Advertisement

ಆಸ್ಟ್ರೇಲಿಯಾ ಪ್ರಧಾನಿ ಜೊತೆಗೆ ಭಾರತಕ್ಕೆ ಬರಲಿದ್ದಾರೆ ದ್ವಾರಪಾಲಕರು ಮತ್ತು ಸರ್ಪರಾಜ!

09:44 AM Nov 28, 2019 | Hari Prasad |

ಮೆಲ್ಬೋರ್ನ್: ಮುಂದಿನ ವರ್ಷದ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಜೊತೆಯಲ್ಲಿ ಮೂವರು ವಿಶೇಷ ಅತಿಥಿಗಳು ಭಾರತಕ್ಕೆ ಬರಲಿದ್ದಾರೆ. ಆಸ್ಟ್ರೇಲಿಯಾದ ರಾಷ್ಟ್ರೀಯ ಕಲಾ ಗ್ಯಾಲರಿಯಲ್ಲಿದ್ದ ಭಾರತಕ್ಕೆ ಸೇರಿದ್ದ 15ನೇ ಶತಮಾನದ್ದು ಎನ್ನಲಾಗುತ್ತಿರುವ ದ್ವಾರಪಾಲಕರ ಎರಡು ವಿಗ್ರಹಗಳು ಮತ್ತು ಆರನೇ ಶತಮಾನಕ್ಕೆ ಸೇರಿದ್ದ ಒಂದು ಸರ್ಪರಾಜ ವಿಗ್ರಹಗಳನ್ನು ಇದೀಗ ಆಸ್ಟ್ರೇಲಿಯಾ ಸರಕಾರ ಭಾರತಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ.

Advertisement

ನೂಯಾರ್ಕ್ ಮೂಲದ ಭಾರತೀಯ ವ್ಯಾಪಾರಿಯೊಬ್ಬರಿಂದ ಈ ವಿಗ್ರಹಗಳನ್ನು ಕಲಾ ಗ್ಯಾಲರಿ ಖರೀದಿಸಿತ್ತು. ಇದೀಗ ತನ್ನ ಮುಂಬರುವ ಭಾರತ ಭೇಟಿಯ ಸಂದರ್ಭದಲ್ಲಿ ಈ ಐತಿಹಾಸಿಕ ಕಲಾಕೃತಿಗಳನ್ನು ಹಿಂದಿರುಗಿಸುತ್ತೇನೆ ಎಂಬ ವಿಷಯವನ್ನು ಪ್ರಧಾನಿಯವರು ಸ್ಪಷ್ಟಪಡಿಸಿದ್ದಾರೆ. ರೈಸಿನಾ ಸಂವಾದ ಕಾರ್ಯಕ್ರಮ ಹಿನ್ನಲೆಯಲ್ಲಿ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಬುಧವಾರ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದರು.


ಆಸ್ಟ್ರೇಲಿಯಾದ ರಾಷ್ಟ್ರೀಯ ಕಲಾ ಗ್ಯಾಲರಿ ಈ ಮೂರು ಕಲಾಕೃತಿಗಳನ್ನು ಸುಭಾಷ್ ಕಪೂರ್ ಎಂಬವರಿಂದ ಖರೀದಿಸಿತ್ತು. ಆದರೆ ಇದು ದೇಶದ ನಿಯಮಕ್ಕೆ ವಿರುದ್ಧವಾಗಿದೆ ಮಾತ್ರವಲ್ಲದೇ ಈ ವಿಗ್ರಹಗಳಿಗೆ ಸಂಬಂಧಿಸಿದಂತೆ ಸುಭಾಷ್ ಕಪೂರ್ ಅವರ ವಿರುದ್ಧ ಭಾರತ ಮತ್ತು ಅಮೆರಿಕಾದಲ್ಲಿ ಕ್ರಿಮಿನಲ್ ಮೊಕದ್ದಮೆಯೂ ನಡೆಯುತ್ತಿದೆ. ಆಸ್ಟ್ರೇಲಿಯಾದ ಈ ಕಲಾ ಗ್ಯಾಲರಿಯು ಭಾರತ ಮೂಲದ ಈ ಕಲಾಕೃತಿಗಳನ್ನು ಸ್ವಯಂ ಪ್ರೇರಣೆಯಿಂದಲೇ ಹಿಂದಿರುಗಿಸುವ ನಿರ್ಧಾರ ಮಾಡಿದೆ.

ಭಾರತದಂತೆಯೇ ನಾವೂ ಸಹ ಪ್ರಾಚೀನ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಅರ್ಥ ಮಾಡಿಕೊಂಡಿದ್ದೇವೆ, ಈ ಹಿನ್ನಲೆಯಲ್ಲಿ ಕಲಾಕೃತಿಗಳನ್ನು ಹಿಂದಿರುಗಿಸುವುದು ಉತ್ತಮ ನಿರ್ಧಾರವಾಗಿದೆ ಎಂದು ಪ್ರಧಾನಿ ಮಾರಿಸನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಬೆಳವಣಿಗೆಯಿಂದ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಇರುವ ಸಂಬಂಧ ಮತ್ತಷ್ಟು ಬಲವಾಗಲಿದೆ ಎಂಬಾ ಆಶಾವಾದವನ್ನು ಆಸ್ಟ್ರೇಲಿಯಾ ಪ್ರಧಾನಿಯವರು ವ್ಯಕ್ತಪಡಿಸಿದ್ದಾರೆ.

15ನೇ ಶತಮಾನದ ತಮಿಳುನಾಡಿನ ದ್ವಾರಪಾಲಕರ ಕಲಾಕೃತಿ ಮತ್ತು ರಾಜಸ್ಥಾನ ಅಥವಾ ಮಧ್ಯಪ್ರದೇಶಕ್ಕೆ ಭಾಗಕ್ಕೆ ಸಂಬಂಧಿಸಿದ್ದ 6-7ನೇ ಶತಮಾನದ ಸರ್ಪ ರಾಜ (ನಾಗರಾಜ) ಕಲಾಕೃತಿಗಳನ್ನು ಸುಭಾಷ್ ಕಪೂರ್ ಅವರು ಆಸ್ಟ್ರೇಲಿಯಾದ ರಾಷ್ಟ್ರೀಯ ಕಲಾ ಗ್ಯಾಲರಿಗೆ ಮಾರಾಟ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next