Advertisement

ಸಂತಪೂರ ತಾಲೂಕು ಕೇಂದ್ರಕ್ಕೆ ಒತ್ತಾಯ

11:46 AM Sep 15, 2019 | Naveen |

ರವೀಂದ್ರ ಮುಕ್ತೇದಾರ
ಔರಾದ:
ಔರಾದ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡುವುದಕ್ಕಿಂತ ಸರ್ಕಾರ ಸಂತಪೂರ ಪಟ್ಟಣವನ್ನು ತಾಲೂಕು ಕೇಂದ್ರವಾಗಿಸಬೇಕು ಎಂದು ಜನಪ್ರತಿನಿಧಿಗಳು ಈ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

Advertisement

ಚುನಾವಣೆ ಸಮಯದಲ್ಲಿ ಔರಾದ ತಾಲೂಕಿನಿಂದ ಗೆಲುವು ಸಾಧಿಸಿ ತಾಲೂಕಿನ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರವಾಗಿದೆ ಎಂದು ಜನರಿಗೆ ಹೇಳಿ, ಸಂತಪೂರ ತಾಲೂಕು ರಚನೆ ಮಾಡುವಂತೆ 2008ರಲ್ಲಿಯೇ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತದಲ್ಲಿ ಸಭೆ ನಡೆಸಿ ಸರ್ಕಾರಕ್ಕೆ ನಡುವಳಿ ಪತ್ರ ಸಹ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಔರಾದ ತಾಲೂಕಿನ ಮೀಸಲು ಕ್ಷೇತ್ರದ ಮೊದಲ ಶಾಸಕ ಹಾಗೂ ಹಾಲಿ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ 22-9-2008ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಅದರಂತೆ ಅಂದಿನ ಆರು ಜಿಪಂ ಸದಸ್ಯರ ಪೈಕಿ ಐದು ಜಿಪಂ ಸದಸ್ಯರು ಕೂಡ ಪತ್ರ ನೀಡಿದ್ದಾರೆ. ರಾಜಶೇಖರ ನಾಗಮೂರ್ತಿ ವಡಗಾಂವ ಜಿಪಂ ಸದಸ್ಯೆ, ಮೀನಾಕ್ಷಿ ಸಂಗ್ರಾಮ ಠಾಣಾಕುಶನೂರ ಜಿಪಂ ಸದಸ್ಯೆ, ನಂದಿನಿ ಚಂದ್ರಶೇಖರ್‌ (ಚಿಂತಾಕಿ) ಜಿಪಂ ಕ್ಷೇತ್ರ, ರಮೇಶ ದೇವತೆ ಸಂತಪೂರ ಜಿಪಂ ಕ್ಷೇತ್ರದ ಸದಸ್ಯರು ಹಾಗೂ ಒಬ್ಬರು ತಾಪಂ ಸದಸ್ಯರು ಕೂಡ ಪತ್ರ ನೀಡಿದ್ದಾರೆ. ಅಂದಿನ ತಾಲೂಕು ಪಂಚಾಯತ ಅಧ್ಯಕ್ಷೆ ಶೀಲಾವತಿ ಶಿವಶರಣರಪ್ಪ ವಲ್ಲೆಪೂರೆ ಅವರು 17-9-2008ರಲ್ಲಿ ಪತ್ರ ನೀಡಿದ್ದಾರೆ. ನೀಲಮ್ಮ ಶಿವರುದ್ರಪ್ಪ ತಾಪಂ ಸದಸ್ಯೆ, ಪಾಂಡುರಂಗ ಶರಣಪ್ಪ, ಶರಣಪ್ಪ ಭೀಮರಾವ್‌, ಕಲ್ಲಪ್ಪ ಹುಲ್ಲೆಪ್ಪ, ರಾಮಪ್ಪ ಕಲ್ಲಪ್ಪ, ಸಂಜೀವ ವೆಂಕಟರಾವ್‌, ವಿಜಯಕುಮಾರ ಬಾಬಣೆ ಹಾಗೂ ತಾಲೂಕಿನ 38 ಗ್ರಾಪಂಗಳ ಪೈಕಿ ನಾಗಮಾರಪಳ್ಳಿ, ಸಂತಪೂರ,ಧೂಪತಮಗಾಂವ, ಚಿಂತಾಕಿ, ಹೆಡ್ಗಾಪೂರ, ನಾಗಮಾರಪಳ್ಳಿ, ಶೆಂಬೆಳ್ಳಿ, ಚಿಕಲಿ, ಜೋಜನಾ, ಖೇಡ್‌, ಬಳತ್‌, ಲಾಧಾ, ತೋರಣಾ ಸೇರಿದಂತೆ ಒಟ್ಟು 12 ಗ್ರಾಪಂ ಸದಸ್ಯರು, ಆಡಳಿತ ಮಂಡಳಿ ಸದಸ್ಯರು ಪಂಚಾಯತದಲ್ಲಿ ಸಭೆ ನಡೆಸಿ ಸರ್ವ ಸದಸ್ಯರ ಒಪ್ಪಂದದ ಪತ್ರವನ್ನು ಕೂಡ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದಾರೆ

ನಿಲ್ಲದ ಶೀತಲ ಸಮರ: ಔರಾದ ತಾಲೂಕು ಕೇಂದ್ರವಾಗಿದೆ ಎಂದು ತಾಲೂಕಿನ ನಿವಾಸಿಗಳು ಖುಷಿಯಲ್ಲಿದ್ದರೆ ಸಂತಪೂರ ತಾಲೂಕು ಹೋರಾಟ ಸಮಿತಿ ಸದಸ್ಯರು ನಮ್ಮ ತಾಲೂಕನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ಹೋರಾಟವನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ.

ಜನರಿಗೆ ತಪ್ಪದ ಸಮಸ್ಯೆ: ತಂದೆ-ತಾಯಿ ಜಗಳದಲ್ಲಿ ಕೂಸು ಬಡುವಾಯ್ತು ಎನ್ನುವಂತೆ ಸಂತಪೂರ ಹಾಗೂ ಔರಾದ ತಾಲೂಕು ಕೇಂದ್ರ ರಚನೆಗಾಗಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಔರಾದ ತಾಲೂಕು ಕೇಂದ್ರವಾದರೂ ಕೆಲ ಇಲಾಖೆಯ ಸೌಕರ್ಯ ಪಡೆದುಕೊಳ್ಳಲು ಜಿಲ್ಲಾ ಕೇಂದ್ರಕ್ಕೆ ಹೋಗುವಂತಹ ಅನಿವಾರ್ಯತೆ ಇದೆ.

Advertisement

ಸರ್ಕಾರ ನೀರಾವರಿ ಇಲಾಖೆಯ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನವನ್ನು ಪ್ರತಿವರ್ಷ ಇಲಾಖೆಗೆ ನೀಡುತ್ತಿದೆ. ಜನರಿಗೆ ಜಿಲ್ಲಾ ಕೇಂದ್ರದಲ್ಲಿರುವ ಕಚೇರಿಯ ಬಗ್ಗೆ ಇಂದಿಗೂ ಮಾಹಿತಿ ಇಲ್ಲ. ಅಂದ ಮೇಲೆ ಅವರು ಇಲಾಖೆಯ ಯೋಜನೆಗಳ ಲಾಭ ಪಡೆದುಕೊಳ್ಳುವುದು ಯಾವಾಗ ಎನುವ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುತ್ತಿವೆ.

ಔರಾದ ತಾಲೂಕು ಕೇಂದ್ರವಾಗಿಸಿ ಸರ್ಕಾರ ಆದೇಶ ಮಾಡಿದೆ. ಯಾವುದೇ ಕಾರಣಕ್ಕೂ ತಾಲೂಕು ಬದಲಾಗುವುದಿಲ್ಲ. ಎರಡೂ ಸಮಿತಿ ಸದಸ್ಯರು ಒಂದು ಕಡೆ ಕುಳಿತುಕೊಂಡು ಜಿಲ್ಲಾ ಕೇಂದ್ರದಲ್ಲಿರುವ ತಾಲೂಕು ಮಟ್ಟದ ಕಚೇರಿಗಳನ್ನು ತಾಲೂಕಿಗೆ ತರಲು ಮುಂದಾಗಬೇಕು ಎನ್ನುವುದು ಕಾನೂನು ತಜ್ಞರ ಮಾತು.

ಸಂತಪೂರ, ಔರಾದ ತಾಲೂಕು ಹೋರಾಟ ಸಮಿತಿ ಸದಸ್ಯರಿಗೆ ಮಾನವೀಯತೆ ಇದ್ದರೆ ಇಬ್ಬರೂ ಒಂದಾಗಿ ಮೊದಲು ಜಿಲ್ಲಾ ಕೇಂದ್ರದಲ್ಲ್ಲಿರುವ ಕಚೇರಿಗಳನ್ನು ತಾಲೂಕಿಗೆ ತರುವ ಬಗ್ಗೆ ಪ್ರಯತ್ನ ಮಾಡಲಿ. ಆ ಮೂಲಕ ತಾಲೂಕಿನ ಜನರು ಕಚೇರಿಗಾಗಿ ಜಿಲ್ಲಾ ಕೇಂದ್ರಕ್ಕೆ ಅಲೆಯುವುದನ್ನು ತಪ್ಪಿಸಲಿ.
ಹಾವಪ್ಪ ದ್ಯಾಡೆ, ಯುವ ಹೋರಾಟಗಾರ

ಎರಡೂ ತಾಲೂಕು ಹೋರಾಟ ಸಮಿತಿಯ ಸದಸ್ಯರು ತಮ್ಮ ಹೋರಾಟವನ್ನು ನಂತರ ಇಟ್ಟಿಕೊಳ್ಳಲಿ. ಮೊದಲು ಜಿಲ್ಲಾ ಕೇಂದ್ರದಲ್ಲಿರುವ ಕಚೇರಿಗಳನ್ನು ತಾಲೂಕಿಗೆ ತರುವ ಪ್ರಯತ್ನ ಮಾಡಲಿ. ಅವರೊಂದಿಗೆ ನಾವು ಸಹಕಾರ ನೀಡುತ್ತವೆ.
ಅಮರ ಔರಾದೆ, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next