ಬೆಂಗಳೂರು: ರಾಜ್ಯದ 60 ಸಾವಿರ ಪೊಲೀಸರಿಗೆ ಈ ಬಾರಿಯ ಬಜೆಟ್‌ನಲ್ಲೂ ಕೇವಲ “ವಿಶೇಷ ಭತ್ತೆ’ಯ ಉಡುಗೊರೆ ಮಾತ್ರ ಸಿಗಲಿದೆಯೇ? ಹೌದು ಎನ್ನುತ್ತಿವೆ ಮೂಲಗಳು. ರಾಜ್ಯದ ಪೊಲೀಸರು ಫೆ. 8ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ “ಔರಾದ್ಕರ್ ಸಮಿತಿ’ಯ ವೇತನ ಹೆಚ್ಚಳ ಶಿಫಾರಸು ಜಾರಿಗೆ ಬರಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ವೇತನ ಹೆಚ್ಚಳದ ಬದಲಿಗೆ 500ರಿಂದ 700 ರೂ. ವಿಶೇಷ ಭತ್ತೆಯ ಮೂಲಕ “ಮೂಗಿಗೆ ತುಪ್ಪ ಸವರುವ’ ಕಾರ್ಯವನ್ನು ಗೃಹ ಇಲಾಖೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಹಿರಿಯ ಐಪಿಎಸ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು, ಹಣಕಾಸು ಕೊರತೆ ಹಿನ್ನೆಲೆಯಲ್ಲಿ ಸಮಿ ತಿಯ ಎಲ್ಲ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದಿಲ್ಲ. ಬದಲಿಗೆ ಪ್ರಸ್ತುತ ನೀಡು ತ್ತಿರುವ ವಿಶೇಷ ಭತ್ತೆಯನ್ನೇ ಹೆಚ್ಚಿಸಬಹುದು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಡಾ| ಜಿ. ಪರ ಮೇಶ್ವರ್ ಗೃಹ ಸಚಿವ ರಾಗಿದ್ದ ಸಂದರ್ಭದಲ್ಲಿ ಪೊಲೀಸರ ವೇತನ ಪರಿಷ್ಕರಣೆ ಮಾಡಿಯೇ ತೀರುತ್ತೇವೆ ಎಂದು ಹತ್ತಾರು ಬಾರಿ ಭರವಸೆ ನೀಡಿದ್ದರು. ಪೊಲೀಸ್ ಸಿಬಂದಿಗೆ ವೇತನ ಹೆಚ್ಚಳ ಮಾಡಿದರೆ, ಸರಕಾರದ ಅಧೀನದಲ್ಲಿರುವ ಖಾಕಿ ಸಮವಸ್ತ್ರ ಧರಿಸುವ ಎಲ್ಲ ಇತರ ವಿಭಾಗದ ಸಿಬಂದಿಯೂ ವೇತನ ಹೆಚ್ಚಳಕ್ಕೆ ಒತ್ತಡ ಹೇರಲಿದ್ದಾರೆ ಎಂದು ಭಾವಿಸಿ ಹಣಕಾಸು ಸಚಿವಾಲಯ ಇದಕ್ಕೆ ನಿರಾಕರಿಸಿದೆ ಎನ್ನಲಾಗಿದೆ.
ಈ ಬಾರಿ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಔರಾದ್ಕರ್ ವರದಿ ಜಾರಿ ಮಾಡಲಾಗುವುದು. ಪೊಲೀಸರ ಶ್ರೇಯೋಭಿವೃದ್ಧಿ ಕುರಿತು ಔರಾದ್ಕರ್ ಸಮಿತಿ ಸಲ್ಲಿಸಿರುವ ವರದಿ ಕುರಿತು ಈಗಾಗಲೇ ಸಿಎಂ ಜತೆ ಚರ್ಚೆ ಮಾಡಿದ್ದೇನೆ.
– ಎಂ.ಬಿ.ಪಾಟೀಲ್, ಗೃಹ ಸಚಿವ
ರಾಜ್ಯ ಪೊಲೀಸ್ ಸಿಬಂದಿ ವೇತನ ಪರಿಷ್ಕರಣೆ ಬಗ್ಗೆ ಐಪಿಎಸ್ ಅಧಿಕಾರಿ ರಾಘವೇಂದ್ರ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ವರದಿಯನ್ನು ಪರಿಶೀಲಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ನಿರ್ಧಾರ ಸರಕಾರ ತೆಗೆದುಕೊಳ್ಳಬೇಕು.
-ಡಾ| ಎಸ್. ಪರಶಿವಮೂರ್ತಿ,
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ಆಡಳಿತ ವಿಭಾಗ
12 ರಾಜ್ಯಗಳ ಪೊಲೀಸ್ ಸಿಬಂದಿಯ ವೇತನ ವಿವರಗಳ ಬಗ್ಗೆ ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಅದನ್ನು ಅನುಷ್ಠಾನಕ್ಕೆ ತರುವ ವಿಚಾರ ಸರಕಾರದ ನಿರ್ಧಾರಕ್ಕೆ ಬಿಡಲಾಗಿದೆ.
– ರಾಘವೇಂದ್ರ ಔರಾದ್ಕರ್,
ಹೆಚ್ಚುವರಿ ಪೊಲೀಸ್ ಮಹಾನಿರ್ದೆಶಕ, ನೇಮಕಾತಿ ವಿಭಾಗ