ಔರಾದ: ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಕರೆ ನೀಡಿದ್ದ ಔರಾದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣದ ವ್ಯಾಪಾರಿಗಳು, ಸಂಘಸಂಸ್ಥೆಯ ಮುಖಂಡರು, ಅನುದಾನ ರಹಿತ ಹಾಗೂ ಅನುದಾನಿತ ಶಾಲೆ, ಸರ್ಕಾರಿ ಶಾಲೆ ಕಾಲೇಜುಗಳಿಗೆ ರಜೆ ನೀಡಿ ಬಂದಗೆ ಬೆಂಬಲ ನೀಡಲಾಗಿತ್ತು.
ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಸೇರಿದ ದಲಿತ ಸಂಘಟನೆಯ ಮುಖಂಡರು ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ರ್ಯಾಲಿ ಮೂಲಕ ಬಸ್ ನಿಲ್ದಾಣಕ್ಕೆ ಬಂದು, ಕೇಂದ್ರ ಗೃಹ ಸಚಿವರಿಗೆ ಬರೆದ ಮನವಿ ಪತ್ರವನ್ನು ತಶೀಲ್ದಾರಗೆ ಸಲ್ಲಿಸಿದರು. ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು.
ದೇಶದಲ್ಲಿ ದಿನದಿಂದ ದಿನಕ್ಕೆ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ದೌರ್ಜನ್ಯ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಔರಾದ ಬಂದ್ ಮೂಲಕ ಹೋರಾಟ ಅನಿವಾರ್ಯವಾಗದೆ ಎಂದು ಶಿವುಕುಮಾರ ಕಾಂಬಳೆ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಮಹಾರಾಷ್ಟ್ರದ ಭೀಮಾ ಕೋರೆಗಾಂವನಲ್ಲಿ ನಡೆದಿರುವ ದಲಿತರ ಮೇಲಿನ ದೌರ್ಜನ್ಯ ಹಾಗೂ ವಿಜಯಪುರದ ಬಾಲಕಿ ಮೇಲೆ ನಡೆದಿರುವ ಅತ್ಯಾಚಾದ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸುನೀಲ ಮೀತ್ರಾ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ದೇಶದಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರ ಮೇಲೆ ಅನ್ಯಾಯ, ಅಕ್ರಮಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಂಜು ಲಾಧಾ ಮಾತನಾಡಿ, ಶಾಸಕ ಪ್ರಭು ಚವ್ಹಾಣ ದಲಿತರಿಗಾಗಿ ಸರ್ಕಾರ ಜಾರಿಗೋಳಿಸಿದ ಪ್ರತಿಯೊಂದು ಯೋಜನೆಗಳನ್ನು ಲಂಬಾಣಿ ಸಮುದಾಯಕ್ಕೆ ನೀಡಿ ದಲಿತ ವಿರೋಧಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಂಚಾರಕ್ಕೆ ಪರದಾಟ: ಔರಾದ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಿಂದ ಬೇರೆ ಗ್ರಾಮಕ್ಕೆ ಹಾಗೂ ಬೇರೆ ಗ್ರಾಮದಿಂದ ಪಟ್ಟಣಕ್ಕೆ ಬರುವ ಪ್ರಯಾಣಿಕರು ಸಾರಿಗೆ ವ್ಯವಸ್ಥೆ ಇಲ್ಲದೇ ಮಧ್ಯಾಹ್ನ 2ಗಂಟೆ ತನಕ ಪರದಾಡಬೇಕಾಯಿತು. ಬಾಬುರಾವ್ ತಾರೆ, ದಯಾಸಾಗರ ಭಂಡೆ, ಪ್ರಕಾಶ ಭಂಗಾರೆ, ಹಣಮಂತ ಸೂರ್ಯವಂಶಿ, ಮಹೇಶ ವಾಘಮಾರೆ, ಸಂಜುಕುಮಾರ ಯನಗುಂದಾ, ಝೆರೆಪ್ಪ ವರ್ಮಾ, ಸ್ವಾಮಿದಾಸ ಮುದಾಳೆ, ತುಕರಾಮ ಸಾವಂತ, ಸ್ವಾಮಿದಾಸ ಮೇಘಾ, ಪಂಡರಿ ಕಸ್ತೂರೆ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಂದಅ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಾಗೊಳ್ಳಲಾಗಿತ್ತು.