Advertisement

ಕಾಂಗರೂಗಳು ಬಂದರೂ ದಾರಿ ಬಿಡಬೇಡಿ!

12:29 PM Feb 18, 2017 | Team Udayavani |

19 ಟೆಸ್ಟ್‌ಗಳಿಂದ ಸೋತಿಲ್ಲ ಭಾರತ. ಅದಕ್ಕೆ ಮುಕ್ಕು ತರುವ ಗುರಿಯೊಂದಿಗೆ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದು ನಾಲ್ಕು ಟೆಸ್ಟ್‌ ಆಡಲಿದೆ. ಪುಣೆಯಿಂದ ಅವರ ಅಭಿಯಾನ ಆರಂಭ. ಸ್ವಾರಸ್ಯವೆಂದರೆ, ಎರಡೂ ತಂಡಗಳ ನಾಯಕರು ರನ್‌ ಮೆಷಿನ್‌ಗಳು. ವಿರಾಟ್‌ ಕೊಹ್ಲಿ ಸತತ ನಾಲ್ಕು ಸರಣಿಗಳಲ್ಲಿ ನಾಲ್ಕು ದ್ವಿಶತಕ ಸಿಡಿಸಿ ರಾಹುಲ್‌ ದ್ರಾವಿಡ್‌, ಸರ್‌ ಬ್ರಾಡ್‌ಮನ್‌ರ ದಾಖಲೆ ಮುರಿದವರು. ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಕೂಡ ಭರ್ಜರಿ ಫಾರ್ಮ್ನಲ್ಲಿರುವುದು ಸಾಬೀತಾಗಿದೆ. ಬರಲಿರುವ ಸರಣಿಯಲ್ಲಿ ಯಾರ ಬ್ಯಾಟ್‌ ಮಾತಾಡುತ್ತದೆಯೋ ಅವರು ಸರಣಿಯ ಮೇಲೆ ಬಿಗಿ ಹಿಡಿತ ಸಾಧಿಸಲಿದ್ದಾರೆ, ಶ್ಯೂರ್‌!

Advertisement

ತಕ್ಕಡಿ ಅತ್ತ ಇತ್ತ!
ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಕಾಂಗರೂ ತಕ್ಕಡಿಯ ತೂಕ ತುಸು ಹೆಚ್ಚು. ಸ್ಮಿತ್‌ ಅಗ್ರಕ್ರಮಾಂಕದಲ್ಲಿದ್ದಾರೆ. ಅವರ ಜೊತೆ ಡೇವಿಡ್‌ ವಾರ್ನರ್‌ ಐದನೇ ಕ್ರಮಾಂಕದಲ್ಲಿದ್ದಾರೆ. ಇತ್ತ ಭಾರತದ ಕೊಹ್ಲಿ ಮಾತ್ರ ಟಾಪ್‌ 10 ರೊಳಗಿದ್ದಾರೆ. ಬೌಲಿಂಗ್‌ ವಿಚಾರದಲ್ಲಿ ಭಾರತದ ರವಿಚಂದ್ರನ್‌ ಅಶ್ವಿ‌ನ್‌, ರವೀಂದ್ರ ಜಡೇಜಾ ಮೊದಲಿನೆರಡು ರ್‍ಯಾಂಕಿಂಗ್‌ನಲ್ಲಿದ್ದಾರೆ. ಅತ್ತ ಹಸಿರು ಕ್ಯಾಪ್‌ ಪಾಳಯದ ಜೋಶ್‌ ಹ್ಯಾಸಲ್‌ವುಡ್‌ ಮೂರು ಹಾಗೂ ಮೈಕೆಲ್‌ ಸ್ಟಾರ್ಕ್‌ 10ನೇ ಸ್ಥಾನದಲ್ಲಿ ದ್ದಾರೆ. ನೆನಪಿಟ್ಟುಕೊಳ್ಳಬೇಕಾದುದು, ಪಂದ್ಯಗಳು ಭಾರತೀಯ ಪಿಚ್‌ನಲ್ಲಿ ನಡೆಯುತ್ತವೆ ಮತ್ತು ವೇಗದ ಬೌಲರ್‌ಗಳು ವಿಕೆಟ್‌ ಬೇಕು ಎಂದರೆ ಸ್ಪಿನ್‌ ಪ್ರಯತ್ನ ಮಾಡಬೇಕಾಗುತ್ತದೆ! ಹಿಂದೊಮ್ಮೆ ವೇಗದ ಬೌಲರ್‌ ಮನೋಜ್‌ ಪ್ರಭಾಕರ್‌ ತಮ್ಮ ಮೀಡಿಯಮ್‌ ಫಾಸ್ಟ್‌ ಟ್ಯಾಗ್‌ ತೆಗೆದುಹಾಕಿ ಭಾರತೀಯ ಪಿಚ್‌ನಲ್ಲಿ ಆಫ್ಸ್ಪಿನ್‌ ಬೌಲ್‌ ಮಾಡಿದ್ದುಂಟು ಮಾರಾಯ್ರೆ…

ಸ್ವದೇಶದ ಸ್ಪಿನ್‌ ಪಿಚ್‌ನಲ್ಲಿ ಭಾರತಕ್ಕೆ ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ಎದುರು ಆಡುವಾಗ ಮಾತ್ರ ತಡಬಡಾಯಿಸಿದ ಉದಾಹರಣೆಗಳುಂಟು. ಇಂಗ್ಲೆಂಡ್‌ ವಿರುದ್ಧ 2012ರಲ್ಲಿ ಸೋತ ನೆನಪು ಹಾಗೂ ಸಾಕಷ್ಟು ಸಮರ್ಥವಾಗಿಯೇ ಭಾರತಕ್ಕೆ ಬಂದಿಳಿದ ಈ ಬಾರಿಯ ಇಂಗ್ಲೆಂಡ್‌ ತಂಡದ ಎದುರು ಭಾರತದ ಸತ್ವಪರೀಕ್ಷೆ ನಡೆಯಲಿದೆ ಎಂಬ ಮಾತಿತ್ತು. ಮೊದಲ ಟೆಸ್ಟ್‌ನಲ್ಲಿ ಅವರ ವಿರುದ್ಧ ಸೋಲಿನ ಅಂಚಿಂದ ಡ್ರಾದೆಡೆಗೆ ನಡೆದು ನಿಟ್ಟುಸಿರು ಬಿಟ್ಟಿದ್ದು ಅದಕ್ಕೆ ಸಾಕ್ಷ್ಯವಾಗಿತ್ತು. ಇಂತಿಪ್ಪ ತಂಡದ ಎದುರೂ ಭಾರತ 5-0 ದಲ್ಲಿ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದು ಸೌರವ್‌ ಗಂಗೂಲಿ. 

ಆಸ್ಟ್ರೇಲಿಯಾ ಕಪ್ಪು ಕುದುರೆ!
ಈಗ ಮತ್ತೆ ಕೇಳಿ ನೋಡಿದರೆ, ಕಾಂಗರೂ ವಿರುದ್ಧವೂ ಅದೇ ಫ‌ಲಿತಾಂಶ, 4-0 ಎನ್ನುತ್ತಾರವರು! 2001ರ ಅತ್ಯುತ್ತಮ ಆಸ್ಟ್ರೇಲಿಯಾ ತಂಡವನ್ನೇ ಸ್ವದೇಶದಲ್ಲಿ ಭಾರತ ಬಗ್ಗುಬಡಿದಿತ್ತು. 500 ವಿಕೆಟ್‌ಗಳ ಗ್ಲೆನ್‌ ಮೆಗ್ರಾತ್‌, 700 ಬಲಿ ಪಡೆದ ಶೇನ್‌ ವಾರ್ನ್ ಕೂಡ ಇಲ್ಲಿನ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿರಲಿಲ್ಲ. ಈಗಂತೂ ಆಸ್ಟ್ರೇಲಿಯಾ ಪುನರುತ್ಥಾನದ ಪ್ರಯತ್ನದಲ್ಲಿದೆ. ಅವರಿಗೆ ಜಯ ಬಿಡಿ, 

ಡ್ರಾ ಕೂಡ ಧನಾತ್ಮಕ ಫ‌ಲಿತಾಂಶ!
ಹಾಗೆಂದು ಯಾವುದೇ ಎದುರಾಳಿಯನ್ನೂ ನಿರ್ಲಕ್ಷ್ಯದಿಂದ ನೋಡುವ ಪರಿಸ್ಥಿತಿ ಈಗಿಲ್ಲ. ಅದು ಬಾಂಗ್ಲಾ ಆಗಿದ್ದರೂ ಸೈ, ಜಿಂಬಾಬ್ವೆ ಎದುರಾದರೂ. ಅಂಡರ್‌ಡಾಗ್‌ ಆಗಿಯೇ ಭಾರತಕ್ಕೆ ಬಂದಾಗ ಕಾಂಗರೂ ಪಡೆ ಹೊಸ ಚೈತನ್ಯ ಪಡೆದು ಮರಳಿದ್ದು ಚರಿತ್ರೆಯಲ್ಲಿ ಹಲವು ಬಾರಿ ವ್ಯಕ್ತ. ಅಲಾನ್‌ ಬಾರ್ಡರ್‌ರ ತಂಡ ಭಾರತದ ವಿರುದ್ಧ ಅತ್ಯಪರೂಪದ ಟೈ ಮಾಡಿಕೊಂಡ ನಂತರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಾರಮ್ಯ ಮೆರೆದಿತ್ತು. ಇದೇ ವ್ಯಕ್ತಿಯ ಪಡೆ ಭಾರತೀಯ ಉಪಖಂಡದಲ್ಲಿ ತನ್ನ ಮೊತ್ತಮೊದಲ ವಿಶ್ವಕಪ್‌ ಗೆದ್ದು ಹೊಸ ಪರಂಪರೆಗೆ ನಾಂದಿ ಹಾಡಿತ್ತು.

Advertisement

ಕೊನೆ ಒಗ್ಗರಣೆ
ಭಾರತ ತಂಡ ಯಾವತ್ತೂ ಪರಿಣಿತ ಬೌಲರ್‌ಗಿಂತ ಸ್ಟಾಪ್‌ಗ್ಯಾಪ್‌ ಅಥವಾ ಅಪರಿಚಿತ ಬೌಲರ್‌ ಎದುರು ಎಡವಿದೆ. ಕಳೆದ 2001ರ ಸರಣಿಯಲ್ಲೂ ಮೈಕೆಲ್‌ ಕ್ಲಾಕ್‌ ಮಿಂಚಿದ್ದರು. ಈ ಬಾರಿ ಆಸೀಸ್‌ ತಂಡದಲ್ಲಿ ಕ್ವೀನ್ಸ್‌ಲ್ಯಾಂಡ್‌ನ‌ ಲೆಗ್ಗಿ ಮೈಕೆಲ್‌ ಸ್ಟೀವನ್‌ಸನ್‌ಗೆ ಅವಕಾಶ ಕಲ್ಪಿಸಲಾಗಿದೆ. 23ರ ಸ್ಟೀವನ್‌ಸನ್‌ 14 ಶೆಫೀಲ್ಡ್‌ಶೀಲ್ಡ್‌ ಪಂದ್ಯಗಳಿಂದ 41 ವಿಕೆಟ್‌ ಮಾತ್ರ ಕಿತ್ತಿದ್ದಾರೆ. ಆದರೆ ನಾಯಕನಾದಿಯಾಗಿ ಖುದ್ದು “ಐತಿಹಾಸಿಕ ಶೇನ್‌ ವಾರ್ನ್ರ ಗಮನ ಸೆಳೆದಿದ್ದಾರೆ ಸ್ಟೀವನ್‌ಸನ್‌. ಮೊದಲ ಕಂತಲ್ಲಿಯೇ ಪರಿಗಣಿಸಬೇಕಾದ ಟೆಸ್ಟ್‌ ಸ್ಪಿನ್ನರ್‌ಗಳಾದ ನಥಾನ್‌ ಲಿಯಾನ್‌, ಸ್ಟೀವ್‌ ಓ ಕೆಫೆ ಅಥವಾ ಅಸ್ಟಾನ್‌ ಅಗರ್‌ರನ್ನು ಬಿಟ್ಟು ಮೈಕೆಲ್‌ ಸ್ಟೀವನ್‌ಸನ್‌ರನ್ನು ಆಡುವ 11ರಲ್ಲಿ ಹೂಡುವ ಗ್ಯಾಂಬ್ಲಿಂಗ್‌ನ್ನು ಆಸ್ಟ್ರೇಲಿಯಾ ಮಾಡಲಿದೆಯೇ?

ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next