ಸಿಡ್ನಿ: ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಅಕಾಲಿಕ ನಿಧನದ ಆಘಾತದಿಂದ ಕ್ರಿಕೆಟ್ ಅಭಿಮಾನಿಗಳು ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಸುದ್ದಿ ಸಿಡಿಲಿನಂತೆ ಬಡಿದೆದೆ. ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ, ಐಪಿಎಲ್ ನಲ್ಲೂ ಆಡಿದ್ದ ಆಲ್ ರೌಂಡರ್ ಆ್ಯಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ.
ಶನಿವಾರ ರಾತ್ರಿ ಕ್ವೀನ್ಸ್‌ಲ್ಯಾಂಡ್ ರಾಜ್ಯದ ಟೌನ್ಸ್‌ವಿಲ್ಲೆ ಹೊರವಲಯದಲ್ಲಿ ಸೈಮಡ್ಸ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
1998 ರಿಂದ 2009ರವರೆಗೆ ಕಾಂಗರೂ ನಾಡಿನ ಪರವಾಗಿ ಆಡಿರುವ ಸೈಮಂಡ್ಸ್, 26 ಟೆಸ್ಟ್, 198 ಏಕದಿನ ಮತ್ತು 14 ಟಿ20 ಪಂದ್ಯಗಳನ್ನಾಡಿದ್ದಾರೆ. 2008ರಿಂದ 2011ರವರೆಗೆ ಐಪಿಎಲ್ ನಲ್ಲಿ ಆಡಿರುವ ಸೈಮಂಡ್ಸ್ 39 ಪಂದ್ಯಗಳನ್ನಾಡಿದ್ದಾರೆ. ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಪರ ಸೈಮಂಡ್ಸ್ ಆಡಿದ್ದರು.
“ಆಸ್ಟ್ರೇಲಿಯನ್ ಕ್ರಿಕೆಟ್ ತನ್ನ ಅತ್ಯುತ್ತಮವಾದ ಇನ್ನೊಬ್ಬನನ್ನು ಕಳೆದುಕೊಂಡಿದೆ” ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ಲಾಚ್ಲಾನ್ ಹೆಂಡರ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ವಿಶ್ವಕಪ್‌ಗಳಲ್ಲಿ ಮತ್ತು ಕ್ವೀನ್ಸ್‌ಲ್ಯಾಂಡ್‌ನ ಶ್ರೀಮಂತ ಕ್ರಿಕೆಟ್ ಇತಿಹಾಸದ ಭಾಗವಾಗಿ ಆಸ್ಟ್ರೇಲಿಯಾದ ಯಶಸ್ಸಿನಲ್ಲಿ ಆಂಡ್ರ್ಯೂ ಪ್ರಮುಖ ಪಾತ್ರ ವಹಿಸಿದ್ದರು” ಎಂದಿದ್ದಾರೆ.
ಸೈಮಂಡ್ಸ್ ಅವರು ಆಸ್ಟ್ರೇಲಿಯನ್ ಕ್ರಿಕೆಟ್ ಕಂಡ ಅತ್ಯಂತ ನುರಿತ ಆಲ್-ರೌಂಡರ್‌ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟವರು. ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮತ್ತು ಆಫ್-ಸ್ಪಿನ್ ಹಾಗೂ ಮಧ್ಯಮ ವೇಗದ ಬೌಲಿಂಗ್ ಮಾಡುತ್ತಿದ್ದರು.