ಸಿಡ್ನಿ : ಭಾರತ – ಆಸೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್ ಆಟಗಾರರು ಮತ್ತೆ ಬ್ಯಾಟಿಂಗ್ ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಫಿಂಚ್ ಪಡೆಯ ಬ್ಯಾಟಿಂಗ್ ಅಬ್ಬರದಿಂದ ಟೀಮ್ ಇಂಡಿಯಾಗೆ ಬೃಹತ್ ಮೊತ್ತ ಚೇಸ್ ಮಾಡುವ ಸವಾಲು ಎದುರಾಗಿದೆ.
ಆಸ್ಟ್ರೇಲಿಯಾ ನಿಗದಿತ 50 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 389 ರನ್ ಪೇರಿಸಿ 390 ರನ್ ಗಳ ಗುರಿಯನ್ನು ಟೀಮ್ ಇಂಡಿಯಾಗೆ ನೀಡಿದೆ.
ಫಿಂಚ್ ಹಾಗೂ ವಾರ್ನರ್ ಜೋಡಿ ಕಳೆದ ಪಂದ್ಯದ ಹಾಗೆ ತಮ್ಮ ಬ್ಯಾಟಿಂಗ್ ಲಯವನ್ನು ಮುಂದುವರೆಸಿದರು. ಬಿರುಸಿನಿಂದ ಬ್ಯಾಟ್ ಬೀಸಿದ ಡೇವಿಡ್ ವಾರ್ನರ್ 7 ಬೌಂಡರಿ ಹಾಗೂ 3 ಸಿಕ್ಸರ್ ನೊಂದಿಗೆ 83 ರನ್ ಗಳಿಸಿ ರನೌಟ್ ಆದರು. ನಾಯಕ ಆರೋನ್ ಫಿಂಚ್ 6 ಬೌಂಡರಿ , 1 ಸಿಕ್ಸರ್ ನೊಂದಿಗೆ 60 ರನ್ ಗಳಿಸಿ, ಶಮಿ ಎಸೆತದಲ್ಲಿ ವಿರಾಟ್ ಕೊಹ್ಲಿ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ದಾಪುಗಾಲಿಟ್ಟರು. ವಾರ್ನರ್ ಹಾಗೂ ಫಿಂಚ್ ಜೋಡಿ 142 ರನ್ ರನ್ ಗಳ ಜೊತೆಯಾಟ ನಡೆಸಿದರು.
ಇದನ್ನೂ ಓದಿ : ಲವ್ ಜಿಹಾದ್ ಕಾಯ್ದೆ ತರುವಮೊದಲು ಯಾವ ನಾಯಕರ ಮಕ್ಕಳುಯಾರನ್ನು ಲವ್ ಮಾಡಿದ್ದಾರೆ ನೋಡಲಿ:ಡಿಕೆಶಿ
ಬಳಿಕ ಕ್ರೀಸ್ ಗಿಳಿದ ಸ್ಟೀವನ್ ಸ್ಮಿತ್ ಅಮೋಘ 104 ರನ್ ಗಳಿಸಿ, ಭಾರತೀಯ ಬೌಲರ್ ಗಳನ್ನು ಕಾಡಿದರು. ಹಾರ್ದಿಕ್ ಪಾಂಡ್ಯ ಎಸೆತಕ್ಕೆ ಶಮಿ ಕೈಗೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು. ಮಾರ್ನಸ್ ಲಬುಶೇನ್
70 ರನ್ ಗಳ ಕೊಡುಗೆ ನೀಡಿದರು. ಗ್ಲೈನ್ ಮ್ಯಾಕ್ಸ್ ವೆಲ್ ಕಳೆದ ಪಂದ್ಯದಂತೆ ಇಂದಿನ ಪಂದ್ಯದಲ್ಲೂ ವೇಗದಿಂದ ಬ್ಯಾಟ್ ಬೀಸಿದರು. ಕೇವಲ 29 ಎಸೆತಗಳಲ್ಲಿ, 4 ಬೌಂಡರಿ ಹಾಗೂ ಭರ್ಜರಿ 4 ಸಿಕ್ಸರ್ ಸಿಡಿಸಿ, 63 ರನ್ ಗಳಿಸಿ ಅಜೇಯರಾಗಿ ಉಳಿದರು.
ಫಿಂಚ್ ಪಡೆ 4 ವಿಕೆಟ್ ನಷ್ಟಕ್ಕೆ 389 ರನ್ ಪೇರಿಸಿ, 390 ರ ಬೃಹತ್ ಗುರಿಯನ್ನು ಟೀಮ್ ಇಂಡಿಯಾಗೆ ನೀಡಿದೆ. ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಭಾರತ ಬ್ಯಾಟಿಂಗ್ ನಲ್ಲಿ ಸಿಡಿದೇಳಬೇಕಿದೆ.
ಭಾರತದ ಪರ ಶಮಿ, ಬುಮ್ರ ಹಾಗೂ ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದರು.