Advertisement

ಔರಾದಲ್ಲಿ ಇನ್ನೂ ಟ್ಯಾಂಕರ್‌ ನೀರೇ ಗತಿ

10:27 AM Aug 11, 2019 | Naveen |

•ರವೀಂದ್ರ ಮುಕ್ತೇದಾರ
ಔರಾದ:
ನಾಡಿನ ಬಹುತೇಕ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಜನರ ಜೀವನ ಅಸ್ತವ್ಯಸ್ತವಾಗಿದ್ದರೆ ಔರಾದ ಹಾಗೂ ಕಮಲನಗರ‌ ತಾಲೂಕಿನಲ್ಲಿ ಮಾತ್ರ ವಾಡಿಕೆ ಮಳೆ ಇಲ್ಲದೇ ಮಳೆಗಾಲದಲ್ಲೂ ಜನರು ಟ್ಯಾಂಕರ್‌ ನೀರನ್ನು ಅವಲಂಬಿಸಿ ಬದುಕು ಸಾಗಿಸಬೇಕಾಗಿದೆ.

Advertisement

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿರಂತರ ಮಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಆ ಭಾಗದ ಜಲಮೂಲಗಳು ತುಂಬಿ ಅಪಾಯದ ಅಂಚಿನಲ್ಲಿವೆ. ಔರಾದ ತಾಲೂಕಿನ 11 ಗ್ರಾಮಗಳಿಗೆ ಹಾಗೂ ತಾಲೂಕು ಕೇಂದ್ರಲ್ಲಿ ಮಳೆ ಬಾರದಿರುವುದರಿಂದ ಕಂದಾಯ ಇಲಾಖೆ ಅಧಿಕಾರಿಗಳು ಬಡಾವಣೆಗಳಿಗೆ ನಿತ್ಯ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಹಾಗಾಗಿ ಗಡಿ ತಾಲೂಕಿನ ಜನರಿಗೆ ನೀರಿನ ಸಮಸ್ಯೆ ತಪ್ಪಿಲ್ಲ.

ಮಳೆಗಾಲ ಆರಂಭವಾಗಿ ಮೂರು ತಿಂಗಳು ಕಳೆಯುತ್ತಿದ್ದರೂ ತಾಲೂಕಿನ ಜಲಮೂಲಗಳಿಗೆ ನೀರು ಹರಿದು ಬಂದಿಲ್ಲ. ಒಂದೇ ಒಂದು ಕೆರೆ, ಬಾವಿಗೆ ನೀರು ಬಂದಿಲ್ಲ. ಹೀಗಾಗಿಯೇ ಜನರು ಮಳೆಗಾಲದಲ್ಲೂ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇದೆ.

ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಸುರಿದ ಮಳೆಯಿಂದ ಬೆಳೆಗಳಿಗೆ ಅನುಕೂಲವಾಗಿದೆ. ಆದರೆ ಜನ, ಜಾನುವಾರುಗಳಿಗೆ ಮಾತ್ರ ಕುಡಿಯುವ ನೀರಿಲ್ಲದಾಗಿದ್ದು, ಈ ವರ್ಷವೂ ಮಳೆಗಾಲ ಹೀಗಾದರೆ ಮುಂದೆ ಹೇಗೆ ಎಂಬುದು ಜನರ ಮಾತು.

ಪೂಜೆಗೆ ಸಿಗಲಿಲ್ಲ ಫಲ: ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ವಾಡಿಕೆಯಂತೆ ಮುಂಗಾರು ಮಳೆ ಬಂದಿಲ್ಲ ಎಂದು ಗಡಿ ಗ್ರಾಮದಲ್ಲಿ ಬಹತೇಕ ಜನರು ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರೂ ಕೂಡ ಫಲ ಸಿಕ್ಕಿಲ್ಲ. ಹಿಗಾಗಿಯೇ ಜಲಮೂಲಗಳು ಖಾಲಿಯಾಗೇ ಉಳಿದಿದ್ದು, ಈ ಭಾಗದ ಜನರು ಕುಡಿಯುವ ನೀರಿಗಾಗಿ ಟ್ಯಾಂಕರ್‌ ಅವಲಂಬಿಸಬೇಕಾಗಿದೆ. ತಾಲೂಕಿನ ಹನ್ನೊಂದು ಗ್ರಾಮಗಳಲ್ಲಿ ಏಳು ಟ್ಯಾಂಕರ್‌ನಿಂದ ಪ್ರತಿನಿತ್ಯ ಮೂವತ್ತೂಂದು ಟ್ರಿಪ್‌ ನೀರು ಸರಬರಾಜು ಮಾಡಲಾಗುತ್ತಿದೆ.

Advertisement

ಶೆಂಬೆಳ್ಳಿ, ಕಮಲನಗರ, ದಾಬಕಾ, ಅಕನಾಪೂರ್‌, ಕಿಶನನಾಯಕ್‌ ತಾಂಡಾ, ಹೋಳಸಮುದ್ರ, ವಡಗಾಂವ(ಡಿ), ವಡನಬಾಗ್‌, ವಡಗಾಂವ ತಾಂಡ, ಹಸಿಕೆರಿ, ಗೌಡಗಾಂವ ಗ್ರಾಮದ ವ್ಯಾಪ್ತಿಯ ಕಿಶನ ನಾಯಕ್‌ ಮತ್ತು ಭವಾನಿ ನಗರ ತಾಂಡಾದಲ್ಲಿ ಟ್ಯಾಂಕರ್‌ ನೀರು ಸರಬರಾಜು ಮಾಡಲಾಗುತ್ತಿದೆ. ಔರಾದ ಪಟ್ಟಣದಲ್ಲಿ ಪ್ರತಿನಿತ್ಯ ಏಳು ಟ್ಯಾಂಕರ್‌ನಿಂದ ಮೂರು ಟ್ರೀಪ್‌ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ತಾಲೂಕಿನ ಜನರು ಮೂರು ವರ್ಷಗಳಿಂದ ಭೀಕರ ಬರದಲ್ಲಿ ಕಷ್ಟದ ಜೀವನ ಸಾಗಿಸುತ್ತಿದ್ದು, ಈ ವರ್ಷವಾದರೂ ತಾಲೂಕಿನಲ್ಲಿ ಉತ್ತಮ ಮಳೆ ಬಂದು ಒಳ್ಳೆಯ ಜೀವನ ನಡೆಸಬಹುದು ಅಂದುಕೊಂಡಿದ್ದರೆ, ಮಳೆಯಿಲ್ಲದೆ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ.

ಮೂರು ವರ್ಷಗಳಿಂದ ಭೀಕರ ಬರದಲ್ಲಿ ಜೀವನ ಸಾಗಿಸಿದ್ದೇವೆ. ಈ ವರ್ಷವಾದರೂ ಉತ್ತಮ ಜೀವನ ಕಾಣಬಹುದು ಅಂದುಕೊಂಡಿದ್ದೆವು. ಆದರೆ ಈ ವರ್ಷವೂ ಸರಿಯಾಗಿ ಮಳೆ ಬರುವ ಲಕ್ಷಣವಿಲ್ಲ. ನಮ್ಮ ರೈತರ ಹಣೆ ಬರಹವೇ ಇಷ್ಟು ಎನ್ನುವಂತಾಗಿದೆ.
.ಗೋವಿಂದ ಇಂಗಳೆ, ರೈತ

ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ವಾಡಿಕೆ ಮಳೆಯಾಗಿಲ್ಲ. ಇದರಿಂದ ತಾಲೂಕಿನ ಜಲಮೂಲಗಳಿಗೆ ಹನಿ ನೀರು ಬಂದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ತಾಲೂಕಿನ 11 ಗ್ರಾಮ ಹಾಗೂ ಪಟ್ಟಣಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಕೊಳವೆ ಬಾವಿಗಳಾದರೂ ನಮಗೆ ಎಷ್ಟು ದಿನ ಸಹಕಾರ ನೀಡುತ್ತವೆ ಎನ್ನುವುದು ತಿಳಿಸಿದಿಲ್ಲ. ಪ್ರಕೃತಿಯ ಕೋಪಕ್ಕೆ ನಾವು ಅಸಹಾಕರಾಗಿದ್ದೇವೆ.
ಎಂ. ಚಂದ್ರಶೇಖರ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next