Advertisement

ICC Men’s Test Player Rankings: ಆಸ್ಟ್ರೇಲಿಯ 1-2-3; ಮೂರಕ್ಕೇರಿದ ಟ್ರ್ಯಾವಿಸ್‌ ಹೆಡ್‌

11:47 PM Jun 14, 2023 | Team Udayavani |

ದುಬಾೖ: ನೂತನ ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯ ಮೊದಲ 3 ಸ್ಥಾನ ಅಲಂಕರಿಸಿದೆ. ಟ್ರ್ಯಾವಿಸ್‌ ಹೆಡ್‌ 3ನೇ ಸ್ಥಾನಕ್ಕೆ ಏರುವುದರೊಂದಿಗೆ ಆಸೀಸ್‌ ಈ ಗೌರವ ಸಂಪಾದಿಸಿತು.

Advertisement

ಮಾರ್ನಸ್‌ ಲಬುಶೇನ್‌ (903) ಮೊದಲೇ ರ್‍ಯಾಂಕಿಂಗ್‌ ಯಾದಿಯ ಪ್ರಥಮ ಸ್ಥಾನ ಅಲಂಕರಿಸಿದ್ದರು. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಶತಕ ಬಾರಿಸುವ ಮೂಲಕ ಸ್ಟೀವನ್‌ ಸ್ಮಿತ್‌ (885) ಒಂದು ಸ್ಥಾನ ಮೇಲೇರಿದರು. ಮತ್ತೋರ್ವ ಶತಕವೀರ ಟ್ರ್ಯಾವಿಸ್‌ ಹೆಡ್‌ ಒಮ್ಮೆಲೇ 3 ಸ್ಥಾನಗಳ ಪ್ರಗತಿ ಸಾಧಿಸಿ ಮೂರಕ್ಕೇರಿದರು. ಅವರೀಗ 884 ರೇಟಿಂಗ್‌ ಅಂಕ ಹೊಂದಿದ್ದಾರೆ. ಸ್ಮಿತ್‌ ಮತ್ತು ಹೆಡ್‌ ಕ್ರಮವಾಗಿ 121 ಹಾಗೂ 163 ರನ್‌ ಬಾರಿಸಿದ್ದರು. ಈ ಸಾಧನೆಗಾಗಿ ಹೆಡ್‌ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು.

1984ರ ಬಳಿಕ…
1984ರ ಬಳಿಕ ಟೆಸ್ಟ್‌ ಬ್ಯಾಟಿಂಗ್‌ ಯಾದಿಯ ಮೊದಲ 3 ಸ್ಥಾನವನ್ನು ಒಂದೇ ದೇಶದ ಆಟಗಾರರು ಅಲಂಕ ರಿಸಿದ ಮೊದಲ ನಿದರ್ಶನ ಇದಾಗಿದೆ. ಅಂದು ವೆಸ್ಟ್‌ ಇಂಡೀಸ್‌ನ ಗಾರ್ಡನ್‌ ಗ್ರೀನಿಜ್‌ (810), ಕ್ಲೈವ್‌ ಲಾಯ್ಡ (787) ಮತ್ತು ಲ್ಯಾರಿ ಗೋಮ್ಸ್‌ (773) ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಹಿನ್ನಡೆ ಕಂಡವರು
ನೂತನ ಬ್ಯಾಟಿಂಗ್‌ ರ್‍ಯಾಂಕಿಂಗ್‌ ಯಾದಿಯ ಟಾಪ್‌-10 ಯಾದಿ ಯಲ್ಲಿ ನಾಲ್ವರು ಕುಸಿತ ಕಂಡಿದ್ದಾರೆ. ಇವರೆಂದರೆ ವಿಲಿಯಮ್ಸನ್‌, ಖ್ವಾಜಾ (2 ಸ್ಥಾನ); ಬಾಬರ್‌ ಆಜಂ ಮತ್ತು ಜೋ ರೂಟ್‌ (1 ಸ್ಥಾನ).

ಟಾಪ್‌-10 ಯಾದಿಯಲ್ಲಿರುವ ಏಕೈಕ ಭಾರತೀಯ ಆಟಗಾರನೆಂದರೆ ರಿಷಭ್‌ ಪಂತ್‌. ಕಳೆದ 6 ತಿಂಗಳಿಂದ ಇವರು ಕ್ರಿಕೆಟ್‌ನಿಂದ ದೂರವಿದ್ದರೂ 10ನೇ ಸ್ಥಾನದಲ್ಲಿರುವುದು ವಿಶೇಷ. ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ 12ನೇ ಮತ್ತು 13ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

Advertisement

ಟೆಸ್ಟ್‌ ಫೈನಲ್‌ನಲ್ಲಿ ಕ್ರಮವಾಗಿ 89 ಮತ್ತು 46 ರನ್‌ ಮಾಡಿದ ಅಜಿಂಕ್ಯ ರಹಾನೆ ಮರಳಿ ರ್‍ಯಾಂಕಿಂಗ್‌ ಯಾದಿಯಲ್ಲಿ ಕಾಣಿಸಿಕೊಂಡಿದ್ದು, 37ನೇ ಸ್ಥಾನದಲ್ಲಿದ್ದಾರೆ.

ಅಶ್ವಿ‌ನ್‌ ನಂ.1 ಬೌಲರ್‌
ಟೆಸ್ಟ್‌ ಫೈನಲ್‌ನಲ್ಲಿ ಆಡುವ ಅವಕಾಶ ಪಡೆಯದೇ ಹೋದರೂ ಭಾರತದ ಅಗ್ರಮಾನ್ಯ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಅಗ್ರ ಹತ್ತರಲ್ಲಿರುವ ಭಾರತದ ಮತ್ತಿಬ್ಬರು ಬೌಲರ್‌ಗಳೆಂದರೆ ಬುಮ್ರಾ ಮತ್ತು ರವೀಂದ್ರ ಜಡೇಜ. ಇವರಲ್ಲಿ ಬುಮ್ರಾ 2 ಸ್ಥಾನ ಕುಸಿತ ಕಂಡು ಎಂಟಕ್ಕೆ ಇಳಿದಿದ್ದಾರೆ. ಜಡೇಜ 9ನೇ ಸ್ಥಾನಿಯಾಗಿದ್ದಾರೆ. ಓಲೀ ರಾಬಿನ್ಸನ್‌ ಮತ್ತು ನಥನ್‌ ಲಿಯಾನ್‌ ಒಂದೊಂದು ಸ್ಥಾನ ಏರಿಕೆ ಕಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next