ಹೊಸದಿಲ್ಲಿ : ಆತಿಥೇಯ ಆಸ್ಟ್ರೇಲಿಯ ವಿರುದ್ದ 2-1 ಅಂತರದಲ್ಲಿ ಚೊಚ್ಚಲ ಐತಿಹಾಸಿಕ ಟೆಸ್ಟ್ ಸರಣಿಯನ್ನು ಭಾರತ ಜಯಿಸುವಲ್ಲಿ ಅತ್ಯಧಿಕ ವಿಕೆಟ್ ಕಿತ್ತಿದ್ದ ವೇಗದ ಎಸೆಗಾರ ಜಸ್‌ಪ್ರೀತ್ ಬುಮ್ರಾ ಅವರನ್ನು ಈಗಿನ್ನು ಆಸೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಯಿಂದ ಮತ್ತು ನ್ಯೂಜಿಲ್ಯಾಂಡ್ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ.
ಆಸ್ಟ್ರೇಲಿಯ ಮತ್ತು ನ್ಯೂಜಿಲಾಂಡ್ ಪ್ರವಾಸಕ್ಕೆ ಬುಮ್ರಾ ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಅಷ್ಟೇ ಅಲ್ಲದೆ ನ್ಯೂಜಿಲ್ಯಾಂಡ್ ವಿರುದ್ದ ಮೂರು ಟಿ-20 ಸರಣಿಗೆ ಸಿದ್ಧಾರ್ಥ ಕೌಲ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಬುಮ್ರಾ ನಿರ್ವಹಿಸಿದ ಕಾರ್ಯಭಾರ ಮತ್ತು ಒತ್ತಡವನ್ನು ಪರಿಗಣಿಸಿ ಅವರಿಗೆ ವಿಶ್ರಾಂತಿ ನೀಡುವ ನಿರ್ಧಾರ ಕೈಗೊಳ್ಳಲಾಯಿತೆಂದು ಬಿಸಿಸಿಐ ಹೇಳಿದೆ.
ಇಂಗ್ಲಂಡ್‌ನಲ್ಲಿ ನಡೆಯುವ ವಿಶ್ವ ಕಪ್ ಕ್ರಿಕೆಟ್ ಗೆ ಮುನ್ನ ಭಾರತ ಪ್ರವಾಸ ಕೈಗೊಳ್ಳುವ ಆಸ್ಟ್ರೇಲಿಯ ತಂಡದ ವಿರುದ್ಧದ ದೇಶೀಯ ಸರಣಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.
25ರ ಹರೆಯದ ಬುಮ್ರಾ ಅವರು ಆಸ್ಟ್ರೇಲಿಯದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ನ ಅಂತಿಮ ದಿನದಂದು ಕೇವಲ 86 ರನ್ ವೆಚ್ಚಕ್ಕೆ 9 ವಿಕೆಟ್ ಕಿತ್ತ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.