ ಬಾರ್ಟಿ, ಸಿಡ್ನಿ ಚಾಂಪಿಯನ್‌ ಪೆಟ್ರಾ ಕ್ವಿಟೋವಾ, ಮಾಜಿ ನಂಬರ್‌ ವನ್‌ ಗಾರ್ಬಿನ್‌ ಮುಗುರುಜಾ, ಮರಿಯಾ ಶರಪೋವಾ ಅವರೆಲ್ಲ ಈಗಾಗಲೇ ಮೆಲ್ಬರ್ನ್ ಮೆರೆದಾಟಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ಇವರಲ್ಲಿ ಕೆಲವರಾದರೂ ಸೆರೆನಾಗೆ ಸವಾಲಾಗಿ ಪರಿಣಮಿಸಿಬಹುದು. ಜರ್ಮನಿಯ ತಜಾನಾ ಮರಿಯಾ ವಿರುದ್ಧ ಮಂಗಳವಾರ ಸೆರೆನಾ ತಮ್ಮ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.

Advertisement

ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ಸಾಧಕಿಯರು
1. ಮಾರ್ಗರೇಟ್‌ ಕೋರ್ಟ್‌    24
2. ಸೆರೆನಾ ವಿಲಿಯಮ್ಸ್‌    23
3. ಸ್ಟೆಫಿ ಗ್ರಾಫ್    22
4. ಹೆಲೆನ್‌ ವಿಲ್ಸ್‌    19
5. ಕ್ರಿಸ್‌ ಎವರ್ಟ್‌    18
6. ಮಾರ್ಟಿನಾ ನವ್ರಾಟಿಲೋವಾ    18
7. ಬಿಲ್ಲಿ ಜೀನ್‌ ಕಿಂಗ್‌    12

Advertisement

Udayavani is now on Telegram. Click here to join our channel and stay updated with the latest news.

Next