Advertisement

ಆಸೀಸ್‌ ಜಯಭೇರಿ; ಪಾಕಿಗೆ ವೈಟ್‌ವಾಶ್‌

09:59 AM Dec 03, 2019 | Team Udayavani |

ಅಡಿಲೇಡ್‌: “ಅಡಿಲೇಡ್‌ ಓವಲ್‌’ನಲ್ಲಿ ನಡೆದ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನವನ್ನು ಇನ್ನಿಂಗ್ಸ್‌ ಹಾಗೂ 48 ರನ್ನುಗಳಿಂದ ಮಣಿಸಿದ ಆಸ್ಟ್ರೇಲಿಯ, 2 ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ. ಜತೆಗೆ ತಾನಾಡಿದ ಎಲ್ಲ 6 ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳನ್ನು ಗೆದ್ದು ಅಜೇಯ ಓಟ ಮುಂದುವರಿಸಿದೆ.

Advertisement

287 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಳಿಕ ಫಾಲೋಆನ್‌ಗೆ ತುತ್ತಾದ ಪಾಕಿಸ್ಥಾನ, ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್‌ ಕುಸಿತ ಅನುಭವಿಸಿ 239 ರನ್ನುಗಳಿಗೆ ಆಲೌಟ್‌ ಆಯಿತು. ಇದರೊಂದಿಗೆ ಪಾಕಿಸ್ಥಾನ 1999ರಿಂದೀಚೆ ಆಸ್ಟ್ರೇಲಿಯದಲ್ಲಿ ಆಡಿದ ಎಲ್ಲ 14 ಟೆಸ್ಟ್‌ಗಳಲ್ಲೂ ಸೋತ, ಸತತ 5 ಸರಣಿಗಳಲ್ಲೂ ವೈಟ್‌ವಾಶ್‌ ಅನುಭವಿಸಿದ ಅವಮಾನಕ್ಕೆ ಸಿಲುಕಿತು. ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲೂ ಕಾಂಗರೂ ಪಡೆ ಇನ್ನಿಂಗ್ಸ್‌ ಗೆಲುವು ಸಾಧಿಸಿತ್ತು.

ಲಿಯೋನ್‌ 5 ವಿಕೆಟ್‌ ಬೇಟೆ
39ಕ್ಕೆ 3 ವಿಕೆಟ್‌ ಉರುಳಿಸಿಕೊಂಡು 3ನೇ ದಿನದಾಟ ಮುಗಿಸಿದ್ದ ಪಾಕಿಸ್ಥಾನ, 4ನೇ ದಿನವಾದ ಸೋಮವಾರ ಸ್ಪಿನ್ನರ್‌ ನಥನ್‌ ಲಿಯೋನ್‌ ದಾಳಿಗೆ ಸಿಲುಕಿ ತತ್ತರಿಸಿತು. ಲಿಯೋನ್‌ 5 ವಿಕೆಟ್‌ ಹಾರಿಸಿ ಆಸ್ಟ್ರೇಲಿಯದ ಗೆಲುವನ್ನು ಚುರುಕುಗೊಳಿಸಿದರು. ಇದು ಲಿಯೋನ್‌ ಅವರ 16ನೇ “5 ಪ್ಲಸ್‌’ ವಿಕೆಟ್‌ ಬೇಟೆ. ಪಾಕ್‌ ವಿರುದ್ಧ ಮೊದಲ ನಿದರ್ಶನ.
ನಾಟೌಟ್‌ ಬ್ಯಾಟ್ಸ್‌ಮನ್‌ಗಳಾದ ಶಾನ್‌ ಮಸೂದ್‌-ಅಸದ್‌ ಶಫೀಕ್‌ 4ನೇ ವಿಕೆಟ್‌ ಜತೆಯಾಟವನ್ನು 123ರ ತನಕ ವಿಸ್ತರಿಸಿದರೂ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಮಸೂದ್‌ 68, ಶಫೀಕ್‌ 57 ರನ್‌ ಹೊಡೆದರು. 4ನೇ ವಿಕೆಟಿಗೆ 103 ರನ್‌ ಒಟ್ಟುಗೂಡಿತು. ಡೇವಿಡ್‌ ವಾರ್ನರ್‌ ಒಬ್ಬರೇ ಬಾರಿಸಿದ ಮೊತ್ತವನ್ನು (ಅಜೇಯ 335) ಮೀರಲು ಪಾಕ್‌ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫ‌ಲವಾಯಿತು.

ಆಸ್ಟ್ರೇಲಿಯವಿನ್ನು ತವರಲ್ಲಿ ನೆರೆಯ ನ್ಯೂಜಿಲ್ಯಾಂಡ್‌ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-3 ವಿಕೆಟಿಗೆ 589 ಡಿಕ್ಲೇರ್‌. ಪಾಕಿಸ್ಥಾನ-302 ಮತ್ತು 239 (ಮಸೂದ್‌ 68, ಶಫೀಕ್‌ 57, ರಿಜ್ವಾನ್‌ 45, ಲಿಯೋನ್‌ 69ಕ್ಕೆ 5, ಹ್ಯಾಝಲ್‌ವುಡ್‌ 63ಕ್ಕೆ 3).

Advertisement

ಆಸ್ಟ್ರೇಲಿಯ ದ್ವಿತೀಯ
ಪ್ರವಾಸಿ ಪಾಕಿಸ್ಥಾನ ವಿರುದ್ಧದ ಎರಡೂ ಟೆಸ್ಟ್‌ ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯವೀಗ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದೆ. ಆಸೀಸ್‌ 7 ಟೆಸ್ಟ್‌ಗಳಲ್ಲಿ ನಾಲ್ಕನ್ನು ಗೆದ್ದು ಒಟ್ಟು 176 ಅಂಕ ಗಳಿಸಿದೆ. ಎಲ್ಲ 7 ಪಂದ್ಯಗಳನ್ನು ಗೆದ್ದು 360 ಅಂಕ ಹೊಂದಿರುವ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ.

ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ:
ಡೇವಿಡ್‌ ವಾರ್ನರ್‌.

Advertisement

Udayavani is now on Telegram. Click here to join our channel and stay updated with the latest news.

Next