ಲಿಂಕನ್: ಕ್ರಿಕೆಟ್ ಶಿಶು ಪಪುವಾ ನ್ಯೂ ಗಿನಿ ಮೇಲೆ ಗದಾಪ್ರಹಾರ ಮಾಡಿದ ಆಸ್ಟೇಲಿಯ 311 ರನ್ನುಗಳ ಜಯಭೇರಿಯೊಂದಿಗೆ “ಬಿ’ ವಿಭಾಗದಿಂದ ಅಂಡರ್-19 ವಿಶ್ವಕಪ್ ಕ್ರಿಕೆಟ್ ಕ್ವಾರ್ಟರ್ ಫೈನಲ್ ತಲುಪಿದೆ.
ಶುಕ್ರವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ 8 ವಿಕೆಟಿಗೆ 370 ರನ್ ಪೇರಿಸಿ ಸವಾಲೊಡ್ಡಿತು. ಈ ಭಾರೀ ಮೊತ್ತವನ್ನು ಕಂಡೇ ದಿಗಿಲುಗೊಂಡ ಪಪುವಾ ನ್ಯೂ ಗಿನಿ, ವೇಗಿ ಜಾಸನ್ ರಾಲ್‌ಸ್ಟನ್ ದಾಳಿಗೆ ತತ್ತರಿಸಿ 24.5 ಓವರ್‌ಗಳಲ್ಲಿ 59 ರನ್ನಿಗೆ ಕುಸಿಯಿತು.
ರಾಲ್‌ಸ್ಟನ್ ಸಾಧನೆ 15ಕ್ಕೆ 7 ವಿಕೆಟ್. ಇದು ಅಂಡರ್-19 ವಿಶ್ವಕಪ್ ಕೂಟದ ನೂತನ ಬೌಲಿಂಗ್ ದಾಖಲೆಯಾಗಿದೆ. ಇದಕ್ಕೂ ಮುನ್ನ ಶ್ರೀಲಂಕಾದ ಜೀವನ್ ಮೆಂಡಿಸ್ ಮತ್ತು ನ್ಯೂಜಿಲ್ಯಾಂಡಿನ ಟ್ರೆಂಟ್ ಬೌಲ್ಟ್ ಕೂಡ 7 ವಿಕೆಟ್ ಹಾರಿಸಿದರೂ ಕ್ರಮವಾಗಿ 19 ಮತ್ತು 20 ರನ್ ನೀಡಿದ್ದರು.
ಇದು ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ 2ನೇ ಅತಿ ದೊಡ್ಡ ಗೆಲುವು. ವಿಶ್ವದಾಖಲೆ ಕೂಡ ಆಸ್ಟ್ರೇಲಿಯದ ಹೆಸರಲ್ಲೇ ಇದೆ. 2002ರ ಡ್ಯುನೆಡಿನ್ ಪಂದ್ಯದಲ್ಲಿ ಕೀನ್ಯಾವನ್ನು 430 ರನ್ನುಗಳಿಂದ ಮಣಿಸಿದ್ದು ಕಾಂಗರೂ ಸಾಧನೆಯಾಗಿದೆ.
ಆಸ್ಟ್ರೇಲಿಯ ಪರ ಆರಂಭಕಾರ ನಥನ್ ಮೆಕ್‌ಸ್ವೀನಿ 156 ರನ್ ಬಾರಿಸಿದರು (111 ಎಸೆತ, 18 ಬೌಂಡರಿ, 4 ಸಿಕ್ಸರ್). ನಾಯಕ ಜಾಸನ್ ಸಂಗ 88, ಪರಮ್ ಉಪ್ಪಲ್ 61 ರನ್ ಕೊಡುಗೆ ಸಲ್ಲಿಸಿದರು.