ವೆಲ್ಲಿಂಗ್ಟನ್: ವನಿತಾ ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೆಲಿಯಾ ತನ್ನ ಅಜೇಯ ಓಟ ಮುಂದುವರಿಸಿದೆ. ಬಾಂಗ್ಲಾ ವಿರುದ್ಧದ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನೂ ಗೆದ್ದ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಮಳೆಯಿಂದ 43 ಓವರ್ ಗೆ ಇಳಿಕೆ ಕಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ ಆರು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದರೆ, ಆಸೀಸ್ ತಂಡ ಐದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾ ಪರ ಯಾರೂ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. 33 ರನ್ ಗಳಿಸಿದ ಲತಾ ಮೊಂಡಲ್ ರದ್ದೇ ಉತ್ತಮ ಗಳಿಕೆ. ಉಳಿದಂತೆ ಶರ್ಮಿನ್ ಅಖ್ತರ್ 24 ರನ್, ಸಲ್ಮಾ ಖತುನ್ 15 ರನ್ ಗಳಿಸಿದರು. ಆಸೀಸ್ ಪರ ಗಾರ್ಡ್ನರ್ ಮತ್ತು ಜಾನೆಸನ್ ತಲಾ ಎರಡು ವಿಕೆಟ್ ಕಿತ್ತರು.
ಇದನ್ನೂ ಓದಿ:ಜಡೇಜಾಗೆ ಅಭಿನಂದನೆ, ಧೋನಿಯ ನಿರ್ಲಕ್ಷ್ಯ: ರೈನಾ ಟ್ವೀಟ್ ಗೆ ಫ್ಯಾನ್ಸ್ ಬೇಸರ
ಗುರಿ ಬೆನ್ನತ್ತಿದ ಆಸೀಸ್ ಗೆ ಆರಂಭಿಕ ಆಘಾತ ಅನುಭವಿಸಿದರೂ ಬೆತ್ ಮೂನಿ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಆಧರಿಸಿದರು. ಒಂದು ಹಂತದಲ್ಲಿ ಆಸೀಸ್ 40 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಅರ್ಧಶತಕ ಸಿಡಿಸಿದ ಮೂನಿ ಅಜೇಯ 66 ರನ್ ಗಳಿಸಿದರು. ಆರನೇ ವಿಕೆಟ್ ಗೆ ಸುತರ್ ಲ್ಯಾಂಡ್ ಜೊತೆಗೆ ಅಜೇಯ 66 ರನ್ ಜೊತೆಯಾಟವಾಡಿದರು. ಸುತರ್ ಲ್ಯಾಂಡ್ ಅಜೇಯ 26 ರನ್ ಗಳಿಸಿದರು.
ಬಾಂಗ್ಲಾ ಪರವಾಗಿ ಸಲ್ಮಾ ಖತುನ್ ಮೂರು ವಿಕೆಟ್ ಪಡೆದರು. ನಹಿದಾ ಅಖ್ತರ್ ಮತ್ತು ರುಮಾನ ಅಹಮದ್ ತಲಾ ಓಂದು ವಿಕೆಟ್ ಪಡೆದರು.
ಆಡಿದ ಏಳೂ ಪಂದ್ಯಗಳನ್ನು ಗೆದ್ದ ಆಸೀಸ್ 14 ಅಂಕಗಳನ್ನು ಸಂಪಾದಿಸಿತು. ಆಡಿದ ಆರು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದ ಬಾಂಗ್ಲಾ ಏಳನೇ ಸ್ಥಾನಿಯಾಯಿತು.