Advertisement

ಆಸ್ಟ್ರೇಲಿಯನ್‌ ಓಪನ್‌: ಸೆರೆನಾ ಓಟಕ್ಕೆ ಪ್ಲಿಸ್ಕೋವಾ ಬ್ರೇಕ್‌

12:30 AM Jan 24, 2019 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಆಟ ಮುಗಿದಿದೆ. ಬುಧವಾರದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಅಮೆರಿಕದ ದೈತ್ಯ ಆಟಗಾರ್ತಿಯನ್ನು 6-4, 4-6, 7-5 ಅಂತರದಿಂದ ಮಣಿಸಿ ಮೆರೆದಾಡಿದರು. ಇದರೊಂದಿಗೆ ಮಾರ್ಗರೆಟ್‌ ಕೋರ್ಟ್‌ ಅವರ 24 ಗ್ರ್ಯಾನ್‌ಸ್ಲಾಮ್‌ ದಾಖಲೆಯನ್ನು ಸರಿಗಟ್ಟುವ ಸೆರೆನಾಗೆ ಹಿನ್ನಡೆಯಾಗಿದೆ.

Advertisement

ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನಿನ ಯುವ ತಾರೆ ನವೋಮಿ ಒಸಾಕಾ ಉಕ್ರೇನ್‌ನ 6ನೇ ಶ್ರೇಯಾಂಕಿತೆ ಎಲಿನಾ ಸ್ವಿಟೋಲಿನಾ ವಿರುದ್ಧ 6-4, 6-1 ನೇರ ಸೆಟ್‌ಗಳ ಗೆಲುವು ದಾಖಲಿಸಿದರು. 21 ವರ್ಷದ ಒಸಾಕಾಗೆ ಇದು ಸತತ 2ನೇ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ಆಗಿದೆ. ಒಸಾಕಾ 1994ರ ಬಳಿಕ ಮೆಲ್ಬರ್ನ್ ಪಾರ್ಕ್‌ನ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆದ ಜಪಾನಿನ ಮೊದಲ ಆಟಗಾರ್ತಿಯೂ ಹೌದು. 1994ರಲ್ಲಿ ಕಿಮೊಕೊ ಡಾಟೆ ಆಸ್ಟ್ರೇಲಿಯನ್‌ ಓಪನ್‌ನ ಸೆಮಿಫೈನಲ್‌ ಪ್ರವೇಶಿಸಿದ್ದರು.

ಸೆರೆನಾ ಓಟಕ್ಕೆ ಬ್ರೇಕ್‌
ಸೆರೆನಾ ಭಾರೀ ಹೋರಾಟದ ಬಳಿಕ ಪ್ಲಿಸ್ಕೋವಾಗೆ ಶರಣಾದರು. ಮೊದಲ ಸೆಟ್‌ನಲ್ಲಿ ಜಯ ಸಾಧಿಸಿದ ಪ್ಲಿಸ್ಕೋವಾಗೆ ದ್ವಿತೀಯ ಸೆಟ್‌ನಲ್ಲಿ ಸೆರೆನಾ ಅಘಾತ ನೀಡಿದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಪ್ಲಿಸ್ಕೋವಾ ಪವರ್‌ಫ‌ುಲ್‌ ಪ್ರದರ್ಶನ ನೀಡಿ ಮೊದಲ ಬಾರಿಗೆ ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು.”ಸೆರೆನಾ ಪಂದ್ಯದುದ್ದಕ್ಕೂ ಅತ್ಯುತ್ತಮ ಆಟವನ್ನಾಡಿದ್ದಾರೆ. ಉಪಾಂತ್ಯ ಪ್ರವೇಶಿಸಿರುವುದಕ್ಕೆ ಖುಷಿ ಇದೆ. ಒಸಾಕಾ ಅಪಾಯಕಾರಿ ಆಟಗಾರ್ತಿ. ಆದರೆ ಸೆರೆನಾರಷ್ಟು ಅಪಾಯಕಾರಿ ಆಟಗಾರ್ತಿ ಯಾರೂ ಇಲ್ಲ ಎಂದು ನಾನು ಅಂದುಕೊಂಡಿದ್ದೇನೆ. ಒಸಾಕಾ ವಿರುದ್ದದ ಆಟವನ್ನು ನಾನು ಆನಂದಿಸುತ್ತೇನೆ’ ಎಂದು ಪ್ಲಿಸ್ಕೋವಾ ಹೇಳಿದ್ದಾರೆ.

ಸ್ವಿಟೋಲಿನಾಗೆ ಕುತ್ತಿಗೆ ನೋವು
ಮೊದಲ ಸೆಟ್‌ನಲ್ಲಿ  ಸ್ವಿಟೋಲಿನಾ ಒಸಾಕಾಗೆ ತಕ್ಕ ಪೈಪೋಟಿಯನ್ನೇ ನೀಡಿದರು. ಆದರೂ ಮುನ್ನಡೆ ಕಾಯ್ದುಕೊಂಡ ಒಸಾಕಾ ಮೊದಲ ಸೆಟ್‌ ಗೆದ್ದರು. ದ್ವಿತೀಯ ಸೆಟ್‌ ವೇಳೆ ಸ್ಟಿಟೋಲಿನಾ ಕುತ್ತಿಗೆ ನೋವಿಗಾಗಿ ಚಿಕಿತ್ಸೆ ತೆಗೆದುಕೊಳ್ಳಬೇಕಾಯಿತು. ಆಟಕ್ಕೆ ಮರಳಿದರೂ ನೋವಿನಿಂದ ಹೆಚ್ಚಿನ ಪೈಪೋಟಿ ನೀಡಲಾಗದೆ ಸೋತರು.ವನಿತಾ ಸಿಂಗಲ್ಸ್‌ ವಿಭಾಗದ ಎರಡೂ ಸೆಮಿಫೈನಲ್‌ ಪಂದ್ಯಗಳು ಗುರುವಾರ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಪ್ಲಿಸ್ಕೋವಾ-ಒಸಾಕಾ, ಇನ್ನೊಂದು ಪಂದ್ಯದಲ್ಲಿ  ಪೆಟ್ರಾ ಕ್ವಿಟೋವಾ-ಡೇನಿಯಲ್‌ ಕಾಲಿನ್ಸ್‌ ಮುಖಾಮುಖೀಯಾಗಲಿದ್ದಾರೆ.

ನಿಶಿಕೊರಿ ನಿವೃತ್ತಿ, ಸೆಮಿಗೆ ಜೊಕೋವಿಕ್‌
ನೊವಾಕ್‌ ಜೊಕೋವಿಕ್‌ 7ನೇ ಬಾರಿಗೆ ಆಸ್ಟ್ರೇಲಿಯನ್‌ ಓಪನ್‌ ಕೂಟದ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಜಪಾನಿಕ ಕೀ ನಿಶಿಕೊರಿ 2ನೇ ಸೆಟ್‌ ವೇಳೆ ಗಾಯಾಳಾಗಿ ನಿವೃತ್ತಿ ಹೇಳಿದ ಕಾರಣ ಜೊಕೋ ಸುಲಭದಲ್ಲಿ ಮುನ್ನಡೆದರು. ಆಗ ಅವರು 6-1, 4-1 ಮುನ್ನಡೆಯಲ್ಲಿದ್ದರು.

Advertisement

ಶುಕ್ರವಾರದ ಸೆಣಸಾಟದಲ್ಲಿ ಜೊಕೋವಿಕ್‌, ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ಪ್ರವೇಶಿಸಿರುವ ಫ್ರಾನ್ಸ್‌ನ ಲೂಕಾಸ್‌ ಪೌಲಿ ಅವರನ್ನು ಎದುರಿಸಲಿದ್ದಾರೆ. ಗುರುವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ರಫೆಲ್‌ ನಡಾಲ್‌ ಗ್ರೀಕ್‌ನ “ವಂಡರ್‌ಕಿಡ್‌’  ಸ್ಟೆಫ‌ನಸ್‌ ಸಿಸಿಪಸ್‌ ವಿರುದ್ಧ ಸೆಣಸಲಿದ್ದಾರೆ.

ಕೂಟದೂದ್ದಕ್ಕೂ 5 ಸೆಟ್‌ ಪಂದ್ಯಗಳನ್ನು ಆಡಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ನಿಶಿಕೊರಿ ಮೊದಲ ಸೆಟ್‌ ಸೋಲಿನ ಬಳಿಕ ಮೆಡಿಕಲ್‌ಟೈಮ್‌ಔಟ್‌ ತೆಗೆದುಕೊಂಡರು. ಚಿಕಿತ್ಸೆಯ ಬಳಿಕ ಮತ್ತೆ ಕಣಕ್ಕಿಳಿದರೂ ಆಟ ಮುಂದುವರಿಸಲಾಗದೇ ನಿರ್ಗಮಿಸಿದರು.

ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ನ ಲೂಕಾಸ್‌ ಪೌಲಿ ಕೆನಡಾದ ಮಿಲೋಸ್‌ ರಾನಿಕ್‌ ವಿರುದ್ಧ 7-6 (4-7), 6-3, 6-7 (2-7), 6-4 ಅಂತರದಿಂದ ಗೆದ್ದು ಬಂದರು.

Advertisement

Udayavani is now on Telegram. Click here to join our channel and stay updated with the latest news.

Next