Advertisement

ಚವ್ಹಾಣಗೆ ಮಂತ್ರಿ ಪ್ರಭು ಪಟ್ಟ

10:06 AM Aug 21, 2019 | Naveen |

ಔರಾದ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರ ಪ್ಪನವರು ಸಚಿವ ಸಂಪುಟದಲ್ಲಿ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರಭು ಚವ್ಹಾಣ ಅವರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ಗಡಿ ಜಿಲ್ಲೆ ಬೀದರಗೆ ಪ್ರಾತಿನಿಧ್ಯ ನೀಡಿದ್ದಾರೆ.

Advertisement

ಬಡ ಕೃಷಿ ಕೂಲಿ ಕಾರ್ಮಿಕರ ಕುಟುಂಬದಲ್ಲಿನ ಜನಿಸಿದ ಪ್ರಭು ಚವ್ಹಾಣ ಉಪಜೀವನಕ್ಕಾಗಿ ನೆರೆಯ ಮಹಾರಾಷ್ಟ್ರದ ಉದಗೀರ ಮತ್ತು ಮುಂಬೈ ನಗರದಲ್ಲಿ ಕೆಲಸ ಮಾಡಿಕೊಂಡು ಹಂತ ಹಂತವಾಗಿ ಮೇಲೆ ಬಂದವರು.

ಮಹಾರಾಷ್ಟ್ರದ ಉದಗೀರ ತಾಲೂಕು ಕೇಂದ್ರಸ್ಥಾನದಲ್ಲಿರುವ ಅಜಂಟಾ ಹೋಟೆಲ್ನಲ್ಲಿ ಎರಡು ವರ್ಷಗಳ ಕಾಲ ಸರ್ವರ್‌ ಆಗಿಯೂ ಕೆಲಸ ಮಾಡಿದ ಪ್ರಭು ಅವರು ನಂತರ ಮುಂಬೈಗೆ ಹೋಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದರು. ನಂತರ ಗೋಪಿನಾಥ ಮುಂಡೆ ಅವರ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ ಅವರು ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರು. ಹಂತ ಹಂತವಾಗಿ ಬೆಳೆದರು. ಮುಂಬೈನಲ್ಲಿ ಠಾಣೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ, ಪಕ್ಷ ಸಂಘಟಿಸುವ ಮೂಲಕ ಸೈಎನಿಸಿಕೊಂಡರು. ರಾಜಕೀಯದಲ್ಲಿ ಅವರು ಬೆಳೆದು ಬಂದ ರೀತಿ ಬಲು ಸೋಜಿಗ.

ಕರ್ನಾಟಕ ರಾಜಕಾರಣಕ್ಕೆ ಎಂಟ್ರಿ: ನಂತರ ಕರ್ನಾಟಕ ರಾಜಕೀಯಕ್ಕೆ ಎಂಟ್ರಿ ನೀಡಿದರು. 2008ರಲ್ಲಿ ಔರಾದ ಮೀಸಲು ವಿಧಾನಸಭೆ ಕ್ಷೇತ್ರವಾಗಿ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಬಿಜೆಪಿಯ ಅಂದಿನ ಶಾಸಕ ಗುಂಡಪ್ಪ ವಕೀಲ ಅವರ ಸಹಕಾರದಿಂದ ಬಿಜೆಪಿ ಪಕ್ಷದಿಂದ ಟಿಕೇಟ್ ಪಡೆದು ಪ್ರಥಮ ಬಾರಿ ಶಾಸಕರಾಗಿ ಆಯ್ಕೆಯಾದರು. ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ.

ಧನಾಜಿ ವಿರುದ್ಧ ಭಾರೀ ಗೆಲುವು: 2009 ಕರ್ನಾಟಕ ರಾಜಕೀಯ ಬಗ್ಗೆ ಏನೂ ತಿಳಿಯದ ಸಂದರ್ಭದಲ್ಲಿ ಮಾಜಿ ಶಾಸಕ ಗುಂಡಪ್ಪ ವಕೀಲರು ಪ್ರಭು ಅವರನ್ನು ಕರೆ ತಂದರು. ಗುಂಡಪ್ಪ ವಕೀಲರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಪಕ್ಷ ಸೇರಿದರು. ಆಗ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂತ 56,964 ಮತಗಳ ವಿಜಯ ಸಾಧಿಸಿದರು. 2014ರ ಚುನಾವಣೆಯಲ್ಲಿ ತಾಲೂಕಿನಲ್ಲಿ ಅತಿ ಬಲಿಷ್ಠ ಹಾಗೂ ಸಹಕಾರ ಕ್ಷೇತ್ರದ ಭೀಷ್ಮನೆಂದೇ ಹೆಗ್ಗಳಿಕೆ ಪಡೆದ ದಿ| ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಬೆಂಬಲಿಗ ಕೆಜೆಪಿಯ ಧನಾಜಿ ಜಾಧವ ವಿರುದ್ಧ ಸ್ಪರ್ಧಿಸಿ 32 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

Advertisement

ಮತದಾರರು ಕೈ ಹಿಡಿದರು: 2018ರ ಚುನಾವಣೆಯಲ್ಲೂ ಬೀದರ ಬಿಜೆಪಿ ಸಂಸದ ಭಗವಂತ ಖೂಬಾ ಕೆಜೆಪಿ ಮೂಲಕ ಧನಾಜಿ ಜಾಧವಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದರು. ಬಿ.ಎಸ್‌. ಯಡಿಯೂರಪ್ಪ ತಾಲೂಕಿಗೆ ಚುನಾವಣೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಸಂಸದರ ಬೆಂಬಲಿಗರು ಪಟ್ಟಣದ ಉಪ ಬಂಧಿಖಾನೆ ಬಳಿ, ಪ್ರಭು ಚವ್ಹಾಣ ಬೆಂಬಲಿಗರು ಅಮರೇಶ್ವರ ಕಾಲೇಜು ಬಳಿ ಪೆಂಡಾಲ ಹಾಕಿದ್ದರು. ಆಗ ಯಡಿಯೂರಪ್ಪನವರು ಪಕ್ಷ ವಿರೋಧಿಗಳನ್ನು ಉಚ್ಛಾಟನೆ ಮಾಡಲಾಗುತ್ತದೆ ಎಂದು ಖಡಕ್‌ ಸಂದೇಶ ನೀಡಿ ಶಾಸಕ-ಸಂಸದರನ್ನು ಒಂದೇ ವೇದಿಕೆಯಲ್ಲಿ ಕುಳ್ಳರಿಸಿದರು. ಎದುರಾಳಿ ಪಕ್ಷದ ಮುಖಂಡರ ಆರೋಪ ಹಾಗೂ ರಾಜಕೀಯ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದ ಪ್ರಭು ಅವರು 11,800 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ನಂಬಿದ ನಾಯಕರು ಕೈ ಕೊಟ್ಟರೂ ಮತದಾರರು ಮಾತ್ರ ಕೈ ಹಿಡಿದು ಬೆಂಬಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next