Advertisement

ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಶುರು

11:37 AM May 20, 2019 | Naveen |

ಔರಾದ: ಪಟ್ಟಣ ಪಂಚಾಯತ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿವಿಧ ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳ ನಡುವೆ ಆರೋಪ ಪ್ರತ್ಯಾರೋಪ, ವಾಕ್‌ಸಮರ ಜೋರಾಗಿಯೇ ನಡೆದಿದೆ.

Advertisement

20 ವಾರ್ಡ್‌ಗಳಿರುವ ಪಟ್ಟಣ ಪಂಚಾಯತ ಚುನಾವಣೆ ಕಣದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಬಿಎಸ್ಪಿ ಹಾಗೂ ಪಕ್ಷೇತರರು ಸೇರಿ ಒಟ್ಟು 70 ಅಭ್ಯರ್ಥಿಗಳು ಇದ್ದಾರೆ. ಈ ಬಾರಿ ಕಣದಲ್ಲಿ ಯುವ ಉತ್ಸಾಹಿಗಳು, ವಿದ್ಯಾವಂತರು ಹಾಗೂ ಪಪಂ ಮಾಜಿ ಅಧ್ಯಕ್ಷ ಸುನೀಲಕುಮಾರ ದೇಶಮುಖ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಧೋಂಡಿಬಾ ನರೋಟೆ, ಪಪಂ ಮಾಜಿ ಅಧ್ಯಕ್ಷೆ ಸರುಬಾಯಿ ಘೂಳೆ ಸೇರಿದಂತೆ ಘಟಾನುಘಟಿ ಅಭ್ಯರ್ಥಿಗಳು ಇದ್ದಾರೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರು ಉತ್ತಮ ವ್ಯಕ್ತಿಗಳನ್ನು ತಮ್ಮ ಪಕ್ಷದ ಅಭ್ಯರ್ಥಿಗಳಾಗಿ ಆಯ್ಕೆ ಮಾಡಿ ಕಣಕ್ಕಿಳಿಸಿದ್ದಾರೆ. ಬಿಜೆಪಿ ಶಾಸಕ ಪ್ರಭು ಚವ್ಹಾಣ ಆಡಳಿದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳು ಹಾಗೂ ಜಿಪಂ ಮಾಜಿ ಸದಸ್ಯ ರಮೇಶ್‌ ದೇವಕತೆ ಮುಂದಾಳತ್ವದಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯ ಸಿಗುತ್ತದೆ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷ ವಿಳಾಸವಿಲ್ಲದಿರುವ ಪತ್ರದಂತೆ ಆದಾಗ, ಬೀದರ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಅದಕ್ಕೆ ಜೀವ ತುಂಬಿ ತಮ್ಮ ಆಡಳಿತಾವಧಿಯಲ್ಲಿ ತಾಲೂಕಿನ ಅಭಿವೃದ್ಧಿ ಮಾಡಿ, ಇಲ್ಲಿನ ಸಮಸ್ಯೆಗಳನ್ನು ಬಗೆ ಹರಿಸುವ ಮೂಲಕ ಜನರ ಮನೆ ಮಾತಾಗಿದ್ದಾರೆ. ವಿಜಯಸಿಂಗ್‌ ಹಾಗೂ ರಾಮ ನರೋಟೆ ಮುಂದಾಳತ್ವದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಮುಖಂಡರಿದ್ದಾರೆ.

ಆರೋಪ ಪ್ರತ್ಯಾರೋಪಗಳು: ಕಣದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಪೈಪೋಟಿಯಿದೆ. ಎರಡು ವಾರ್ಡ್‌ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಅಬ್ಬರ ಜೋರಾಗಿದೆ. ಆದರೆ ವೈಯಕ್ತಿ ಆರೋಪಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿಂದೆ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಸೋಲುಂಡ ಮೂವರು ಅಭ್ಯರ್ಥಿಗಳು ಕೂಡ ಚುನಾವಣೆ ಕಣದಲ್ಲಿದ್ದು, ಹೇಗಾದರೂ ಮಾಡಿ ಈ ಬಾರಿಯಾದರೂ ಗೆಲುವು ಸಾಧಿಸಿ ಜನರ ಸೇವೆ ಮಾಡಲು ಮುಂದಾಗಬೇಕು ಎನ್ನುವ ತವಕದಲ್ಲಿದ್ದಾರೆ.

ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಪ್ರತಿಯೊಬ್ಬರು ಜನರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡುವುದರ ಜೊತೆಗೆ ಶಾಸ್ವತ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಚರಂಡಿ ಕೆಲಸ ಹಾಗೂ ಉದ್ಘಾಟನೆ ಕಾಣದ ಇಂದಿರಾ ಕ್ಯಾಂಟಿನ್‌ ಉದ್ಘಾಟನೆ, ಪಟ್ಟಣದ ಸಮಗ್ರ ಅಭಿವೃದ್ಧಿಯೇ ನಮ್ಮ ಪರಮ ಗುರಿಯಾಗಿದೆ ಎಂದು ಜನರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

Advertisement

ಜಾತಿ ಲೆಕ್ಕಚಾರ ಆರಂಭ: ಪಟ್ಟಣದ ಪ್ರತಿಯೊಂದು ವಾರ್ಡ್‌ಗಳಲ್ಲಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ಮತದಾರರ ಪಟ್ಟಿಗಳನ್ನು ಹಿಡಿದುಕೊಂಡು ತಮ್ಮ ಬೆಂಬಲಿಗರೊಂದಿಗೆ ಕುಳಿತು, ನಮ್ಮ ಸಮುದಾಯದ ಮತಗಳು ನಮಗೆ ಸಿಗಬೇಕು. ನಮ್ಮ ಬಗ್ಗೆ ಮನಸ್ತಾಪ ಇದ್ದರೆ ಅಂಥವರ ಮನ ಪರಿವರ್ತನೆ ಮಾಡುವಂತೆ ರಾಜಕೀಯ ಆಟ ಆಡುತ್ತಿದ್ದಾರೆ. ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಹೋದ ಕೂಲಿ ಕಾರ್ಮಿಕರನ್ನು ಚುನಾವಣೆ ದಿನದಂದು ಕರೆತಂದು ಅವರ ಮತಗಳನ್ನು ತಮಗೆ ಹಾಕಿಸುವಂತೆ ಹಿಂಬಾಲಕರಿಗೆ ಜವಾಬ್ದಾರಿ ವಹಿಸುತ್ತಿದ್ದಾರೆ. ಇನ್ನುಳಿದ ಸಮುದಾಯದ ಮತದಾರರ ಮನ ಪರಿವರ್ತನೆ ಮಾಡಲು ಅವರ ಸಮುದಾಯದ ಮುಖಂಡರ ಮನೆ ಮನೆಗೆ ಹೋಗಿ ಮತ ಸೆಳೆಯುವ ಪ್ರಯತ್ನಗಳು ಜೋರಾಗಿಯೇ ನಡೆದಿವೆ.

ಕೆಲವು ಅಭ್ಯರ್ಥಿಗಳು ಮಾತ್ರ ಜಾತಿ ಲೆಕ್ಕಚಾರದಲ್ಲಿ ಮತಗಳನ್ನು ಸೆಳೆಯಲು ತಮ್ಮ ಕಾಯಕ ಆರಂಭಿಸಿದ್ದಾರೆ. ಇನ್ನೂ ಎರಡು ಪಕ್ಷದ ಮುಖಂಡರು ಬಡಾವಣೆಗಳಲ್ಲಿ ಪ್ರಚಾರಕ್ಕೆ ಬರುವ ಕುರಿತು ಅಭ್ಯರ್ಥಿಗಳು ಈಗಾಗಲೆ ನೀಲ ನಕ್ಷೆ ಸಿದ್ಧಪಡಿಸಿ ಹಂತ ಹಂತವಾಗಿ ಮತದಾರರ ಮನ ಪರಿವರ್ತನೆ ಮಾಡಲು ಮುಂದಾಗುತ್ತಿದ್ದಾರೆ.

ಈ ಹಿಂದೆ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಬೆಂಬಲಿಗರು ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಏಳು ಸಿಟು ತಮ್ಮದಾಗಿಸಿಕೊಂಡರೆ, ಬಿಜೆಪಿ ಶಾಸಕ ಪ್ರಭು ಚವ್ಹಾಣ ಬೆಂಬಲಿಗರು ಕೂಡ ಏಳು ಸೀಟು ತಮ್ಮದಾಗಿಸಿಕೊಂಡು ಪಪಂನಲ್ಲಿ ಸಮಬಲ ಸಾಧಿಸಿದ್ದರು. ಅದರಂತೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡ ವಿಜಯಸಿಂಗ್‌, ಬಿಜೆಪಿ ಶಾಸಕ ಪ್ರಭು ಚವ್ಹಾಣ ಬೆಂಬಲಿಗರ ಮಧ್ಯೆ ಭಾರೀ ಪೈಪೋಟಿ ಇದೆ.

ಈ ಬಾರಿಯ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ವಿದ್ಯಾವಂತರು ಹೆಚ್ಚು ಸಂಖ್ಯೆಯಲ್ಲಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿರುವುದು ಸಂತೋಷದ ವಿಷಯ. ನಿಂತ ಎಲ್ಲ್ಲ ಅಭ್ಯರ್ಥಿಗೆ ಮತ ನೀಡಲು ಸಾಧ್ಯವಿಲ್ಲ. ಇವರಲ್ಲಿ ಯಾರು ಜನರ ಸಮಸ್ಯೆಗೆ ಸ್ಪಂದನೆ ಮಾಡಿ ಉತ್ತಮ ಆಡಳಿತ ನೀಡುತ್ತಾರೆ ಎಂದು ನಮಗೆ ಅನಿಸುತ್ತದೋ ಅಂಥವರಿಗೆ ಮತ ಹಾಕುತ್ತೇವೆ.
ರತಿಕಾಂತ ಸ್ವಾಮಿ, ಮತದಾರ

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next