Advertisement
ಲೀಗ್ ಹಂತದ ಎಲ್ಲಾ ಪಂದ್ಯಗಳನ್ನೂ ಗೆದ್ದು ಅಜೇಯವಾಗಿ ಫೈನಲ್ ಅಖಾಡಕ್ಕೆ ಪ್ರವೇಶಿಸಿದ್ದ ಭಾರತೀಯ ವನಿತೆಯರು ಇಲ್ಲಿ ಮಾತ್ರ ಫೈನಲ್ ಟೆನ್ಷನ್ ಅನ್ನು ತಾಳಿಕೊಳ್ಳುವಲ್ಲಿ ವಿಫಲರಾಗಿ 85 ರನ್ ಗಳ ಭರ್ಜರಿ ಸೋಲನ್ನು ಅನುಭವಿಸಿದರು. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಆರಂಭವಾಗಿದ್ದ ಕೌರ್ ಪಡೆಯ ಟಿ20 ವಿಶ್ವ ಕಪ್ ಪಯಣ ಫೈನಲ್ ನಲ್ಲಿ ಅದೇ ಆಸ್ಟ್ರೇಲಿಯಾಕ್ಕೆ ಶರಣಾಗುವ ಮೂಲಕ ಅಂತ್ಯಗೊಂಡಿದೆ.
ಅಸೀಸ್ ವನಿತೆಯರುವ ನೀಡಿದ 184 ರನ್ ಗಳ ಕಠಿಣ ಗುರಿಯನ್ನು ಬೆನ್ನತ್ತುವ ಹಂತದಲ್ಲಿ ಪ್ರಾರಂಭದಿಂದಲೇ ಎಡವಿದ ಭಾರತೀಯ ಮಹಿಳಾ ಬ್ಯಾಟ್ಸ್ ಮನ್ ಗಳು ಅಂತಿಮವಾಗಿ 19.1 ಓವರ್ ಗಳಲ್ಲಿ 99 ರನ್ ಗಳಿಗೆ ಆಲೌಟ್ ಆಗುವ ಮೂಲಕ ಬಲಿಷ್ಟ ಆಸೀಸ್ ವನಿತೆಯರಿಗೆ 85 ರನ್ ಗಳಿಂದ ಪರಾಭವಗೊಂಡ ಹರ್ಮನ್ ಪ್ರೀತ್ ಕೌರ್ ಪಡೆ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ಅಂತಿಮ ವಿಕೆಟ್ ರೂಪದಲ್ಲಿ ಪೂನಮ್ ಯಾದವ್ (1) ಔಟಾಗುವುದರೊಂದಿಗೆ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವನಿತೆಯರ ಸಂಭ್ರಮಾಚರಣೆ ಮುಗಿಲುಮುಟ್ಟಿತು.
Related Articles
Advertisement
ನಾಯಕಿ ಹರ್ಮನ್ ಪ್ರೀತ್ ಕೌರ್ (4) ಸಹಿತ ಭಾರತದ ಅಗ್ರ ನಾಲ್ವರು ಬ್ಯಾಟ್ಸ್ ಮನ್ ಗಳು ತಂಡದ ಮೊತ್ತ 30 ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡಾಗಿತ್ತು. ಮತ್ತು ಈ ಮೂಲಕ ಚೊಚ್ಚಲ ವಿಶ್ವಕಪ್ ಗೆಲ್ಲುವ ಆಸೆಯೂ ಬಹುತೇಕ ಕೈ ಬಿಟ್ಟಾಗಿತ್ತು. ಶೆಫಾಲಿ (2), ಸ್ಮೃತಿ (11), ತಾನಿಯಾ (2), ಜೆಮಿಮಾ (0) ಮತ್ತು ನಾಯಕಿ ಕೌರ್ (4) ಸಹಿತ ಅಗ್ರ ಬ್ಯಾಟಿಂಗ್ ಪಡೆಯ ಇಂದಿನ ಪ್ರದರ್ಶನ ನಿರಾಶಾದಾಯಕವಾಗಿತ್ತು.
ಆದರೆ ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ (33), ವೇದಾ ಕೃಷ್ಣಮೂರ್ತಿ (19) ಮತ್ತು ರಿಚಾ ಘೋಷ್ (18) ಆಸೀಸ್ ಬೌಲರ್ ಗಳಿಗೆ ಸ್ವಲ್ಪ ಮಟ್ಟಿನ ಪ್ರತಿರೋಧವನ್ನು ತೋರಿದರು. ಆದರೆ ಇವರ ಹೋರಾಟ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಲೂ ಸಹಕಾರಿಯಾಗಲಿಲ್ಲ. ಕೆಳಕ್ರಮಾಂಕದ ನಾಲ್ವರು ಬ್ಯಾಟ್ಸ್ ಮನ್ ಗಳೂ ತಲಾ 1 ರನ್ ಗಳಿಸುವಂತಾಗಿದ್ದು ಆಸೀಸ್ ಪಡೆಯ ಶಿಸ್ತಿನ ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರಯತ್ನಕ್ಕೆ ಸಾಕ್ಷಿಯಾಗಿತ್ತು.
ಆಸೀಸ್ ವನಿತೆಯರ ಪರ ವೇಗಿ ಮೆಗಾನ್ ಶಟ್ ಅವರು 4 ವಿಕೆಟ್ ಪಡೆದರು. ಜೆಸ್ ಜೊನಾಸನ್ 3 ವಿಕೆಟ್ ಪಡೆದರೆ, ಸೋಫಿ ಮೊಲಿನಾಕ್ಸ್, ಡೆಲಿಸ್ಸಾ ಕಿಮಿನ್ಸ್ ಮತ್ತು ನಿಕೊಲಾ ಕ್ಯಾರಿ ತಲಾ 1 ವಿಕೆಟ್ ಪಡೆದರು.
ಆದರೆ ಒಟ್ಟಾರೆಯಾಗಿ ಈ ಟಿ20 ವಿಶ್ವಕಪ್ ನಲ್ಲಿ ಭಾರತೀಯ ವನಿತೆಯರು ತೋರಿದ ಚೇತೋಹಾರಿ ಪ್ರದರ್ಶನ ಮುಂಬರುವ ದಿನಗಳಲ್ಲಿ ದೇಶದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಯ ದೃಷ್ಟಿಯಲ್ಲಿ ಆಶಾದಾಯಕವಾಗಿದೆ. ಫೈನಲ್ ವರೆಗೆ ಅಜೇಯ ಅಭಿಯಾನ ನಡೆಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ನಮ್ಮ ಅಭಿನಂದನೆಗಳು.