Advertisement

ಚೆಂಡು ವಿರೂಪ ಆಸೀಸ್‌ ಕುರೂಪ

11:54 AM Mar 31, 2018 | |

ಇಂದು, ಕ್ರೀಡೆ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಒಂದು ರಾಷ್ಟ್ರದ ಗುಣ, ವಿನಯ, ಸಂಸ್ಕೃತಿಯ ರಾಯಭಾರಿಯಾಗಿ ಮಾರ್ಪಟ್ಟಿದೆ. ಯಾರೋ ಒಬ್ಬಿಬ್ಬರು ಮಾಡುವ ಕಳ್ಳಾಟಕ್ಕೆ ವಿಶ್ವದ ಮುಂದೆ ಇಡೀ ರಾಷ್ಟ್ರವೇ ತಲೆಬಾಗಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಆ ರಾಷ್ಟ್ರದ ಜನರೆಲ್ಲರೂ ಕಳ್ಳರು ಎಂದು ಬೆಟ್ಟುಮಾಡಿ ತೋರಿಸುವಂತಾಗಿಬಿಡುತ್ತದೆ. ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದ ಸ್ಟೀವನ್‌ ಸ್ಮಿತ್‌ ಪಡೆ ಆಸ್ಟ್ರೇಲಿಯವನ್ನು ಜಗತ್ತಿನ ಮುಂದೆ ಬೆತ್ತಲಾಗಿ ನಿಲ್ಲಿಸಿದೆ. ಕ್ರಿಕೆಟ್‌, ಸಭ್ಯರ ಆಟ ಎಂದೇ ಚಿರಪರಿಚಿತ. ಜಾಗತಿಕ ಮಟ್ಟದಲ್ಲಿ ದಿನ ಕಳೆದಂತೆಲ್ಲಾ ಕ್ರಿಕೆಟ್‌ ಉನ್ನತಿಗೆ ಏರುತ್ತಿದೆ. ಆದರೆ, ಈ ಆಟದಲ್ಲಿ ಕಂಡುಬರುತ್ತಿರುವ ಕಳ್ಳಾಟ ಪ್ರಕರಣಗಳು ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಮೂಡಿಸುತ್ತಿವೆ. ಆಟದ ಮೇಲಿನ ನಂಬಿಕೆಯನ್ನೇ ಕಸಿದುಬಿಡುತ್ತಿವೆ. 

Advertisement

ಗುಣ ನೋಡಿ ಮಣೆ
ಕ್ರಿಕೆಟ್‌ ಅನ್ನು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ವೀಕ್ಷಿಸುತ್ತಾರೆ. ತನ್ನ ರಾಷ್ಟ್ರದ ವಿರುದ್ಧ ಆಡುವ ತಂಡದ ಆಟಗಾರ ಯಾವ ರೀತಿ ವರ್ತಿಸುತ್ತಾನೆ ಅನ್ನುವುದನ್ನು ಹೆಚ್ಚಿನ ಪ್ರೇಕ್ಷಕರು ಗಮನಿಸುತ್ತಾರೆ. ಎದುರಾಳಿ ತಂಡದವರು ಸಭ್ಯವಾಗಿ ವರ್ತಿಸಿದರೆ, ನೋಡುಗನಿಗೆ ಆ ರಾಷ್ಟ್ರದ ಮೇಲೆ ಅಭಿಮಾನ ಚಿಗುರುತ್ತದೆ. ಆದೇ ಆಟಗಾರನೊಬ್ಬ ಅಸಭ್ಯವಾಗಿ ವರ್ತಿಸಿದರೆ ಅಭಿಮಾನಿಗಳು ಆ ರಾಷ್ಟ್ರವನ್ನೇ ದೂರಲು ಆರಂಭಿಸುತ್ತಾರೆ.

ಪಾಕ್‌ನಲ್ಲಿ ಕೊಹ್ಲಿಗೆ ಅಭಿಮಾನಿಗಳು!
ಭಾರತ ಮತ್ತು ಪಾಕಿಸ್ತಾನಗಳು ಸಾಂಪ್ರದಾಯಿಕ ಎದುರಾಳಿಗಳು. ರಾಜಕೀಯ ವಾತಾವರಣ ಹದಗೆಟ್ಟಿರುವುದರಿಂದ ಈ ಎರಡೂ ರಾಷ್ಟ್ರಗಳ ಕ್ರಿಕೆಟ್‌ ಸಂಬಂಧವೂ ಹಳಸಿದೆ. ಉಭಯ ರಾಷ್ಟ್ರಗಳ ನಡುವಿನ ಕ್ರಿಕೆಟ್‌ ಪಂದ್ಯ ಯಾವಾಗ ನಡೆದರೂ ಸರಿ, ಅದನ್ನು ಯುದ್ಧದ ರೀತಿ ನೋಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಭಾರತ ತಂಡದ ನಾಯಕ‌ ವಿರಾಟ್‌ ಕೊಹ್ಲಿ, ಪಾಕಿಸ್ತಾನ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಸ್ವತಃ ಆ ರಾಷ್ಟ್ರದ ಕ್ರಿಕೆಟಿಗರಿಂತ ಕೊಹ್ಲಿಗೆ ಪಾಕ್‌ನಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ. ಅಲ್ಲಿ ನಡೆಯುವ ಕ್ರಿಕೆಟ್‌ ಪಂದ್ಯಗಳಲ್ಲಿ ಕೊಹ್ಲಿ, ಕೊಹ್ಲಿ… ಎಂಬ ಕೂಗು, ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಬಗ್ಗೆ ಅಭಿಮಾನಿಗಳು ಹೇಳಿರುವ ಸಾವಿರಾರು ಮೆಚ್ಚುಗೆಯ ಕಾಮೆಂಟ್‌ಗಳು, 2017ರಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಾಟವೇ ಇದಕ್ಕೆ ಸಾಕ್ಷಿಯಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಕೊಹ್ಲಿಯ ಅದ್ಭುತ ಆಟವಲ್ಲ. ಆಟದ ಜತೆ ಕ್ರಿಡಾಂಗಣದಲ್ಲಿ ತೋರಿಸುವ ವಿನಯ ಕೂಡ ಅಭಿಮಾನಿಗಳು ಸೃಷ್ಟಿಯಾಗಲು ಕಾರಣವಾಗಿದೆ. ಸಚಿನ್‌ ತೆಂಡುಲ್ಕರ್‌ ಅವರನ್ನು ಎಲ್ಲಾ ರಾಷ್ಟ್ರದ ಅಭಿಮಾನಿಗಳು ಇಷ್ಟಪಡಲು ಅವರಲ್ಲಿರುವ ಕ್ರೀಡಾ ಮನೋಭಾವವೇ ಕಾರಣವಾಗಿತ್ತು.

ಸ್ಮಿತ್‌ ಬಳಗದಿಂದ ಮೋಸದ ಆಟ
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್‌ ಸರಣಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಬ್ಯಾನ್‌ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲ, ಬ್ಯಾನ್‌ಕ್ರಾಫ್ಟ್ ಇಂಗ್ಲೆಂಡ್‌ ವಿರುದ್ಧದ ಸರಣಿಯ ವೇಳೆ ಡ್ರೆಸಿಂಗ್‌ ರೂಮ್‌ನಲ್ಲಿ ಸಕ್ಕರೆಯನ್ನು ಪ್ಯಾಂಟಿನ ಕಿಸೆಗೆ ಹಾಕುವ ದೃಶ್ಯ ಕೂಡ ಬಹಿರಂಗವಾಗಿದೆ. ಹೀಗಾಗಿ ಸಕ್ಕರೆಯ ಪುಡಿಯನ್ನು ಸಹ ಚೆಂಡು ವಿರೂಪ ಮಾಡಲು  ಬಳಸಲಾಗಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ದುರಾದೃಷ್ಟವಶಾತ್‌ ಈ ಪ್ರಕರಣದಲ್ಲಿ ನಾಯಕ ಸ್ಟೀವನ್‌ ಸ್ಮಿತ್‌ ಮತ್ತು ಉಪನಾಯಕ ಡೇವಿಡ್‌ ವಾರ್ನರ್‌ ಕೂಡ ಭಾಗಿಯಾಗಿದ್ದಾರೆ. ನಾಯಕ, ಉಪನಾಯಕ ಇಬ್ಬರಿಗೂ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ನಿಷೇಧ ಹೇರಿದೆ. 

ಸ್ಮಿತ್‌ ಸಾಮಾನ್ಯ ಆಟಗಾರನಲ್ಲ
28 ಹರೆಯದ ಸ್ಟೀವನ್‌ ಸ್ಮಿತ್‌ ಸಾಮಾನ್ಯ ಆಟಗಾರನಲ್ಲ. ಚಿಕ್ಕ ವಯಸ್ಸಿಗೇ ನಾಯಕತ್ವದ ಜವಾಬ್ದಾರಿಯನ್ನು ಹೊತ್ತು ಸಮರ್ಥವಾಗಿ ನಿರ್ವಹಿಸಿದಾತ. ಆಡಿರುವ 64  ಟೆಸ್ಟ್‌ನಲ್ಲಿ ಈತ 6199 ರನ್‌ ಬಾರಿಸಿದ್ದಾರೆ. ಅದರಲ್ಲಿ 23 ಶತಕ, 24 ಅರ್ಧಶತಕ ಸೇರಿವೆ. ಎಷ್ಟೋ ಸಂದರ್ಭದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದಾಗ ಗೋಡೆಯಂತೆ ನಿಂತು ಪಾರು ಮಾಡಿದ್ದಾರೆ. ಟೆಸ್ಟ್‌ನಲ್ಲಿ ನೀಡಿರುವ ಪ್ರದರ್ಶನ ಏಕದಿನ ಮತ್ತು ಟಿ20ಯಲ್ಲಿ ಹೊರಹೊಮ್ಮಿಲ್ಲ. ಆದರೆ ತಂಡಕ್ಕೆ ಹೊರೆಯಾಗದೇ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಅದ್ಭುತ ಆಟಗಾರನಾಗಿರುವ ಸ್ಮಿತ್‌ಗೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳ ಬಳಗವಿದೆ. ವಯಸ್ಸು ಕೂಡ ಚಿಕ್ಕದಾಗಿರುವುದರಿಂದ ಇನ್ನೂ ಅನೇಕ ದಾಖಲೆಗಳನ್ನು ನಿರ್ಮಿಸುವ ದಾರಿಯಲ್ಲಿದ್ದರು. ದುರಾದೃಷ್ಟವಶಾತ್‌ ಕಳ್ಳಾಟದಲ್ಲಿ ಸಿಕ್ಕಿಬಿದ್ದಿರುವುದರಿಂದ ಅವರ ಕ್ರೀಡಾ ಭವಿಷ್ಯ ಬಿರುಗಾಳಿಗೆ ಸಿಕ್ಕಿಕೊಂಡಿದೆ. 

Advertisement

ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next