ಔರಾದ: ಜನ್ಮದಿನ ಹೆಸರಿಗಷ್ಟೆ ಸೀಮಿತವಾಗಿದ್ದು, ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿವರ್ಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.
ಪಟ್ಟಣದ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಶಾಸಕ ಪ್ರಭು ಚವ್ಹಾಣ ಜನ್ಮದಿನ ನಿಮಿತ್ತ ಪ್ರಭು ಎಂಟರ್‌ಪ್ರೈಸ್ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
2009ರಿಂದ ತಮ್ಮ ಜನ್ಮದಿನದಂದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ಆಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಮಕ್ಕಳಿಗೆ ಇನ್ನಷ್ಟು ಉತ್ತಮ ಪಠ್ಯ ಬೋಧನೆ ಮಾಡಿ ಮಕ್ಕಳ ಪ್ರತಿಭೆ ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂದರು.
ತಮಲೂರಿನ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರಭು ಚವ್ಹಾಣ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ಅವರೂಪದ ರಾಜಕಾರಣಿಯಾಗಿದ್ದು, ಇಂಥ ಸೇವೆಯನ್ನು ನಿತ್ಯ ನಿರಂತರವಾಗಿ ಮಾಡುವ ಉತ್ಸಾಹ ಅವರಲ್ಲಿ ಮೂಡಬೇಕು. ನಾಡಿನ ಇತಿಹಾಸದಲ್ಲಿಯೇ ಶಿಕ್ಷಣ ಹಾಗೂ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಇರುವ ಶಾಸಕರು ನಮಗೆ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ. ಶಾಸಕರು ಮಾಡುವ ಉತ್ತಮ ಕೆಲಸಗಳಿಗೆ ಇಲ್ಲಿನ ಜನರ ಸಹಕಾರ ನೀಡುವುದರೊಂದಿಗೆ, ಮಕ್ಕಳು ಪರಿಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ಮೂಲಕ ಶಾಸಕರಿಗೆ ಖುಷಿ ನೀಡಬೇಕು ಎಂದರು.
ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ತಾಲೂಕು ಬಿಜೆಪಿ ಅಧ್ಯಕ್ಷ ಸತೀಶ ಪಾಟೀಲ, ಪ್ರಧಾನ ಕಾರ್ಯದರ್ಶಿ ಅಶೋಕ ಅಲ್ಮಾಜೆ, ಶಕ್ತಿ ಕೇಂದ್ರದ ಅಧ್ಯಕ್ಷ ಶರಣಬಸವ ಸಾವಳೆ, ಮುಖಂಡ ದೀಪಕ ಪಾಟೀಲ, ಬಂಡೆಪ್ಪ ಕಂಟೆ, ಪ್ರಕಾಶ ಅಲ್ಮಾಜೆ, ಶಿವಾನಂದ ವಡ್ಡೆ, ಕಾಶಿನಾಥ ಜಾಧವ, ರಮೇಶ ದೇವಕತೆ, ಡಾ|ಕಲ್ಲಪ್ಪ ಉಪ್ಪೆ, ಡಾ| ವೈಜಿನಾಥ ಬುಟ್ಟೆ, ಅರಹಂತ ಸಾವಳೆ ಹಾಗೂ ಇನ್ನಿತರರು ಇದ್ದರು.