ಮೆಲ್ಬೋರ್ನ್: ಬೌಲರ್ ಗಳ ಸಾಧಾರಣ ಪ್ರದರ್ಶನ ಮತ್ತು ಬ್ಯಾಟಿಂಗ್ ನಲ್ಲಿ ದಿಢೀರ್ ಕುಸಿತ ಕಂಡ ಭಾರತ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಭಾರೀ ಹಿನ್ನಡೆ ಸಾಧಿಸಿದೆ. ಬಾರ್ಡರ್ ಗಾವಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಪಂದ್ಯ ಇದೀಗ ಆತಿಥೇಯ ಆಸ್ಟ್ರೇಲಿಯಾದ ಬಿಗಿ ಮುಷ್ಟಿಯಲ್ಲಿದೆ. ಎರಡನೇ ದಿನದಾಟದ ಅಂತ್ಯಕ್ಕೆ ರೋಹಿತ್ ಪಡೆಯು 310 ರನ್ ಹಿನ್ನಡೆ ಅನುಭವಿಸಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಸ್ಟೀವ್ ಸ್ಮಿತ್ ಶತಕದ ನೆರವಿನಿಂದ ಆಸ್ಟ್ರೇಲಿಯಾ 474 ರನ್ ಗಳಿಸಿದೆ. ಭಾರತ ತಂಡವು ದಿನದಾಟದ ಅಂತ್ಯಕ್ಕೆ ಐದು ವಿಕೆಟ್ ಗೆ 164 ರನ್ ಮಾಡಿದೆ.
ಆರು ವಿಕೆಟ್ ಗೆ 311 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಆಸೀಸ್ ತಂಡಕ್ಕೆ ಸ್ಮಿತ್ ನೆರವಾದರು. ಸರಣಿಯ ಮತ್ತೊಂದು ಶತಕ ಬಾರಿಸಿದ ಸ್ಮಿತ್ 140 ರನ್ ಮಾಡಿದರು. 197 ಎಸೆತ ಎದುರಿಸಿದ ಸ್ಮಿತ್ ಮೂರು ಸಿಕ್ಸರ್ ಮತ್ತು 13 ಬೌಂಡರಿ ಬಾರಿಸಿದರು. ನಾಯಕ ಕಮಿನ್ಸ್ 49 ರನ್ ಮಾಡಿದರು.
ಭಾರತದ ಪರ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಕಿತ್ತರೆ, ರವೀಂದ್ರ ಜಡೇಜಾ ಮೂರು ವಿಕೆಟ್ ಮತ್ತು ಆಕಾಶ್ ದೀಪ್ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ವಾಷಿಂಗ್ಟನ್ ಸುಂದರ್ ಪಾಲಾಯಿತು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲಿಯೇ ಮೊದಲ ವಿಕೆಟ್ ಕಳೆದುಕೊಂಡಿತು. ಮತ್ತೆ ಆರಂಭಿಕರಾಗಿ ಕಣಕ್ಕೆ ಇಳಿದ ನಾಯಕ ರೋಹಿತ್ ಶರ್ಮಾ ಎರಡನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿ ಮರಳಿದರು. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಎರಡನೇ ವಿಕೆಟ್ ಗೆ 43 ರನ್ ಜೊತೆಯಾಟವಾಡಿದರು. 24 ರನ್ ಗಳಿಸಿ ಉತ್ತಮವಾಗಿ ಕಾಣುತ್ತಿದ್ದ ರಾಹುಲ್ ಪ್ಯಾಟ್ ಕಮಿನ್ಸ್ ಅವರ ಅಧ್ಭುತ ಎಸೆತಕ್ಕೆ ಬಲಿಯಾದರು. ಬಳಿಕ ಜೈಸ್ವಾಲ್ ಜೊತೆಯಾದ ವಿರಾಟ್ ಮೂರನೇ ವಿಕೆಟ್ ಗೆ 102 ರನ್ ಒಟ್ಟುಮಾಡಿದರು.
ಉತ್ತಮ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 82 ರನ್ ಗಳಿಸಿದ್ದ ವೇಳೆ ರನೌಟ್ ಗೆ ಬಲಿಯಾದರು. ಲಯದಲ್ಲಿ ಕಂಡುಬಂದ ವಿರಾಟ್ ಕೊಹ್ಲಿ 36 ರನ್ ಗಳಿಸಿದ್ದ ವೇಳೆ ಕೀಪರ್ ಗೆ ಕ್ಯಾಚಿತ್ತು ಮರಳಿದರು. ನೈಟ್ ವಾಚಮನ್ ಆಗಿ ಬಂದ ಆಕಾಶ್ ದೀಪ್ ಶೂನ್ಯ ಸುತ್ತಿದರು. ಸದ್ಯ ಆರು ರನ್ ಗಳಿಸಿರುವ ಪಂತ್ ಮತ್ತು ನಾಲ್ಕು ರನ್ ಗಳಿಸಿರುವ ಜಡೇಜಾ ಕ್ರೀಸ್ ನಲ್ಲಿದ್ದಾರೆ. ಭಾರತ ಐದು ವಿಕೆಟ್ ಕಳೆದುಕೊಂಡು 164 ರನ್ ಮಾಡಿದೆ.