ಸಿಡ್ನಿ : ಭಾರತ – ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಫಿಂಚ್ ನಾಯಕತ್ವದ ಆಸೀಸ್ ಪಡೆ 51 ರನ್ ಗಳಿಂದ ಜಯಗಳಿಸಿ, ಸರಣಿ ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಗಿಳಿದ ಆಸ್ಟ್ರೇಲಿಯಾ, ಭಾರತೀಯ ಬೌಲರ್ ಗಳನ್ನು ಕಾಡಿದರು. ಆಸೀಸ್ 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿ 390 ರನ್ ಗಳ ಬೃಹತ್ ಗುರಿಯನ್ನು ಭಾರತಕ್ಕೆ ನೀಡಿತ್ತು. ಗುರಿಯನ್ನು ಬೆನ್ನಟ್ಟಿದ್ದ ಭಾರತೀಯ ಆಟಗಾರರು ಪ್ರಾರಂಭದಲ್ಲಿ ಮಯಾಂಕ್ ಹಾಗೂ ಶಿಖರ್ ಧವನ್ ಜೋಡಿ ಉತ್ತಮ ಆರಂಭ ನೀಡಿದರು. ಕಮಿನ್ಸ್ ಎಸೆತಕ್ಕೆ ಕೀಪರ್ ಕ್ಯಾರಿ ಕೈಗೆ ಕ್ಯಾಚ್ ಕೊಟ್ಟ ಮಯಾಂಕ್ 28 ರನ್ ಗಳಿಸಿ ಔಟ್ ಆದರು. ಶಿಖರ್ ಧವನ್ ಹ್ಯಾಝಲ್ ವುಡ್ ಎಸೆತದಲ್ಲಿ ಸ್ಟಾರ್ಕ್ ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.
ಉತ್ತಮ ಆರಂಭ ಪಡೆದಿದ್ದ ಭಾರತ 2 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ನಿಧಾನವಾಗಿ ಜೊತೆಯಾಟ ನಡೆಸಿ,ಒತ್ತಡದಿಂದ ಪಾರು ಮಾಡಿ ಸ್ಕೋರ್ ಬೋರ್ಡ್ ಮುಂದುವರೆಸಲು ಸಹಕಾರಿಯಾದರು. ಅಯ್ಯರ್ 38 ರನ್ ದಾಖಲಿಸಿ, ಹೆನ್ರಿಕ್ಸ್ ಎಸೆತದಲ್ಲಿ ಸ್ಟೀವನ್ ಸ್ಮಿತ್ ಗೆ ಕ್ಚಾಚ್ ಕೊಟ್ಟು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ತಂಡದ ಗೆಲುವಿಗೆ ನಾಯಕತ್ವದ ಜವಬ್ದಾರಿಯ ಆಟವಾಡಿದ ಕೊಹ್ಲಿ 89 ರನ್ ಗಳಿಸಿ ಕ್ಯಾಚ್ ಕೊಟ್ಟು ನಿರ್ಗಮಿಸಿದರು.
ಕೆ.ಎಲ್ ರಾಹುಲ್ 76 ರನ್ ಗಳಿಸಿ, ಬೀಸುವ ಭರದಲ್ಲಿ ಝಂಪ ಎಸೆತದಲ್ಲಿ ಕ್ಯಾಚ್ ಕೊಟ್ಟು ಪೆವಿಲಿನ್ ಹಾದಿ ಹಿಡಿದರು. ಹಾರ್ದಿಕ್ ಪಾಂಡ್ಯ ಹಾಗೂ ಜಡೇಜಾ ವೇಗವಾಗಿ ಬ್ಯಾಟ್ ಬೀಸಿದರೂ, ಗೆಲುವಿನ ದಡಕ್ಕೆ ಕೊಂಡ್ಯೊಯಲು ಸಾಧ್ಯವಾಗಿಲ್ಲ. ಅಂತಿಮವಾಗಿ ಭಾರತ 50 ಓವರ್ ನಲ್ಲಿ 338-9 ವಿಕಟ್ ಗಳ ನಷ್ಟ ಅನುಭವಿಸಿ ಆಸ್ಟ್ರೇಲಿಯಾ ವಿರುದ್ಧ 51 ರನ್ ಗಳಿಂದ ಮುಗ್ಗರಿಸಿ ಸರಣಿ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.
ಆಸ್ಟ್ರೇಲಿಯಾ ಪರ ಉತ್ತಮವಾಗಿ ಬೌಲ್ ಮಾಡಿದ ಪ್ಯಾಟ್ ಕಮಿನ್ಸ್ 3 ಪ್ರಮುಖ ವಿಕೆಟ್ ಪಡೆದರು. ಹಾಝಲ್ ವುಡ್ ಹಾಗೂ ಝಂಪ 2 ವಿಕೆಟ್ ಪಡೆದರು. ಹೆನ್ರಿಕ್ಸ್ ಹಾಗೂ ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದರು.