ಅಡಿಲೇಡ್ : ಟಿ20 ವಿಶ್ವಕಪ್‌ನಲ್ಲಿ ಶುಕ್ರವಾರ ನಡೆದ ಸೂಪರ್ 12 ಗ್ರೂಪ್ 1 ರ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವು ಅಫ್ಘಾನಿಸ್ಥಾನ ವಿರುದ್ಧ ನಾಲ್ಕು ರನ್‌ಗಳ ಅಂತರದ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಅಫ್ಘಾನಿಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು . ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 168 ರನ್ ಗಳನ್ನು ಕಲೆಹಾಕಿತು. ವಾರ್ನರ್ (25), ಸ್ಟೀವನ್ ಸ್ಮಿತ್(4), ಮಾರ್ಷ್(45) ಸ್ಟೊಯಿನಿಸ್(25) ವೇಡ್(6) ಕಮ್ಮಿನ್ಸ್(0) ಕೇನ್ ರಿಚರ್ಡ್‌ಸನ್ (1) ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಪಂದ್ಯ ಶ್ರೇಷ್ಠ ಆಟಗಾರನಾಗಿ ಹೊರ ಹೊಮ್ಮಿದರು. ಅವರು 32 ಎಸೆತಗಳಲ್ಲಿ 54 ರನ್ ಕೊಡುಗೆ ನೀಡಿದರು.
ರಶೀದ್ ಖಾನ್ ಹೋರಾಟ ವ್ಯರ್ಥ
ಗುರಿ ಬೆನ್ನಟ್ಟಿದ ಅಫ್ಘಾನ್ ತೀವ್ರ ಹೋರಾಟ ಸಂಘಟಿಸಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಉಸ್ಮಾನ್ ಘನಿ 2 ರನ್ ಗಳಿಸಿದ್ದಾಗ ಔಟಾದರು. ರಹಮಾನುಲ್ಲಾ ಗುರ್ಬಾಜ್ 30,ಗುಲ್ಬದಿನ್ ನೈಬ್ 39, ಇಬ್ರಾಹಿಂ ಜದ್ರಾನ್ 26 ರನ್ ಗಳಿಸಿ ತಂಡದ ಗೆಲುವಿನ ಆಸೆ ಜೀವಂತವಾಗಿರಿಸಿದ್ದರು. ಇಬ್ರಾಹಿಂ, ನಜೀಬುಲ್ಲಾ ಝದ್ರಾನ್ 0,ಮೊಹಮ್ಮದ್ ನಬಿ 1 ಅವರ ಮೂರು ವಿಕೆಟ್ ಗಳು ಏಕಾಏಕಿ ಪತನವಾದಾಗ ತಂಡ ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ತಂಡದ ಪರ ಹೋರಾಟಕ್ಕಿಳಿದ ದರ್ವಿಶ್ ರಸೂಲಿ 15 ರನ್ ಗಳಿಸಿದರು.
ಆಲ್ ರೌಂಡರ್ ರಶೀದ್ ಖಾನ್ ಹೋರಾಟಕ್ಕಿಳಿದು ಭರ್ಜರಿ ಹೊಡೆತಗಳನ್ನು ಆಡಿದರು ಮತ್ತು ದರ್ವಿಶ್ ರಸೂಲಿ ಅವರೊಂದಿಗೆ 28 ಎಸೆತಗಳಲ್ಲಿ ತ್ವರಿತ 45 ರನ್ ಗಳ ಜತೆಯಾಟವನ್ನು ಆಡಿದರು. ಕೊನೆಯ ಓವರ್‌ನಲ್ಲಿ 22 ರನ್ ಬೇಕಾಗುವಂತೆ ಮಾಡಿದರು. ಮಾರ್ಕಸ್ ಸ್ಟೋನಿಸ್ ಎಸೆದ ಅಂತಿಮ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದರು ಆದರೆ ಅದು ಗೆಲ್ಲಲು ಸಾಕಾಗಲಿಲ್ಲ.ರಶೀದ್ ಖಾನ್ 23 ಎಸೆತಗಳಲ್ಲಿ 48 ರನ್ ಗಳಿಸಿ ಅಜೇಯರಾಗಿ ಉಳಿದರು. 3 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನು ಅವರು ಸಿಡಿಸಿದರು.
ಶ್ರೀಲಂಕಾ ಗೆದ್ದರೆ ಆಸೀಸ್ ಗೆ ಸೆಮಿ ಪ್ರವೇಶ
ಅಫ್ಘಾನ್ ಎದುರಿನ ಕಡಿಮೆ ಅಂತರದ ಗೆಲುವು ಅವರ ನಿವ್ವಳ ರನ್ ರೇಟ್ ಅನ್ನು ನಕಾರಾತ್ಮಕವಾಗಿ ಇರಿಸಿದ್ದು, ಇಂಗ್ಲೆಂಡ್ ನಾಳೆ(ಶನಿವಾರ) ಈಗಾಗಲೇ ಸರಣಿಯಿಂದ ಹೊರ ಬಿದ್ದಿರುವ ಶ್ರೀಲಂಕಾವನ್ನು ಸೋಲಿಸಿದರೆ, ಆತಿಥೇಯರು ಸೆಮಿಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಳ್ಳುತ್ತಾರೆ. ಒಂದು ವೇಳೆ ಲಂಕಾ ಜಯ ಸಾಧಿಸಿದರೆ ಆಸೀಸ್ ಸೆಮಿ ಫೈನಲ್ ಪ್ರವೇಶಿಸಲಿದೆ.ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೂ ಅಂಕಗಳ ಆಧಾರದಲ್ಲಿ ಆಸ್ಟ್ರೇಲಿಯಾ ಸೆಮಿ ಫೈನಲ್ ಪ್ರವೇಶಿಸುತ್ತದೆ. ಆಸೀಸ್ 7 ಅಂಕ (-0.173 ರನ್ ರೇಟ್ )ಹೊಂದಿದ್ದು, ಇಂಗ್ಲೆಂಡ್ 5 ಅಂಕ( +0.547 ರನ್ ರೇಟ್)ಹೊಂದಿದೆ.