Advertisement

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

10:30 PM Jan 26, 2022 | Team Udayavani |

ಮೆಲ್ಬರ್ನ್: ಕೆನಡಾದ ಫೆಲಿಕ್ಸ್‌ ಔಗರ್‌ ಅಲಿಯಾಸಿಮ್‌ ವಿರುದ್ಧದ “ಫೈವ್‌ ಸೆಟ್‌ ಥ್ರಿಲ್ಲರ್‌’ನಲ್ಲಿ ಗೆದ್ದು ಬಂದ ರಶ್ಯದ ಡ್ಯಾನಿಲ್‌ ಮೆಡ್ವೆಡೇವ್‌ ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 4 ಗಂಟೆ, 42 ನಿಮಿಷಗಳ ಈ ಮ್ಯಾರಥಾನ್‌ ಕಾಳಗದಲ್ಲಿ ಮೆಡ್ವೆಡೇವ್‌ 6-7 (4-7), 3-6, 7-6 (7-2), 7-5, 6-4 ಅಂತರದ ಗೆಲುವು ಸಾಧಿಸಿದರು. ಸೆಮಿಫೈನಲ್‌ನಲ್ಲಿ ಇವರು ಸ್ಟೆಫ‌ನಸ್‌ ಸಿಸಿಪಸ್‌ ವಿರುದ್ಧ ಸೆಣಸಬೇಕಿದೆ.

Advertisement

5 ಸೆಟ್‌ಗಳಿಗೆ ವಿಸ್ತರಿಸಲ್ಪಟ್ಟಿದ್ದರಿಂದ ಆಸ್ಟ್ರೇಲಿಯನ್‌ ಓಪನ್‌ ಪಾಲಿಗೆ ಇದೊಂದು ಐತಿಹಾಸಿಕ ಪಂದ್ಯವೆನಿಸಿತು. ಕೂಟದ ಚರಿತ್ರೆಯಲ್ಲಿ 3 ಕ್ವಾರ್ಟರ್‌ ಫೈನಲ್‌ ಪಂದ್ಯಗಳು 5 ಸೆಟ್‌ಗಳ ತನಕ ಸಾಗಿದ್ದು ಇದೇ ಮೊದಲು.

ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ 3ನೇ ಸಲ ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌ನಲ್ಲಿ “ಲಕ್ಕಿ’ ಎನಿಸಿಕೊಳ್ಳಬಹುದೇ ಎಂಬ ಕುತೂಹಲ ಟೆನಿಸ್‌ ಅಭಿಮಾನಿಗಳದ್ದು. ಅವರು ಇಟಲಿಯ ಜಾನಿಕ್‌ ಸಿನ್ನರ್‌ ವಿರುದ್ಧ 6-3, 6-4, 6-2 ಅಂತರದ ನೇರ ಸೆಟ್‌ಗಳ ಗೆಲುವನ್ನೇನೋ ಸಾಧಿಸಿದರು. ಆದರೆ ಇನ್ನೊಂದು ಕ್ವಾರ್ಟರ್‌ ಫೈನಲ್‌ ಪಂದ್ಯವನ್ನು 5 ಸೆಟ್‌ಗಳ ಜಿದ್ದಾಜಿದ್ದಿ ಕಾದಾಟದಲ್ಲಿ ಗೆದ್ದು ಬಂದ ಮೆಡ್ವೆಡೇವ್‌ ಸವಾಲು ಸುಲಭದ್ದಲ್ಲ. 4ನೇ ಶ್ರೇಯಾಂಕದ ಸಿಸಪಸ್‌ 2019 ಮತ್ತು 2021ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಉಪಾಂತ್ಯ ತಲುಪಿದರೂ ಈ ಹರ್ಡಲ್ಸ್‌ ದಾಟುವಲ್ಲಿ ವಿಫ‌ಲರಾಗಿದ್ದರು.

ವನಿತಾ ಸಿಂಗಲ್ಸ್‌ ವಿಭಾಗ
ಫ್ರೆಂಚ್‌ ಓಪನ್‌ ಚಾಂಪಿಯನ್‌, ಪೋಲೆಂಡ್‌ನ‌ ಐಗಾ ಸ್ವಿಯಾಟೆಕ್‌ ಇನ್ನೇನು ಸೋತು ಹೊರಬಿದ್ದರು ಎಂಬ ಹಂತದಲ್ಲಿ ತಿರುಗಿ ಬಿದ್ದರು! ಮೊದಲ ಸಲ ಎದುರಾದ ಸ್ವಿಯಾಟೆಕ್‌ ಹಾಗೂ ಎಸ್ತೋನಿಯಾದ ಕಯಾ ಕನೆಪಿ ನಡುವಿನ ಹೋರಾಟ 3 ಗಂಟೆ, ಒಂದು ನಿಮಿಷ ಕಾಲ ಸಾಗಿತು. ಮೊದಲ ಸೆಟ್‌ನಲ್ಲಿ ಕನೆಪಿ ಸುಲಭ ಜಯ ಸಾಧಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ ದ್ವಿತೀಯ ಸೆಟ್‌ ಟೈ ಬ್ರೇಕರ್‌ಗೆ ವಿಸ್ತರಿಸಲ್ಪಟ್ಟಿತು. ಇಲ್ಲಿ ಸ್ವಿಯಾಟೆಕ್‌ಗೆ ಅದೃಷ್ಟ ಕೈ ಹಿಡಿಯಿತು. ನಿರ್ಣಾಯಕ ಸೆಟ್‌ನಲ್ಲಿ ಸ್ವಿಯಾಟೆಕ್‌ ಹೆಚ್ಚಿನ ಆತಂಕ ಎದುರಿಸಲಿಲ್ಲ; ಕನೆಪಿಗೆ ಲಕ್‌ ಇರಲಿಲ್ಲ. ಇದು ಸ್ವಿಯಾಟೆಕ್‌-ಕನೆಪಿ ನಡುವಿನ ಮೊದಲ ಮುಖಾಮುಖೀ ಆಗಿತ್ತು. ಕೆಲವು ಬ್ರೇಕ್‌ ಪಾಯಿಂಟ್‌ ಅವಕಾಶಗಳನ್ನು ವ್ಯರ್ಥಗೊಳಿಸಿದ್ದರಿಂದ ಐಗಾ ಸ್ವಿಯಾಟೆಕ್‌ಗೆ ಗೆಲುವು ಕಠಿನವಾಗಿ ಪರಿಣಮಿಸಿತು.
ಸ್ವಿಯಾಟೆಕ್‌ ಅವರ ಸೆಮಿಫೈನಲ್‌ ಎದುರಾಳಿ ಅಮೆರಿಕದ 27ನೇ ಶ್ರೇಯಾಂಕಿತ ಆಟಗಾರ್ತಿ ಡೇನಿಯಲ್‌ ಕಾಲಿನ್ಸ್‌. ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ಫ್ರಾನ್ಸ್‌ನ ಅಲೈಜ್‌ ಕಾರ್ನೆಟ್‌ ವಿರುದ್ಧ 7-5, 6-1 ಅಂತರದ ಮೇಲುಗೈ ಸಾಧಿಸಿದರು. ಕಾರ್ನೆಟ್‌ಗೆಇದು ಮೊದಲ ಗ್ರ್ಯಾನ್‌ಸ್ಲಾಮ್‌ ಕ್ವಾರ್ಟರ್‌ ಫೈನಲ್‌ ಆಗಿತ್ತು.

ಕ್ರಿಕೆಟ್‌ ಅಭ್ಯಾಸ ನಡೆಸಿದ ಆ್ಯಶ್ಲಿ ಬಾರ್ಟಿ
ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌ಗ‌ೂ ಮುನ್ನ ಆತಿಥೇಯ ದೇಶದ ಆ್ಯಶ್ಲಿ ಬಾರ್ಟಿ ಕ್ರಿಕೆಟ್‌ ಅಭ್ಯಾಸ ನಡೆಸಿ ಗಮನ ಸೆಳೆದಿದ್ದಾರೆ. ಮೊದಲ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಜಯಿಸುವ ನಿರೀಕ್ಷೆಯಲ್ಲಿರುವ ಬಾರ್ಟಿ ಬುಧವಾರ “ಮೆಲ್ಬರ್ನ್ ಪಾರ್ಕ್‌’ನ ಹೊಟೇಲ್‌ನಲ್ಲಿ ತನ್ನ ಕೋಚಿಂಗ್‌ ಸಿಬಂದಿಯೊಂದಿಗೆ ಕ್ರಿಕೆಟ್‌ ಆಡಿದರು. ಕಿಟ್‌ನಲ್ಲಿ ಅವರು ಕ್ರಿಕೆಟ್‌ ಪರಿಕರವನ್ನೇ ತುಂಬಿಕೊಂಡು ಬಂದಿದ್ದರು. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಜತೆಗೆ ಬೌಲಿಂಗ್‌ ಮಾಡಿಯೂ ಮಿಂಚಿದರು.

Advertisement

ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೂ ಮುನ್ನ ಆ್ಯಶ್ಲಿ ಬಾರ್ಟಿ ಟೆನಿಸ್‌ ರ್ಯಾಕೆಟ್‌ನಲ್ಲೇ ಲೆಗ್‌ ಗ್ಲಾನ್ಸ್‌ ಹೊಡೆತ ಬಾರಿಸುವ ಮೂಲಕ ಅಭ್ಯಾಸ ನಡೆಸಿದ್ದರು.

2011ರಲ್ಲಿ ಟೆನಿಸ್‌ ಆರಂಭಿಸಿದ ಆ್ಯಶ್ಲಿ ಬಾರ್ಟಿ, ಜೂನಿಯರ್‌ ಮಟ್ಟದಲ್ಲಿ ಯಶಸ್ಸು ಕಾಣದೆ ಕ್ರಿಕೆಟ್‌ನತ್ತ ಒಲವು ತೋರಿದ್ದರು. 2015-16ರ ವನಿತಾ ಬಿಗ್‌ ಬಾಶ್‌ ಲೀಗ್‌ನಲ್ಲೂ ಆಡಿದ್ದರು. ಬ್ರಿಸ್ಬೇನ್‌ ಹೀಟ್‌ ಪರ ಮೊದಲ ಪಂದ್ಯದಲ್ಲಿ 27 ಎಸೆತಗಳಿಂದ 39 ರನ್‌ ಬಾರಿಸಿದ ಹೆಗ್ಗಳಿಕೆ ಬಾರ್ಟಿ ಅವರದಾಗಿತ್ತು. 2015ರಲ್ಲಿ ಕ್ವೀನ್ಸ್‌ಲ್ಯಾಂಡ್‌ ಪರ ಲಿಸ್ಟ್‌ ಎ ಪಂದ್ಯವನ್ನೂ ಆಡಿದ್ದರು. ಆದರೆ ಮರು ವರ್ಷವೇ ಕ್ರಿಕೆಟ್‌ ಬಿಟ್ಟು ಮತ್ತೆ ಟೆನಿಸ್‌ ರ್ಯಾಕೆಟ್‌ ಹಿಡಿಯತೊಡಗಿದರು. ಮುಂದಿನದು ಇತಿಹಾಸ.

 

Advertisement

Udayavani is now on Telegram. Click here to join our channel and stay updated with the latest news.

Next