ರವೀಂದ್ರ ಮುಕ್ತೇದಾರ
ಔರಾದ: ಗಡಿ ತಾಲೂಕಿನಲ್ಲಿ ರೈತರು ಬೆಳೆಯುವ ತರಕಾರಿಗೆ ಸರಿಯಾದ ಬೆಲೆ ಸಿಗದಿರುವ ಕಾರಣದಿಂದ ನೆರೆ ರಾಜ್ಯದ ತರಕಾರಿ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇದು ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ತರಕಾರಿ ಬೆಳೆಯುವ ರೈತರ ಪ್ರತಿ ವರ್ಷದ ಅಸಹಾಯಕತೆಯಾಗಿದೆ.
ಔರಾದ ತಾಲೂಕು ಕೇಂದ್ರದಲ್ಲಿ ಸರ್ಕಾರದಿಂದ ತರಕಾರಿ ಮಾರುಕಟ್ಟೆಯ ಉತ್ತಮ ಕಟ್ಟಡ ನಿರ್ಮಿಸಲಾಗಿದೆ. ಆದರೆ ರೈತರು ಬೆಳೆಯುವ ತರಕಾರಿಗೆ ಮಾತ್ರ ಉತ್ತಮ ಬೆಲೆ ಸಿಗುತ್ತಿಲ್ಲ. ಹಾಗೂ ರೈತರ ಬೆಳೆಗೆ ವ್ಯಾಪಾರಿಗಳಿಂದ ನಗದು ಹಣ ತಕ್ಷಣ ಸಿಗದ ಹಿನ್ನೆಲೆಯಲ್ಲಿ ನೆರೆ ರಾಜ್ಯಕ್ಕೆ ಹೋಗಿ ತರಕಾರಿ ಮಾರುವ ಪರಿಸ್ಥಿತಿ ಇದೆ.
ಬೆಲೆಯಲ್ಲಿ ಭಾರಿ ವ್ಯತ್ಯಾಸ: ಔರಾದ ತರಕಾರಿ ಮಾರುಕಟ್ಟೆಯಲ್ಲಿ ಹಸಿ ಮೆಣಸಿನಕಾಯಿಯನ್ನು ಮಾರಾಟಕ್ಕೆ ತಂದರೆ ಪ್ರತಿ ಕೆಜಿಗೆ 30 ರೂಪಾಯಿ ಬೆಲೆ ಸಿಗುತ್ತಿದೆ. ಆದರೆ ಅದೇ ಮಹಾರಾಷ್ಟ್ರದ ದೇಗಲೂರ ಮಾರುಕಟ್ಟೆಯಲ್ಲಿ 80 ರೂ. ಪ್ರತಿ ಕೆಜಿ ದರದಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ರೈತರು ದೇಗಲೂರ, ಉದಗೀರ ಮತ್ತು ತೆಲಂಗಾಣದ ಜಹಿರಾಬಾದ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ.
ಅಲ್ಲದೇ ಪಟ್ಟಣದ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಿದ ರೈತರಿಗೆ ವ್ಯಪಾರಿಗಳಿಂದ ಒಂದು ವಾರದ ಬಳಿಕವೇ ಹಣ ಸಿಗುತ್ತದೆ. ರೈತರಿಂದ ತೆರಿಗೆ ಹಾಗೂ ಹಮಾಲಿ ಚಾರ್ಜ್ ಎಂದು ಬಿಳಿ ಹಾಳೆಯಲ್ಲಿ ಮೋಡಿ ಭಾಷೆಯಲ್ಲಿ ಬರೆದು ರೈತರಿಗೆ ವ್ಯಾಪಾರಿಗಳು ರಶೀದಿ ನೀಡುತ್ತಾರೆ. ಆದರೆ ನೆರೆ ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟವಾದ ಗಂಟೆಯಲ್ಲಿ ರೈತರ ಕೈಗೆ ಹಣ ಸಿಗುತ್ತದೆ. ಇದರಿಂದ ರೈತರು ತಾಲೂಕಿನಲ್ಲಿ ತರಕಾರಿ ಬೆಳೆದು ನೆರೆ ರಾಜ್ಯಕ್ಕೆ ಹೋಗಿ ಮಾರಾಟ ಮಾಡುವ ಸ್ಥಿತಿ ಬಂದಿದೆ. ನೆರೆ ರಾಜ್ಯದ ವ್ಯಾಪಾರಿಗಳಂತೆ ನಮ್ಮ ತಾಲೂಕಿನ ವ್ಯಾಪಾರಿಗಳು ಕೂಡ ರೈತರಿಗ ಗಂಟೆಯಲ್ಲಿ ಹಣ ನೀಡಲು ಮುಂದಾಗಬೇಕು. ಆಗ ಮಾತ್ರ ಇನ್ನಷ್ಟು ರೈತರು ತೋಟಗಾರಿಕೆ ಬೆಳೆಯ ಮೊರೆ ಹೋಗಲು ಸಾಧ್ಯವಾಗುತ್ತದೆ.
ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ತಾಲೂಕಿನಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲವೆಂದು ನಿರಾಶೆಯಾಗಿ ಕೆಲವರು ತರಕಾರಿ ಬೆಳೆಯುವುದನ್ನೇ ಬಿಟ್ಟರೆ ಇನ್ನುಳಿದ ಕೆಲವರು ನೆರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೊಲದಲ್ಲಿ ಬೆಳೆ ಬೆಳೆಯುವಾಗ ಕಷ್ಟ ಪಡಬೇಕು. ಅದನ್ನು ನೆರೆ ರಾಜ್ಯಕ್ಕೆ ಹೋಗಿ ಮಾರಾಟ ಮಾಡಿ ಬರುವ ತನಕವೂ ಕಷ್ಟ ಪಡಬೇಕು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಹಾಗೂ ಅಧ್ಯಕ್ಷರಿಗೆ ನಮ್ಮ ರೈತರ ಸಮಸ್ಯಗೆ ಸ್ಪಂದಿಸುವ ಮನಸ್ಸು ಯಾಕಿಲ್ಲ ಎಂಬುದು ರೈತರ ಪ್ರಶ್ನೆ.
ತಾಲೂಕು ಕೇಂದ್ರದಲ್ಲಿರುವ ತರಕಾರಿ ಮಾರುಕಟ್ಟೆ ಸುಧಾರಣೆಗಾಗಿ ಸರ್ಕಾರ ಪ್ರತಿವರ್ಷ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಆದರೆ ಅದರಿಂದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಒಳ್ಳೆಯದಾಗುತ್ತಿದೆ. ನಮ್ಮ ರೈತರಿಗೆ ಮಾತ್ರ ಯಾವುದೇ ಲಾಭವಾಗುತ್ತಿಲ್ಲ. ಸರ್ಕಾರ ಹಾಗೂ ಸಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕಚೇರಿಯಿಂದ ಹೊರಗೆ ಬಂದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನಗದು ರೂಪದ ವ್ಯವಹಾರ ಮಾಡುವ ವ್ಯವಸ್ಥೆ ಮಾಡಬೇಕಾಗಿದೆ.