ಗೋಲ್ಡ್ ಕೋಸ್ಟ್: ಆತಿಥೇಯ ಆಸ್ಟ್ರೇಲಿಯ ವಿರುದ್ಧದ ಅಂತಿಮ ಟಿ20 ಪಂದ್ಯವನ್ನು 14 ರನ್ನುಗಳಿಂದ ಕಳೆದುಕೊಂಡ ಭಾರತದ ವನಿತೆಯರು ಸರಣಿ ಸೋಲಿಗೆ ತುತ್ತಾಗಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ 5 ವಿಕೆಟಿಗೆ 149 ರನ್ ಪೇರಿ ಸಿತು. ಈ ಕಠಿನ ಸವಾಲಿಗೆ ಜವಾಬು ನೀಡುವಲ್ಲಿ ಎಡವಿದ ಭಾರತ 6 ವಿಕೆಟಿಗೆ 135 ರನ್ ಗಳಿಸಿ ಶರಣಾಯಿತು. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ, ದ್ವಿತೀಯ ಮುಖಾಮುಖಿಯನ್ನು ಆಸೀಸ್ 4 ವಿಕೆಟ್‌ಗಳಿಂದ ಜಯಿಸಿತ್ತು.
ಕಾಂಗರೂಗಳ ಬೃಹತ್ ಮೊತ್ತಕ್ಕೆ ಕಾರಣರಾದವರು ಓಪನರ್ ಬೆತ್ ಮೂನಿ ಮತ್ತು ಆಲ್‌ರೌಂಡರ್ ಟಹ್ಲಿಯಾ ಮೆಗ್ರಾತ್. ಮೂನಿ 18ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು 61 ರನ್ ಬಾರಿಸಿದರು. 43 ಎಸೆತಗಳ ಈ ಇನ್ನಿಂಗ್ಸ್ ನಲ್ಲಿ 10 ಬೌಂಡರಿ ಒಳಗೊಂಡಿತ್ತು. ಮೆಗ್ರಾತ್ 31 ಎಸೆತನಿಭಾಯಿಸಿ ಅಜೇಯ 44 ರನ್ ಬಾರಿಸಿದರು (6 ಬೌಂಡರಿ, 1 ಸಿಕ್ಸರ್).
ಇದನ್ನೂ ಓದಿ:
ಪ್ರತಿ ಜಿಲ್ಲೆಯಲ್ಲಿ ಮಾದರಿ ಕೋವಿಡ್‌ಫೀಲ್ಡ್ ಆಸ್ಪತ್ರೆ ತೆರೆಯಲು ಸರ್ಕಾರ ಸಿದ್ಧವಿದೆ
ದೊಡ್ಡ ಮೊತ್ತದ ಚೇಸಿಂಗ್ ವೇಳೆ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ (1) ಅಗ್ಗಕ್ಕೆ ಔಟಾದದ್ದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಮಧ್ಯಮ ಕ್ರಮಾಂಕವೂ ಕೈಕೊಟ್ಟಿತು. ಆದರೆ ಸ್ಮತಿ ಮಂಧನಾ ಹಾಗೂ ಕೆಳ ಕ್ರಮಾಂಕದಆಟಗಾರ್ತಿ ರಿಚಾ ಘೋಷ್ ದಿಟ್ಟ ಹೋರಾಟ ಸಂಘಟಿಸಿದರು. ಮಂಧನಾ 49 ಎಸೆತಗಳಿಂದ 52 ರನ್ ಮಾಡಿದರೆ (8 ಬೌಂಡರಿ), ರಿಚಾ 11 ಎಸೆತಗಳಿಂದ ಅಜೇಯ 23 ರನ್ ಬಾರಿಸಿದರು. ಪಂದ್ಯದ ಅಂತಿಮ ಓವರ್‌ನಲ್ಲಿ ಸಿಡಿದ ದೀಪ್ತಿ-ರಿಚಾ 21 ರನ್ ಸೂರೆಗೈದರು. ರಿಚಾ ಬೇಗನೇ ಕ್ರೀಸಿಗೆ ಬಂದದ್ದಿದ್ದರೆ ಭಾರತಕ್ಕೆ ಸರಣಿ ಸಮಬಲದ ಅವಕಾಶ ಹೆಚ್ಚಿರುತ್ತಿತ್ತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-5 ವಿಕೆಟಿಗೆ 149 (ಮೂನಿ 61, ಮೆಗ್ರಾತ್ ಔಟಾಗದೆ 44, ರಾಜೇಶ್ವರಿ 37ಕ್ಕೆ 2). ಭಾರತ-6 ವಿಕೆಟಿಗೆ 135 (ಮಂಧನಾ 52, ಜೆಮಿಮಾ 23, ರಿಚಾ ಔಟಾಗದೆ 23, ಕೌರ್ 13, ಕ್ಯಾರಿ 42ಕ್ಕೆ 2).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಟಹ್ಲಿಯಾ ಮೆಗ್ರಾತ್.