ಸಿಡ್ನಿ: ಆಸ್ಟ್ರೇಲಿಯಾದ ಖಗೋಳ ವಿಜ್ಞಾನಿಗಳು ಸೌರಮಂಡಲದ ಕ್ಷೀರಪಥದಲ್ಲಿ (ನಕ್ಷತ್ರಗಳ ಸಮೂಹ) ವಿಚಿತ್ರಶಕ್ತಿಯೊಂದನ್ನು ಪತ್ತೆಹಚ್ಚಿದ್ದಾರೆ. ವಿದ್ಯಾರ್ಥಿಯೊಬ್ಬರು ತಮ್ಮ ಥೀಸಿಸ್‌ಗಾಗಿ ಅಧ್ಯಯನ ನಡೆಸುತ್ತಿದ್ದಾಗ ಟೆಲಿಸ್ಕೋಪ್‌ನಲ್ಲಿ ಹೀಗೊಂದು ವಿಚಿತ್ರಶಕ್ತಿಯೊಂದನ್ನು ನೋಡಿದ್ದಾರೆ. ಅದೇನು ಎಂದು ನತಾಶಾ ಹರ್ಲೆ ವಾಕರ್ ಎಂಬ ಖಭೌತಶಾಸ್ತ್ರಜ್ಞೆ ನೇತೃತ್ವದ ಸಂಶೋಧಕರ ತಂಡ ಪತ್ತೆಹಚ್ಚಲು ಶ್ರಮಿಸುತ್ತಿದೆ.
ಈ ವಿಚಿತ್ರಶಕ್ತಿ ಪ್ರತಿ ಗಂಟೆಗೆ ಮೂರು ಬಾರಿ ತೀವ್ರ ಪ್ರಮಾಣದ ರೇಡಿಯೊ ಅಲೆಗಳನ್ನು ಹೊರಹಾಕುತ್ತದೆ. ಅದೂ ಸರಿಯಾಗಿ 18.18 ನಿಮಿಷಗಳಿಗೊಮ್ಮೆ. ಆಯಸ್ಕಾಂತೀಯ ಶಕ್ತಿಯನ್ನು ಹೊರಹೊಮ್ಮಿಸುವ ಪಲ್ಸರ್ ಎಂಬ ನಕ್ಷತ್ರವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಸರಿಯಾಗಿ 18.18 ನಿಮಿಷಗಳಿಗೆ ರೇಡಿಯೊ ಅಲೆಗಳನ್ನು ಹೊರಹಾಕುವ ವಸ್ತುವನ್ನು ಮಾತ್ರ ಹಿಂದೆಂದೂ ಕಂಡಿರಲಿಲ್ಲ ಎಂದು ಸಂಶೋಧಕರ ತಂಡ ಹೇಳಿಕೊಂಡಿದೆ. ಅದೇಕೆ ಹಾಗೆ, ಅದರಿಂದ ಹೊರಬರುತ್ತಿರುವ ಶಕ್ತಿಯೇನು ಎಂದು ಈ ತಂಡ ಹುಡುಕುತ್ತಿದೆ.
ಈ ಶಕ್ತಿಪುಂಜದ ಬಗ್ಗೆ ಇನ್ನೂ ಹಲವು ಸಂಗತಿಗಳನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅದು ಭೂಮಿಯಿಂದ 4000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಬಹಳ ತೀಕ್ಷ್ಣ ಹೊಳಪನ್ನು ಹೊಂದಿದೆ. ಹಾಗೆಯೇ ಅತಿ ಬಲಿಷ್ಠವಾದ ಆಯಸ್ಕಾಂತೀಯ ವಲಯವನ್ನು ಹೊಂದಿದೆ. ಇದರ ಕುರಿತ ಹಲವು ಸಾಧ್ಯತೆಗಳ ಕುರಿತು ಸಂಶೋಧನೆಗಳು ಸಾಗಿವೆ.