Advertisement

ಆಸೀಸ್‌ ಬಾಕ್ಸರ್‌ಗೆ ಮೊದಲ ಪದಕ ಖಾತ್ರಿ

06:50 AM Apr 05, 2018 | |

ಗೋಲ್ಡ್‌ಕೋಸ್ಟ್‌: ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನ ಮೊದಲ ಪದಕ ಗೆಲ್ಲುವ ಅದೃಷ್ಟಶಾಲಿ ಯಾರು ಎಂಬ ಕುತೂಹಲದ ಬೆನ್ನಲ್ಲೇ ತವರಿನ ವನಿತಾ ಬಾಕ್ಸರ್‌ ಟೇಲಾ ರಾಬರ್ಟ್‌ಸನ್‌ ಮೊದಲ ಪದಕವನ್ನು 9 ದಿನಗಳ ಮೊದಲೇ ಖಾತ್ರಿಪಡಿಸಿದ್ದಾರೆ!

Advertisement

19ರ ಹರೆಯದ ಕ್ವೀನ್ಸ್‌ಲ್ಯಾಂಡಿನ ಸನ್‌ಶೈನ್‌ ಕೋಸ್ಟ್‌ನ ಟೇಲಾ ರಾಬರ್ಟ್‌ಸನ್‌ ವನಿತೆಯರ 51 ಕೆಜಿ ವಿಭಾಗದ ಸ್ಪರ್ಧಿ. ಈ ವಿಭಾಗದಲ್ಲಿ ಸ್ಪರ್ಧಿಸುವವರು 7 ಮಂದಿ ಮಾತ್ರ. ಇವರಲ್ಲಿ ರಾಬರ್ಟ್‌ಸನ್‌ಗೆ ನೇರವಾಗಿ ಸೆಮಿಫೈನಲ್‌ಗೆ ಬೈ ನೀಡಲಾಗಿದೆ. ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್‌ ಸೋತರೂ ಪದಕ ಲಭಿಸಲಿರುವುದರಿಂದ ಸದ್ಯ ರಾಬರ್ಟ್‌ಸನ್‌ ಕಂಚಿನ ಪದಕವನ್ನು ಖಾತ್ರಿ ಮಾಡಿಕೊಂಡಿದ್ದಾರೆ. ಇದು ಬೆಳ್ಳಿ ಅಥವಾ ಚಿನ್ನವಾಗಿ ಪರಿವರ್ತನೆಗೊಳ್ಳಲೂಬಹುದು. ಅಂದಹಾಗೆ ಈ ಬಾಕ್ಸಿಂಗ್‌ ಸೆಮಿಫೈನಲ್‌ ನಡೆಯುವುದು ಎ. 13ರಂದು.

“ನನಗಿನ್ನು ಕಾಯುವಷ್ಟು ವ್ಯವಧಾನವಿಲ್ಲ. ಇಂಥ ಪ್ರತಿಷ್ಠಿತ ಹಾಗೂ ಮಹಾ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸುವುದೇ ಒಂದು ಗೌರವ. ಎ. 13 ಬೇಗ ಬರಲಿ…’ ಎಂದು ಟೇಲಾ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದಿದ್ದಾರೆ. “ಇದೊಂದು ಅದೃಷ್ಟದ ಡ್ರಾ’ ಎಂಬುದು ಆಕೆಯ ಕೋಚ್‌ ಮಾರ್ಕ್‌ ಇವಾನ್ಸ್‌ ಪ್ರತಿಕ್ರಿಯೆ.

“ಕೆಲವು ವಿಭಾಗಗಳಲ್ಲಿ ಸ್ಪರ್ಧಿಗಳ ಸಂಖ್ಯೆ ಬಹಳ ಕಡಿಮೆ ಇರುತ್ತದೆ. ಕೆಲವು ಪುರುಷರ ವಿಭಾಗಗಳತ್ತ ಗಮನ ಹರಿಸಿದರೆ ಅಲ್ಲಿ 24ರಿಂದ 26 ಬಾಕ್ಸರ್‌ಗಳಿರುವುದನ್ನು ಕಾಣಬಹುದು. ರಾಬರ್ಟ್‌ಸನ್‌ಗೆ ಕಂಚಿನ ಪದಕ ಖಾತ್ರಿಯಾಗಿದೆ. ಆದರೆ ಈ ಪದಕದ ಬಣ್ಣ ಬದಲಾಗಬೇಕೆಂಬುದು ನಮ್ಮ ಅಭಿಲಾಷೆ…’ ಎಂದಿದ್ದಾರೆ ಮಾರ್ಕ್‌ ಇವಾನ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next