Advertisement

ಔರಾದ್ಕರ್‌ ಸಮಿತಿ ವರದಿ ಜಾರಿಗೆ ಸಿದ್ಧ

06:29 AM Feb 26, 2019 | Team Udayavani |

ಬೆಂಗಳೂರು: ಪೊಲೀಸರ ವೇತನ ಪರಿಷ್ಕರಣೆ ಕುರಿತು ಸದ್ಯದಲ್ಲೇ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಮತ್ತೂಂದು ಸಭೆ ಕರೆದು “ಔರಾದ್ಕರ್‌ ಸಮಿತಿ ವರದಿ’ ಜಾರಿ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಸೋಮವಾರ ಪೊಲೀಸ್‌ ಪ್ರಧಾನ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Advertisement

“ಪೊಲೀಸ್‌ ಸಿಬ್ಬಂದಿಯ ಪ್ರಮುಖ ಬೇಡಿಕೆಯಾದ  “ಔರಾದ್ಕರ್‌ ಸಮಿತಿ ವರದಿ’ ಜಾರಿ ತರುವ ಕುರಿತು ಸರ್ಕಾರ ಸ್ಪಷ್ಟ ನಿಲುವು ಹೊಂದಿದ್ದು, ಈ ನಿಟ್ಟಿನಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಲಾಗುವುದು. ಇಲಾಖೆಯ ಕೆಳ ಹಂತದ ಸಿಬ್ಬಂದಿ ಸಮಸ್ಯೆ, ಇಲಾಖೆಯ ಲೋಪದೋಷಗಳನ್ನು ಸರಿಪಡಿಸುವ ಬಗ್ಗೆಯೂ ತೀರ್ಮಾನಿಸಲಾಗುವುದು. ಗೃಹ ಸಚಿವರು ಕೂಡ ಈಗಾಗಲೇ ಈ ವಿಚಾರ ಕುರಿತು ಪೊಲೀಸ್‌ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ ಎಂದು ಹೇಳಿದರು.

ಮೂಲಸೌಕರ್ಯಗಳನ್ನು ಕಲ್ಪಿಸಲು ಆರ್ಥಿಕ ನೆರವು ನೀಡುವಂತೆ ಪೊಲೀಸ್‌ ಅಧಿಕಾರಿಗಳು ಕೋರಿದ್ದಾರೆ. ಈ ನಿಟ್ಟಿನಲ್ಲಿ ಇಲಾಖೆಯಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ಕೊಡದೆ ಕ್ರಮ ವಹಿಸಲಾಗುವುದು. ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳ ಮೇಲೆ ದಬ್ಟಾಳಿಕೆ ಮಾಡದೆ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.

ಸೈಬರ್‌ ಕ್ರೈಂ ತಡೆಗೆ ಹೊಸ ನಿಯಮ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವ್ಯಕ್ತಿಗಳು ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕುತ್ತ ಸಮಾಜದ ಶಾಂತಿ ಕದಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾದ ಅಗತ್ಯವಿದ್ದು, ಈ ಹಿನ್ನೆಲೆಯೆಲ್ಲಿ ಸೈಬರ್‌ ಕ್ರೈಂ ತಡೆಗೆ ಹೊಸ ನಿಯಮ ರೂಪಿಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸೂಚಿಸಲಾಗಿದೆ.

ಈ ಮೂಲಕ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುವುದು, ಅವಹೇಳನಕಾರಿ ಹೇಳಿಕೆ, ಕೋಮುಗಲಭೆ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು. ಹಾಗೆಯೇ ಬೆಂಗಳೂರಿನ ಶಾಲಾ-ಕಾಲೇಜುಗಳ ಬಳಿ ಮಾದಕ ವಸ್ತು ಮಾರಾಟ ಸಂಬಂಧಿಸಿದಂತೆ ಸಂಪೂರ್ಣ ತಡೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

Advertisement

ಸಹಾಯ ಕೇಂದ್ರ ಮೇಲ್ದರ್ಜೆಗೆ: ಸಾರ್ವಜನಿಕರ ಉಪಯೋಗಕ್ಕಾಗಿ ಪೊಲೀಸ್‌ ಠಾಣೆಗಳಲ್ಲಿ ತೆರೆದಿರುವ ಸಹಾಯ ಕೇಂದ್ರ(ಹೆಲ್ಪ್ ಡೆಸ್ಕ್)ಗಳನ್ನು ಮೇಲ್ದರ್ಜೆಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ಸಾರ್ವಜನಿಕರು ನಿರ್ಭಯವಾಗಿ ಠಾಣೆಗಳಿಗೆ ತೆರಳಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ಕೆಲ ವರ್ಷಗಳಿಂದ ಕರಾವಳಿ ಭಾಗದಲ್ಲಿ ಪ್ರತಿನಿತ್ಯ ಗಲಾಟೆ, ಕೋಮುಗಲಭೆಗಳಂತಹ ಅಹಿತಕರ ಘಟನೆಗಳು ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ರಚನೆಯಾದ ಬಳಿಕ ಹಿರಿಯ ಪೊಲೀಸರಿಗೆ ಕೆಲ ಸಲಹೆ, ಸೂಚನೆಗಳನ್ನು ನೀಡಲಾಗಿತ್ತು. ಅದರಂತೆ ಪೊಲೀಸರು ಉತ್ತಮ ಕೆಲಸ ಮಾಡಿದ್ದು, ಕಳೆದ 10 ತಿಂಗಳಿಂದ ಸಂಪೂರ್ಣವಾಗಿ ಗಲಭೆ ತಡೆಗಟ್ಟುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಕಾನೂನು ಸುವ್ಯವಸ್ಥೆ ಕಾಪಾಡಿ: ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. ಈ ಸಂಬಂಧ ಕೆಲಸ ಸಲಹೆ ಸೂಚನೆಗಳನ್ನು ಪೊಲೀಸರಿಗೆ ಕೊಡಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್‌, ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಡಾ ರಜನೀಶ್‌ ಗೋಯಲ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಪೊಲೀಸ್‌ ಮಹಾನಿರ್ದೇಶಕ ಎಂ.ಎನ್‌.ರೆಡ್ಡಿ, ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌, ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ ಎಸ್‌. ಪರಶಿವಮೂರ್ತಿ ಹಾಗೂ ಇತರೆ ಐಪಿಎಸ್‌ ಅಧಿಕಾರಿಗಳು ಇದ್ದರು.

ರವಿ ಪೂಜಾರಿ ಹಸ್ತಾಂತರ ಪ್ರಕ್ರಿಯೆ ಜಾರಿ: ಭೂಗತ ಪಾತಕಿ ರವಿ ಪೂಜಾರಿಯನ್ನು ಆಫ್ರಿಕಾದಲ್ಲಿ ಬಂಧಿಸಲಾಗಿದ್ದು, ಆತನನ್ನು ರಾಜ್ಯಕ್ಕೆ ಕರೆ ತರಲು ಕೆಲವೊಂದು ಕಾನೂನು ಪ್ರಕ್ರಿಯೆಗಳನ್ನು ನಡೆಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ರಾಜ್ಯದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಏರ್‌ ಶೋ ವಿಚಾರದಲ್ಲಿ ರಾಜಕೀಯವಿಲ್ಲ: ಏರ್‌ ಶೋ ಬೆಂಕಿ ಅವಘಡಕ್ಕೆ ಸರ್ಕಾರವೇ ಕಾರಣ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ, ಏರ್‌ ಶೋ ವಿಚಾರದಲ್ಲಿ ರಾಜಕೀಯ ಬೆರೆಸಲು ಸಾಧ್ಯವಿಲ್ಲ. ಘಟನೆ ಬಗ್ಗೆ ಕೇಂದ್ರ ರಕ್ಷಣಾ ಸಚಿವರು, ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಜತೆ ಗೃಹ ಕಚೇರಿ ಕೃಷ್ಣದಲ್ಲಿ ಚರ್ಚೆ ನಡೆಸಲಾಗಿದೆ.

ಈ ವೇಳೆ ಕೇಂದ್ರ ಅಧಿಕಾರಿಗಳೇ, ರಾಜ್ಯ ಪೊಲೀಸರು ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದೊಂದಿಗೆ ಘರ್ಷಣೆ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ಹೇಳಿದರು.ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next