ಔರಾದ: ಚಿಂತಾಕಿಯಲ್ಲಿ ಫೆ.24ರಂದು ನಡೆಯಬೇಕಿದ್ದ ತಾಲೂಕು ಮಟ್ಟದ 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದ್ದು, ಫೆ.24ರ ಬದಲಿಗೆ ಫೆ.28ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಗನಾಥ ಮೂಲಗೆ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಣಾಂತರಗಳಿಂದ ಸಮ್ಮೇಳನ ಮುಂದೂಡಲಾಗಿದೆ. ಸರ್ವಾಧ್ಯಕ್ಷರಾಗಿ ಯುವ ಸಾಹಿತಿ ಚನ್ನಬಸವ ಹೇಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. ಸಮ್ಮೇಳನ ನಿಮಿತ್ತ ರಕ್ತದಾನ ಶಿಬಿರ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾಗೂ ಉತ್ತಮ ಕೊಡುಗೆ ನೀಡಿದ ಮಹನೀಯರಿಗೆ ವಿಶೇಷ ಸನ್ಮಾನ ಮಾಡಲಾಗುತ್ತದೆ ಎಂದು
ಮಾಹಿತಿ ನೀಡಿದರು.
ಶಾಸಕ ಪ್ರಭು ಚವ್ಹಾಣ ಮಾತನಾಡಿ, ಚಿಂತಾಕಿಯಲ್ಲಿ ಐದು ಭಾಷೆಯ ಜನರು ಇರುವ ಹಿನ್ನೆಲೆಯಲ್ಲಿ ಸಮ್ಮೇಳನ ವಿನೂತ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಹಿಂದೆ ತಾಲೂಕಿನಲ್ಲಿ ನಡೆದ ಎಲ್ಲಾ ಸಮ್ಮೇಳನಕ್ಕಿಂತಲೂ 5ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ನಡೆಯುತ್ತದೆ. ಸಮ್ಮೇಳನಕ್ಕೆ ಸರ್ವ ರೀತಿಯ ಸಹಕಾರ ನೀಡಲು ಸಿದ್ದನಾಗಿದ್ದೇನೆ. ಕಸಾಪ ಸೇರಿದಂತೆ ಕನ್ನಡ ಪರ ಸಂಘಟನೆಯ ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಸಮ್ಮೇಳನ ಯಶಸ್ಸುಗೊಳಿಸಲು ಸಲಹೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.
ಜಿಪಂ ಸದಸ್ಯೆ ಗೀತಾ ಚಿದ್ರಿ ಮಾತನಾಡಿ, ಸಮ್ಮೇಳನ ಯಶಸ್ಸಿಗೆ ಶಕ್ತಿ ಮೀರಿ ಕೆಲಸ ಮಾಡುವ ಮೂಲಕ ನುಡಿ ಹಬ್ಬದ ಆಚರಣೆ ಮಾಡಲಾಗುತ್ತದೆ ಎಂದರು. ಶಾಲಿವಾನ ಉದಗೀರೆ, ಬಿಎಂ ಅಮರವಾಡಿ, ಶರಣಬಸವ ಸಾವಳೆ ಇದ್ದರು.