ಔರಾದ: ಪಟ್ಟಣದ ಆರಾಧ್ಯ ದೈವ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ರವಿವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ರಥೋತ್ಸವ ಜರುಗಿತು.
ಜಾತ್ರೋತ್ಸವ ಅಂಗವಾಗಿ ಮಂಗಳವಾರದಿಂದಲೇ ಉದ್ಭವಲಿಂಗ ಅಮರೇಶ್ವರ ದೇವಸ್ಥಾನದಲ್ಲಿ ವಿವಿಧ ಪೂಜೆ ಕೈಂಕರ್ಯಗಳು ಆರಂಭಗೊಂಡಿದ್ದು, ರವಿವಾರ ಬೆಳಗಿನ ಜಾವ ಅಮರೇಶ್ವರ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದ ನಂತರ ಸಾಂಸ್ಕೃತಿ ಕಲಾ ವೈಭದ ನಡುವೆ ತೇರು ಎಳೆಯಲಾಯಿತು. 50 ವರ್ಷಗಳಿಗೂ ಮೀಗಿಲಾಗಿ ಇತಿಹಾಸ ಹೊಂದಿರುವ ರಥದಲ್ಲಿ ಉದ್ಭವಲಿಂಗ ಅಮರೇಶ್ವರ ಉತ್ಸವ ಮೂರ್ತಿಯನ್ನು ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.
ಪ್ರಾತಃಕಾಲದಲ್ಲಿ 3:05 ಗಂಟೆಗೆ ಸರಿಯಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿ ಮೂಲಕ ಮುಖ್ಯ ರಸ್ತೆಯಲ್ಲಿ ಪಟ್ಟಣ ಪಂಚಾಯತ ಹತ್ತಿರದಲ್ಲಿರುವ ನಂದಿ ಬಸವಣ್ಣ ಕಟ್ಟೆಯವರೆಗೆ ಎಳೆದು, ನಂತರ ಬೆಳಗ್ಗೆ 9 ಗಂಟೆಗೆ ರಥವನ್ನು ಹಿಂತಿರುಗಿ ಎಳೆದು ತಂದು ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಸಾವಿರಾರು ಭಕ್ತಾದಿಗಳು ಹೊದಿಕೆಯೊಂದಿಗೆ ಪೂಜೆ ನೆರವೆರಿಸಿ ಹಣ್ಣುಕಾಯಿ, ಈಡುಗಾಯಿ ಅರ್ಪಿಸಿದರು. ಮುಖ್ಯ ಬೀದಿಯಲ್ಲಿ ಹಲವರು ರಥಕ್ಕೆ ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ಸದ್ಭಕ್ತರು ರಥಕ್ಕೆ ಉತ್ತತ್ತಿ, ಕಲ್ಲು ಸಕ್ಕರೆ, ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಗಮನ ಸೆಳೆದ ಸಾಂಸ್ಕೃತಿಕ ಮೇಳ: ಹುಮನಾಬಾದ ವೀರಗಾಸೆ ತಂಡದ ವೇಷಧಾರಿಗಳು ಕಹಳೆ ವೀರಗಾಸೆಯ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಸಾವಿರಾರು ಯುವಕರು ವಾದ್ಯ ವೃಂದಕ್ಕೆ ನರ್ತನ ಮಾಡುತ್ತ ಸಂತೋಷ ಪಡೆದರು. ರಥೋತ್ಸವದ ಅಂಗವಾಗಿ ಪಟ್ಟಣದ ಮುಖ್ಯ ಬೀದಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಮರೇಶ್ವರ ದೇವಸ್ಥಾನದಿಂದ ಪಪಂ ಹತ್ತಿರವಿರುವ ನಂದಿಬಸವಣ್ಣ ಕಟ್ಟೆಯವರೆಗೂ ಹಲವೆಡೆ ವಿವಿಧ ಸಂಘ ಸಂಸ್ಥೆಗಳಿಂದ ಅನ್ನ ಸಂತರ್ಪಣೆ, ಹಾಲು, ಚಹಾ, ಅಂಬಲಿ ಸೇರಿದಂತೆ ನಾನಾ ರೀತಿಯ ತಂಪು ಪಾನೀಯಗಳನ್ನು ವಿತರಣೆ ಮಾಡಲಾಯಿತು. ರಥೋತ್ಸವ ವೇಳೆ ಯಾವುದೇ ಘರ್ಷಣೆ ಸಂಭವಿಸಿದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ಮಾ ಡಲಾಗಿತ್ತು. ಸ್ಥಳೀಯ ಮುಖಂಡರು ಇದಕ್ಕೆ ಸಹಕಾರ ನೀಡಿದರು. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಗಣ್ಯರು ರಥೋತ್ಸವದಲ್ಲಿ ಭಾಗಿಯಾಗಿದ್ದರು.