ಸಿಡ್ನಿ: ಭೀಕರ ಕಾಳ್ಗಿಚ್ಚಿಗೆ ನಲುಗಿ ಹೋಗಿರುವ ಆಸ್ಟ್ರೇಲಿಯಾ ಇದೀಗ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸುಮಾರು ಹತ್ತು ಸಾವಿರ ಒಂಟೆಗಳನ್ನು ಕೊಲ್ಲುವ ನಿರ್ಧಾರ ಕೈಗೊಂಡಿದೆ. ಕಾಳ್ಗಿಚ್ಚಿನ ನಡುವೆಯೇ ಒಂಟೆಗಳು ಅಧಿಕ ಪ್ರಮಾಣದಲ್ಲಿ ನೀರು ಕುಡಿಯುತ್ತಿರುವುದೇ ಇದಕ್ಕೆ ಕಾರಣ ಎಂದು ಆಸ್ಟ್ರೇಲಿಯಾ ಹೇಳಿದೆ!
ಒಂಟೆಗಳು ಅಧಿಕ ಪ್ರಮಾಣದಲ್ಲಿ ನೀರು ಕುಡಿಯುತ್ತಿದ್ದು, ಇದೀಗ ಹತ್ತು ಸಾವಿರ ಒಂಟೆಗಳನ್ನು ಕೊಲ್ಲುವ ಐದು ದಿನಗಳ ಕಾರ್ಯಾಚರಣೆಗೆ ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ. ಈ ಕಾರ್ಯಾಚರಣೆ ಬುಧವಾರದಿಂದ ಆರಂಭವಾಗಿದ್ದು, ಇದಕ್ಕಾಗಿ ಸರ್ಕಾರ ಹೆಲಿಕಾಪ್ಟರ್ ಗಳನ್ನು ಕಳುಹಿಸಿದೆ ಎಂದು ದ ಹಿಲ್ ಪತ್ರಿಕೆ ವರದಿ ಮಾಡಿದೆ.
ಗ್ರಾಮೀಣ ಪ್ರದೇಶದಲ್ಲಿ ಒಂಟೆಗಳು ಅಧಿಕವಾಗಿ ವಾಸವಾಗಿವೆ. ಇವುಗಳಿಂದಾಗಿ ಕುಡಿಯುವ ನೀರಿಗೆ ಮತ್ತು ಆಹಾರಕ್ಕೆ ಭಾರೀ ತೊಂದರೆಯಾಗುತ್ತಿದೆ ಎಂದು ಹೆಚ್ಚು ಮತ್ತು ಕಡಿಮೆ ಜನಸಂಖ್ಯೆ ಹೊಂದಿರುವ ಸ್ಥಳೀಯ ಸರ್ಕಾರದ ಪ್ರದೇಶವಾದ ಎಪಿವೈನ ಎಕ್ಸಿಕ್ಯೂಟಿವ್ ಬೋರ್ಡ್ ಸದಸ್ಯೆ ಮಾರ್ಟಿಯಾ ಬಾಕೆರ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೂಲನಿವಾಸಿಗಳು ವಾಸವಾಗಿರುವ ಎಪಿವೈ ಪ್ರದೇಶದಿಂದಲೇ ಮೊದಲು ಒಂಟೆಗಳ ಹತ್ಯೆ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಹೇಳಿದೆ. ಕಾಳ್ಗಿಚ್ಚಿನಿಂದಾಗಿ ನಾವು ಸೆಖೆಯಲ್ಲಿ ಬೇಯುವಂತಾಗಿದೆ. ಅಲ್ಲದೇ ನಮಗೆ ಅಸೌಖ್ಯದ ಭಾವನೆ ಎದುರಾಗತೊಡಗಿದೆ. ಇದಕ್ಕೆ ಮುಖ್ಯ ಕಾರಣ ಒಂಟೆಗಳು. ಯಾಕೆಂದರೆ ಅವುಗಳು ಮನೆಯ ಸುತ್ತಲೂ ಆಗಮಿಸಿ ಏರ್ ಕಂಡಿಷನ್ ನಿಂದ ಹೊರಬೀಳುವ ನೀರನ್ನು ಕುಡಿಯಲು ಪ್ರಯತ್ನಿಸುತ್ತಿವೆ ಎಂದು ಮಾರ್ಟಿಯಾ ತಿಳಿಸಿದ್ದಾರೆ.
ನವೆಂಬರ್ ನಿಂದ ಕಾಳ್ಗಿಚ್ಚು ಆರಂಭವಾದಾಗಿನಿಂದ ಒಂಟೆಗಳ ಹಾವಳಿ, ಹೆಚ್ಚು ನೀರನ್ನು ಕುಡಿಯಲು ಆರಂಭಿಸಿದ್ದರಿಂದ ಅವುಗಳ ಹತ್ಯೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಹೆಚ್ಚು ನೀರು ಉಳಿತಾಯವಾಗಲಿದೆ ಎಂದು ಮಾರ್ಟಿಯಾ ವಿವರಿಸಿರುವುದಾಗಿ ವರದಿ ತಿಳಿಸಿದೆ.