Advertisement

ಶಾಸಕ ಪ್ರಭು ಚವ್ಹಾಣಗೆ ಸಿಗುತ್ತಾ ಮಂತ್ರಿ ಭಾಗ್ಯ?

12:55 PM Jul 26, 2019 | Naveen |

ಔರಾದ: ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ರಾಜ್ಯ ಮೈತ್ರಿ ಸರ್ಕಾರ ಮುರಿದು ಬಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಮಲ ಪಕ್ಷದ ಮುಖಂಡರು ಅಧಿಕಾರ ಚುಕ್ಕಾಣಿ ಹಿಡಿಯಬೇಕೆನ್ನುವ ತವಕದಲ್ಲಿ ಇರುವಾಗಲೇ ಬಿಎಸ್‌ವೈ ಆಪ್ತವಲಯದಲ್ಲಿ ಗುರುತಿಸಿಕೊಂಡ ಬೀದರ ಜಿಲ್ಲೆಯ ಬಿಜೆಪಿ ಶಾಸಕ ಪ್ರಭು ಚವ್ಹಾಣಗೆ ಮಂತ್ರಿ ಭಾಗ್ಯ ಸಿಗುತ್ತದೆಯೇ ಎನ್ನುವ ಲೆಕ್ಕಾಚಾರ ಶುರುವಾಗಿದೆ.

Advertisement

ಬೀದರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಏಕೈಕ ಹಾಗೂ ಸತತವಾಗಿ ಮೂರನೇ ಬಾರಿ ಆಯ್ಕೆಯಾದ ಶಾಸಕ ಪ್ರಭು ಚವ್ಹಾಣ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಮುಖಂಡರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ನಾಯಕರಾಗಿದ್ದಾರೆ.

ಬಿಎಸ್‌ವೈ ಆಪ್ತ: ಶಾಸಕ ಪ್ರಭು ಚವ್ಹಾಣ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಆಪ್ತರಾಗಿದ್ದಾರೆ. ಅಲ್ಲದೆ ಪಕ್ಷದ ನಿಷ್ಠಾವಂತ ಶಾಸಕನಾಗಿ ಗಡಿ ತಾಲೂಕು ಹಾಗೂ ಬೀದರ ಜಿಲ್ಲೆಯಲ್ಲಿ ಪಕ್ಷ ಬಲಪಡಿಸಲು ನಿಸ್ವಾರ್ಥವಾಗಿ ಕೆಲಸ ಮಾಡಿದ್ದರಿಂದ ನೆರೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಜವಾಬ್ದಾರಿ ನೀಡಿದ್ದರಿಂದ ಉದಗೀರ ಶಾಸಕ ಸುಧಾಕರ ಭಾಲೇರಾವ, ದೇಗಲೂರ ಶಾಸಕ ಸುಭಾಷ ಸಾಮಣೆ, ಮುಖೇಡ ಶಾಸಕ ತುಷಾರ ರಾಠೊಡ ಗೆಲುವಿಗೆ ಶಕ್ತಿ ಮೀರಿ ದುಡಿದಿದ್ದಾರೆ. ಅದರಂತೆ ತೆಲಂಗಾಣ ರಾಜ್ಯದಲ್ಲಿನ ಆರು ವಿಧಾನಸಭೆ ಕ್ಷೇತ್ರಗಳ ಜವಾಬ್ದಾರಿ ಚವ್ಹಾಣ ಹೆಗಲಿಗೆ ವರಿಷ್ಠರು ಹಾಕಿದ್ದಾಗ ಶಕ್ತಿ ಮೀರಿ ಶ್ರಮಿಸಿದವರು ಚವ್ಹಾಣ.

ತಾಂಡಾದಲ್ಲಿಯೇ ವಾಸ: ಚವ್ಹಾಣ ಮೂರನೇ ಬಾರಿಗೆ ಶಾಸಕರಾಗಿದ್ದರೂ ಕೂಡ ತಾಲೂಕು ಕೇಂದ್ರ ಸ್ಥಾನದಲ್ಲಿ ವಾಸವಾಗದೇ ತಮ್ಮ ತಾಂಡಾದಲ್ಲಿಯೇ ವಾಸವಾಗಿ ಸಾರ್ವಜನಿಕ ಸಮಸ್ಯೆ ಆಲಿಸಿ ಬಗೆಹರಿಸುತ್ತಿದ್ದಾರೆ.

ಕನ್ನಡ ಬರುತ್ತೆ: ಈ ಹಿಂದೆ ಔರಾದ ಶಾಸಕ ಪ್ರಭು ಚವ್ಹಾಣಗೆ ಕನ್ನಡ ಮಾತಾಡಲು ಬರಲ್ಲ ಎನ್ನುವ ಮಾತಗಳು ಕೇಳಿ ಬರುತ್ತಿತು.್ತ ಆದರೆ ಕಳೆದ ಆರು ವರ್ಷದಿಂದ ತಾಲೂಕಿನ ಜನಸಾಮಾನ್ಯರು, ಅಧಿಕಾರಿಗಳೊಂದಿಗೆ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ಸಭೆ-ಸಮಾರಂಭ, ಕೆಡಿಪಿ ಮತ್ತು ಸಾಮಾನ್ಯ ಸಭೆಯಲ್ಲಿ ಮಾತ್ರ ಭಾಷೆಯಲ್ಲಿ ಮಾತಾಡುತ್ತಿದ್ದಾರೆ. ಗಡಿ ತಾಲೂಕಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಬೆನ್ನೆಲುಬಾಗಿ ನಿಲ್ಲುತ್ತಾರೆ. ಅದರಂತೆ ಕನ್ನಡ ರಾಜ್ಯೋತ್ಸವದಂದು ಐದು ಸಾವಿರ ವಿವಿಧ ಸಾಹಿತಿಗಳ ಪುಸ್ತಕ ಹಂಚುವ ಮೂಲಕ ಕನ್ನಡದ ಪ್ರೀತಿಗೆ ಸಾಕ್ಷಿಯಾಗಿದ್ದಾರೆ.

Advertisement

ಗ್ರಾಮ ಸಂಚಾರ ಕಾರ್ಯಕ್ರಮ ರೂವಾರಿ: ಶಾಸಕ ಪ್ರಭು ಚವ್ಹಾಣ ತಾಲೂಕಿನ ಅಭಿವೃದ್ಧಿ ಕನಸುಗಾರ. ಕಳೆದ ಹನ್ನೆರಡು ವರ್ಷಗಳಿಂದ ಪ್ರತಿ ವರ್ಷ ಬೇಸಿಗೆ ಕಾಲ ಆರಂಭವಾಗುವ ಮುನ್ನ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೆ ಇಲಾಖಾವಾರು ಅಧಿಕಾರಿಗಳನ್ನು ತಮ್ಮ ಜತೆ ಕರೆದುಕೊಂಡು ಗ್ರಾಮ ಸಂಚಾರ ಎನ್ನುವ ವಿನೂತನ ಕಾರ್ಯಕ್ರಮವನ್ನು ತಾಲೂಕಿನಲ್ಲಿ ಮೊದಲ ಬಾರಿಗೆ ಆರಂಭಿಸಿ ಜನರ ಸಮಸ್ಯೆ ಬಗೆಹರಿಸುವ ವಿನೂತನ ಕಾರ್ಯಕ್ರಮದ ರೂವಾರಿಯಾಗಿದ್ದಾರೆ.

ಶಾಸಕ ಪ್ರಭು ಚವ್ಹಾಣ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ನಾಡಿನಲ್ಲಿ ಬಿಜೆಪಿ ಸರ್ಕಾರವಿತ್ತು. ಆಗ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿವೆ. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಗಡಿ ತಾಲೂಕಿನ ಶಾಸಕರಿಗೆ ಮಂತ್ರಿ ಸ್ಥಾನ ಸಿಕ್ಕರೆ ಈ ಭಾಗದ ಸಂರ್ಪೂಣ ಅಭಿವೃದ್ಧಿಯಾಗುತ್ತದೆ. ದಿ.ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ನಂತರ ತಾಲೂಕಿನ ಶಾಸಕರಿಗೆ ಮಂತ್ರಿಗಿರಿ ಸಿಕ್ಕಿಲ್ಲ ಎನ್ನುವುದು ಈ ಭಾಗದ ಜನರ ಮಾತು.

ಸತತ ಮೂರನೇ ಬಾರಿ ಆಯ್ಕೆಯಾಗಿ ಜನರ ಸೇವಕನಾಗಿ ನಿಸ್ವಾರ್ಥ ಹಾಗೂ ಬಿಎಸ್‌ವೈ ಸಲಹೆಯಂತೆ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಮಂತ್ರಿ ಸ್ಥಾನ ಸಿಕ್ಕರೆ ಗಡಿ ತಾಲೂಕು ಸಂಪೂರ್ಣ ಅಭಿವೃದ್ಧಿಯಾಗುತ್ತದೆ ಎನ್ನುವುದು ಕಾರ್ಯಕರ್ತರ ಮಾತಾಗಿದೆ. ಬಿಎಸ್‌ವೈ ಹಾಗೂ ಪಕ್ಷದ ವರಿಷ್ಠರ ಆದೇಶದಂತೆ ಕೆಲಸ ಮಾಡುತ್ತೇನೆ.
ಪ್ರಭು ಚವ್ಹಾಣ, ಔರಾದ ಶಾಸಕ

ಸತತವಾಗಿ ತಾಲೂಕಿನಲ್ಲಿ ಮೂರನೇ ಬಾರಿಗೆ ಆಯ್ಕೆಯಾದ ಬಿಜೆಪಿ ಶಾಸಕ ಪ್ರಭು ಚವ್ಹಾಣ ಪಕ್ಷನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಬಿಎಸ್‌ವೈ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಈ ಭಾಗ ಅಭಿವೃದ್ಧಿ ಮಾಡಲು ಪಕ್ಷದ ವರಿಷ್ಠರು ಮುಂದಾಗಬೇಕು.
ವಸಂತ ಬಿರಾದರ, ಜಿಪಂ ಮಾಜಿ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next