Advertisement

11ರಿಂದ ಶಾಲಾ ಲಸಿಕಾ ಅಭಿಯಾನ

05:38 PM Dec 09, 2019 | Naveen |

ಔರಾದ: ಜಿಲ್ಲಾದ್ಯಂತ ಡಿ.11ರಿಂದ 31ರ ವರೆಗೆ ಶಾಲಾ ಲಸಿಕಾ ಅಭಿಯಾನ ನಡೆಯಲಿದ್ದು, ತಾಲೂಕಿನ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವರ್ಗದವರು ಮುತುವರ್ಜಿಯಿಂದ ಕೆಲಸ ಮಾಡಬೇಕಿದೆ ಎಂದು ತಹಶೀಲ್ದಾರ್‌ ಎಂ. ಚಂದ್ರಶೇಖರ ಹೇಳಿದರು.

Advertisement

ತಾಲೂಕು ಆಡಳಿತ ಮತ್ತು ತಾಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಯಾವ ಮಕ್ಕಳೂ ಈ ಲಸಿಕಾ ಅಭಿಯಾನದಡಿ ಲಸಿಕೆ ಪಡೆಯದೇ ವಂಚಿತರಾಗಕೂಡದು. ಈ ಎರಡು ಲಸಿಕೆಗೆ ಅರ್ಹರಾದಂತಹ ಮಕ್ಕಳು ಅಂಗನವಾಡಿ ಮತ್ತು ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಈ ದೊರೆಯುವುದರಿಂದ ಹೆಚ್ಚಿನ ಜವಾಬ್ದಾರಿ ಶಿಕ್ಷಣ ಇಲಾಖೆ ಮತ್ತು ಸಿಡಿಪಿಒ ಕಚೇರಿಯವರದ್ದಾಗಿದೆ ಎಂದರು.

ತಾಲೂಕು ಆರೋಗ್ಯಾಧಿ ಕಾರಿ ಡಾ| ಶರಣಯ್ಯ ಸ್ವಾಮಿ ಮಾತನಾಡಿ, ಗಂಟಲುಮಾರಿ, ನಾಯಿ ಕೆಮ್ಮು ಮತ್ತು ಧನುರ್ವಾಯ ರೋಗವನ್ನು ತಡೆಯುವ ಲಸಿಕೆ ಇದಾಗಿದ್ದು, ಆರೋಗ್ಯ ಇಲಾಖೆಯಿಂದ ಉಚಿತವಾಗಿ ನೀಡುವ ಈ ಲಸಿಕೆಯನ್ನು ಪ್ರತಿಯೊಂದು ಮಗು ಪಡೆಯುವಂತೆ ಜಾಗೃತಿ ಮೂಡಿಸಬೇಕಿದೆ. ಪೋಷಕರಲ್ಲಿ ಈ ಲಸಿಕೆಯ ಮಹತ್ವ ಮತ್ತು ಅದರ ಲಾಭಗಳ ಕುರಿತು ಮಾಹಿತಿ ಒದಗಿಸಬೇಕಿದೆ. ಶಿಕ್ಷಣ ಇಲಾಖೆಯ ಪ್ರತಿಯೊಂದು ಶಾಲೆಗೆ ಮುಖ್ಯ ಶಿಕ್ಷಕರನ್ನು ನೋಡಲ್‌ ಅಧಿಕಾರಿಯಾಗಿಸಿ ದಾಖಲಾತಿಗೆ ತಕ್ಕಂತೆ ಮಕ್ಕಳನ್ನು ಅಂದು ಶಾಲೆಯಲ್ಲಿ ಕರೆ ತರುವಂತೆ ಸೂಚಿಸಬೇಕಿದೆ ಎಂದು ಹೇಳಿದರು.

ಪೋಷಕರು ಸಹ ಈ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿ ಶೇ.100ರಷ್ಟು ಯಶಸ್ವಿಗೊಳಿಸಲು ಗ್ರಾಪಂ ವತಿಯಿಂದ ಪಿಡಿಒ ಅವರು ಡಂಗುರು ಸಾರುವಂತೆ ಸೂಚಿಸಬೇಕು. ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುವ ವಸತಿ ಶಾಲೆಗಳಲ್ಲಿ, ವಸತಿ ನಿಲಯಗಳಲ್ಲಿ ಇದರ ಕುರಿತು ವ್ಯಾಪಕ ಪ್ರಚಾರವಾಗಿ ಮಕ್ಕಳು ಲಸಿಕೆ ಪಡೆಯಬೇಕಿದೆ ಎಂದರು.

ಈ ಸಂದರ್ಭದಲ್ಲಿ ಡಾ| ಗೋಪಾಲರೆಡ್ಡಿ, ಶಿವಕುಮಾರ ಮಳಗೆ, ಪಪಂ ಸಿಬ್ಬಂದಿ ಸಮೀರ್‌, ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣಾಧಿಕಾರಿ ಸತ್ಯವಾನ ಬೋಗಾರ್‌ ಸೇರಿದಂತೆ ವಿವಿಧ ಇಲಾಖೆಯ ಇನ್ನಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next