Advertisement

ವರ್ಷಾಂತ್ಯದಲ್ಲಿ ಆಸೀಸ್‌ ಟೆಸ್ಟ್‌ ಸರಣಿ ವಿಕ್ರಮ

11:34 PM Dec 29, 2019 | Team Udayavani |

ಮೆಲ್ಬರ್ನ್: ನ್ಯೂಜಿಲ್ಯಾಂಡ್‌ ಎದುರಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ 247 ರನ್‌ ಜಯಭೇರಿ ಮೊಳಗಿಸಿದ ಆಸ್ಟ್ರೇಲಿಯ ಸರಣಿಯನ್ನು ವಶಪಡಿಸಿಕೊಂಡಿದೆ. ವರ್ಷಾಂತ್ಯವನ್ನು ಗೆಲುವಿನೊಂದಿಗೆ ಮುಗಿಸಿದೆ.

Advertisement

ಗೆಲುವಿಗೆ 488 ರನ್ನುಗಳ ಕಠಿನ ಗುರಿ ಪಡೆದ ನ್ಯೂಜಿಲ್ಯಾಂಡ್‌, ಪಂದ್ಯದ 4ನೇ ದಿನವಾದ ರವಿವಾರ 240 ರನ್ನುಗಳಿಗೆ ಸರ್ವಪತನ ಕಂಡಿತು. ಆರಂಭಕಾರ ಟಾಮ್‌ ಬ್ಲಿಂಡೆಲ್‌ ಶತಕ ಬಾರಿಸಿ ಹೋರಾಟ ಸಂಘಟಿಸಿದ್ದೊಂದೇ ಕಿವೀಸ್‌ ಪಾಲಿನ ಸಮಾಧಾನ. ಕಿವೀಸ್‌ ಸರದಿಯ ಅರ್ಧದಷ್ಟು ರನ್‌ ಬ್ಲಿಂಡೆಲ್‌ ಅವರದೇ ಆಗಿತ್ತು.

3 ಪಂದ್ಯಗಳ ಸರಣಿಯಲ್ಲೀಗ ಕಾಂಗರೂ ಪಡೆ 2-0 ಮುನ್ನಡೆಯಲ್ಲಿದೆ. ಪರ್ತ್‌ನಲ್ಲಿ ನಡೆದ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲೂ ಆಸ್ಟ್ರೇಲಿಯ ಬೃಹತ್‌ ಗೆಲುವು ಸಾಧಿಸಿತ್ತು (296 ರನ್‌). “ನ್ಯೂ ಇಯರ್‌ ಟೆಸ್ಟ್‌’ ಜ. 3ರಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ.

ಪ್ಯಾಟಿನ್ಸನ್‌ ಪರಾಕ್ರಮ
3ನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯ 4 ವಿಕೆಟಿಗೆ 137 ರನ್‌ ಮಾಡಿತ್ತು. ರವಿವಾರ 5ಕ್ಕೆ 168 ರನ್‌ ಬಾರಿಸಿ ಡಿಕ್ಲೇರ್‌ ಮಾಡಿತು. ನ್ಯೂಜಿಲ್ಯಾಂಡಿನ ದ್ವಿತೀಯ ಸರದಿಯ ಅಗ್ರ ಕ್ರಮಾಂಕದ ಮೇಲೆ ಪ್ಯಾಟಿನ್ಸನ್‌ ಘಾತಕವಾಗಿ ಎರಗಿದರು. ಲ್ಯಾಥಂ (8), ನಾಯಕ ವಿಲಿಯಮ್ಸನ್‌ (0) ಮತ್ತು ಟೇಲರ್‌ (2) ಅವರನ್ನು ಬಹಳ ಬೇಗ ಪೆವಿಲಿಯನ್ನಿಗೆ ಅಟ್ಟಿದರು. ಬಳಿಕ ಸ್ಪಿನ್ನರ್‌ ಲಿಯೋನ್‌ ಕೈಚಳಕ ಮೊದಲ್ಗೊಂಡಿತು. ಅವರು ಮಧ್ಯಮ ಕ್ರಮಾಂಕಕ್ಕೆ ಬರೆ ಹಾಕಿದರು. ನಿಕೋಲ್ಸ್‌ (33), ವಾಟಿಗ್‌ (22), ಗ್ರ್ಯಾಂಡ್‌ಹೋಮ್‌ (9) ಮತ್ತು ಸ್ಯಾಂಟ್ನರ್‌ಗೆ (27) ಬಲೆ ಬೀಸಿದರು. ಸೌಥಿ ರನೌಟಾದರೆ, ಗಾಯಾಳು ಬೌಲ್ಟ್ ಬ್ಯಾಟಿಂಗಿಗೆ ಬರಲಿಲ್ಲ.

ಬಂಡೆಯಾಗಿ ನಿಂತ ಬ್ಲಿಂಡೆಲ್‌
ಆದರೆ ಆರಂಭಕಾರ ಟಾಮ್‌ ಬ್ಲಿಂಡೆಲ್‌ ಮಾತ್ರ ಒಂದು ಕಡೆ ಬಂಡೆಯಂತೆ ನಿಂತಿದ್ದರು. ಕೊನೆಯ ತನಕ ಹೋರಾಟ ಜಾರಿಯಲ್ಲಿರಿಸಿದ ಅವರು 121 ರನ್‌ ಬಾರಿಸಿ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಿದರು (210 ಎಸೆತ, 15 ಬೌಂಡರಿ). 3ನೇ ಟೆಸ್ಟ್‌ ಆಡುತ್ತಿರುವ ಬ್ಲಿಂಡೆಲ್‌ ದಾಖಲಿಸಿದ 2ನೇ ಶತಕ ಇದಾಗಿದೆ.

Advertisement

ಬ್ಲಿಂಡೆಲ್‌ ಅವರನ್ನು ಔಟ್‌ ಮಾಡಿದ ಪಾರ್ಟ್‌
ಟೈಮ್‌ ಬೌಲರ್‌ ಮಾರ್ನಸ್‌ ಲಬುಶೇನ್‌ ಆಸ್ಟ್ರೇಲಿಯದ ಗೆಲುವನ್ನು ಸಾರಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಟ್ರ್ಯಾವಿಸ್‌ ಹೆಡ್‌ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ-467 ಮತ್ತು 5 ವಿಕೆಟಿಗೆ 168 ಡಿಕ್ಲೇರ್‌ (ವಾರ್ನರ್‌ 38, ಬರ್ನ್ಸ್ 35, ವೇಡ್‌ ಔಟಾಗದೆ 30, ಹೆಡ್‌ ಔಟಾಗದೆ 28, ವ್ಯಾಗ್ನರ್‌ 50ಕ್ಕೆ 3). ನ್ಯೂಜಿಲ್ಯಾಂಡ್‌-148 ಮತ್ತು 240 (ಬ್ಲಿಂಡೆಲ್‌ 121, ನಿಕೋಲ್ಸ್‌ 33, ಸ್ಯಾಂಟ್ನರ್‌ 27, ವಾಟಿಗ್‌ 22, ಲಿಯೋನ್‌ 81ಕ್ಕೆ 4, ಪ್ಯಾಟಿನ್ಸನ್‌ 35ಕ್ಕೆ 3). ಪಂದ್ಯಶ್ರೇಷ್ಠ: ಟ್ರ್ಯಾವಿಸ್‌ ಹೆಡ್‌.

Advertisement

Udayavani is now on Telegram. Click here to join our channel and stay updated with the latest news.

Next