ಕ್ಯಾನ್‌ಬೆರಾ (ಆಸ್ಟ್ರೇಲಿಯ): ಅಂತಾರಾಷ್ಟ್ರೀಯ ಪಂದ್ಯಕ್ಕೆ ಕಾಲಿಡುವ ಮೊದಲು, ಮೈದಾನಕ್ಕೆ ನೀರು ಕೊಂಡೊಯ್ಯುವುದು ತನ್ನ ಕೆಲಸವಲ್ಲ ಎಂದು ಸೌರವ್ ಗಂಗೂಲಿ “ದರ್ಪ’ ಪ್ರದರ್ಶಿಸಿದ ಘಟನೆ ಬಗ್ಗೆ ತಿಳಿದಿರಬಹುದು. ಇದಕ್ಕೆ ವ್ಯತಿರಿಕ್ತವಾದ ವಿದ್ಯಮಾನವೊಂದು ಗುರುವಾರ ಆಸ್ಟ್ರೇಲಿಯದಲ್ಲಿ ಕಂಡುಬಂದಿದೆ. ಪ್ರವಾಸಿ ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಸ್ವತಃ ಆಸ್ಟ್ರೇಲಿಯದ ಪ್ರಧಾನಿ ಸ್ಕಾಟ್ ಮಾರಿಸನ್ “ವಾಟರ್ ಬಾಯ್’ ಆಗಿ ಕರ್ತವ್ಯ ನಿಭಾಯಿಸಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ!
ಶ್ರೀಲಂಕಾ ಮತ್ತು ಪ್ರೈಮ್ ಮಿನಿಸ್ಟರ್ ಇಲೆವೆನ್ ನಡುವಿನ ಟಿ20 ಅಭ್ಯಾಸ ಪಂದ್ಯ ಇಲ್ಲಿನ “ಮನುಕಾ ಓವಲ್’ನಲ್ಲಿ ನಡೆಯುತ್ತಿತ್ತು. ಫೀಲ್ಡಿಂಗ್ ನಡೆಸುತ್ತಿದ್ದ ಕ್ರಿಸ್ ಲಿನ್ ಮತ್ತು ಜಾಸನ್ ಸಂಗಾ, ಲಂಕಾ ಇನ್ನಿಂಗ್ಸ್‌ನ 16ನೇ ಓವರ್ ವೇಳೆ ನೀರು ತರುವಂತೆ ಸೂಚಿಸಿದರು. ಆಗ ಪ್ರಧಾನಿ ಸ್ಕಾಟ್ ಮಾರಿಸನ್ ವಾಟರ್ ಬಾಟಲ್‌ಗಳೊಂದಿಗೆ ಅಂಗಳಕ್ಕಿಳಿದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದರು.
ಆಸ್ಟ್ರೇಲಿಯ ಕ್ರಿಕೆಟಿಗರ ಹಳದಿ ಕ್ಯಾಪ್, ಬಿಳಿ ಬಣ್ಣದ ಮಾಮೂಲು ಅಂಗಿ, ಕಪ್ಪು ಪ್ಯಾಂಟ್, ಹಸಿರು ಟೈ ಧರಿಸಿದ್ದ ಪ್ರಧಾನಿ “ವಾಟರ್ ಬಾಯ್’ ಆಗಿ ಕಾಣಿಸಿಕೊಂಡಿದ್ದನ್ನು ಯಾರಿಗೂ ನಂಬಲು ಸಾಧ್ಯವಿರಲಿಲ್ಲ!
ಈ ಪಂದ್ಯದಲ್ಲಿ ಪ್ರೈಮ್ ಮಿನಿಸ್ಟರ್ ಇಲೆವೆನ್ ಒಂದು ವಿಕೆಟ್ ಅಂತರ ದಿಂದ ರೋಚಕ ಜಯ ಸಾಧಿಸಿತು.